

ಚೆನ್ನೈ: ಖಾಸಗಿ ಶಾಲೆಗಳು ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಇನ್ನು ಮುಂದೆ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು ಸರ್ಕಾರ ನಿಗದಿಪಡಿಸಿರುವ ಬೋಧನಾ ಶುಲ್ಕದ (Tuition Fee) ವಿವರಗಳನ್ನು ಶಾಲೆಯ ನೋಟಿಸ್ ಬೋರ್ಡ್‌ನಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಖಡಕ್ ಆದೇಶ ಹೊರಡಿಸಿದೆ.
ಜೂನ್ 4ರಿಂದ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಪುನರಾರಂಭವಾಗಲಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದೆ.
ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ಯಾವುದೇ ಶಾಲೆ ವಸೂಲಿ ಮಾಡಿದರೆ, ಅಂತಹ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ತಮಿಳುನಾಡಿನಲ್ಲಿ 13 ಸಾವಿರಕ್ಕೂ ಹೆಚ್ಚು ಮಾನ್ಯತೆ ಪಡೆದ ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಪೋಷಕರಿಂದ ಯಾವುದೇ ರೀತಿಯ ‘ಗುಪ್ತ ಪ್ರವೇಶ ಶುಲ್ಕ’ ಅಥವಾ ಹೆಚ್ಚುವರಿ ಹಣ ಸಂಗ್ರಹಿಸದಂತೆ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈ ನಿಯಮವು ತಮಿಳುನಾಡು ಶಾಲೆಗಳ ಶುಲ್ಕ ನಿಯಂತ್ರಣ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಜಾರಿಯಲ್ಲಿದ್ದು, ಹಿರಿಯ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿಯು ಶಾಲೆಗಳ ಶುಲ್ಕವನ್ನು ನಿಗದಿಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಯಾವುದೇ ಶಾಲೆ ನಿಯಮ ಉಲ್ಲಂಘಿಸಿ ಅಧಿಕ ಶುಲ್ಕ ವಸೂಲಿ ಮಾಡಿದರೆ ಪೋಷಕರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಖಾಸಗಿ ಶಾಲೆಗಳ ಶುಲ್ಕದ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸುವ ಮೂಲಕ ಪೋಷಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಸರ್ಕಾರ ಈ ಕ್ರಮ ಕೈಗೊಂಡಿದೆ.
Advertisement