

ಅಹಮದಾಬಾದ್: ಫುಟ್‌ಪಾತ್‌ನಲ್ಲಿ ಮಲಗಿದ್ದ ಕುಟುಂಬದ ಮೇಲೆ ವೇಗವಾಗಿ ಬಂದ ಟೊಯೋಟಾ ಫಾರ್ಚೂನರ್ ಕಾರೊಂದು ಹರಿದ ಪರಿಣಾಮ ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.
ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣ ಎನ್ನಲಾದ ಕಾರಿನಲ್ಲಿ ಆರು ಬಿಯರ್ ಕ್ಯಾನ್‌ಗಳು ಪತ್ತೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಅಹಮದಾಬಾದ್‌ನ ನಿಕೋಲ್ ಪ್ರದೇಶದಲ್ಲಿರುವ ದೇವಶ್ಯ ಶಾಲೆಯ ಸಮೀಪ ಈ ಅಪಘಾತ ಸಂಭವಿಸಿದೆ.
ರಸ್ತೆಬದಿಯ ಫುಟ್‌ಪಾತ್‌ನಲ್ಲಿ ಕುಟುಂಬವೊಂದು ಮಲಗಿದ್ದಾಗ ನಿಯಂತ್ರಣ ತಪ್ಪಿದ ಫಾರ್ಚೂನರ್ ಕಾರು ವೇಗವಾಗಿ ನುಗ್ಗಿದೆ.
ಕಾರಿನ ಅಡಿಗೆ ಸಿಲುಕಿದ 30 ವರ್ಷದ ಪೂನಂ ಬೆನ್ ನಾಗವಾಡಿಯಾ ಮತ್ತು ಅವರ 15 ವರ್ಷದ ಪುತ್ರ ಸಾಗರ್ ನಾಗವಾಡಿಯಾ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕುಟುಂಬದ ಮತ್ತಿಬ್ಬರಾದ 34 ವರ್ಷದ ಕಾರ್ತಿಕ್ ವಸೋಯಾ ಮತ್ತು ಅವರ ಪತ್ನಿ ಸ್ನೇಹಲ್ ಬೆನ್ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ 36 ವರ್ಷದ ಚಾಲಕ ವಿರಾಲ್ ಭಾಯ್ ಸಾವ್‌ಜಿಭಾಯ್ ಚೌಧರಿಯನ್ನು ನಿಕೋಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅಪಘಾತಕ್ಕೀಡಾದ ಕಾರನ್ನು ಪರಿಶೀಲಿಸಿದಾಗ ಒಳಭಾಗದಲ್ಲಿ ಆರು ಬಿಯರ್ ಕ್ಯಾನ್‌ಗಳು ಪತ್ತೆಯಾಗಿದ್ದು, ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದನೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆತನ ರಕ್ತದ ಮಾದರಿಯನ್ನು ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.
ಅಪಘಾತಕ್ಕೀಡಾದ ಕಾರನ್ನು ಪರಿಶೀಲಿಸಿದಾಗ ಒಳಭಾಗದಲ್ಲಿ ಆರು ಬಿಯರ್ ಕ್ಯಾನ್‌ಗಳು ಪತ್ತೆಯಾಗಿದ್ದು, ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದನೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆತನ ರಕ್ತದ ಮಾದರಿಯನ್ನು ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಸಂಬಂಧ ಆರೋಪಿ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆಗೆ ಸಮನಲ್ಲದ ನರಹತ್ಯೆ, ನಿರ್ಲಕ್ಷ್ಯದ ಚಾಲನೆ, ಅತಿವೇಗ ಮತ್ತು ಸಾರ್ವಜನಿಕರಿಗೆ ಗಂಭೀರ ಗಾಯ ಉಂಟುಮಾಡಿದ ಆರೋಪಗಳನ್ನು ದಾಖಲಿಸಲಾಗಿದೆ.
ಮೋಟಾರು ವಾಹನ ಕಾಯ್ದೆಯಡಿ ಅಪಾಯಕಾರಿ ಚಾಲನೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪಗಳನ್ನೂ ಸೇರಿಸಲಾಗಿದೆ.
ಗುಜರಾತ್‌ನಲ್ಲಿ ಮದ್ಯ ಮಾರಾಟ ಮತ್ತು ಸೇವನೆ ನಿಷೇಧವಿರುವ ಹಿನ್ನೆಲೆಯಲ್ಲಿ ಕಾರಿನಲ್ಲಿ ಬಿಯರ್ ಕ್ಯಾನ್‌ಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮದ್ಯಪಾನ ನಿಷೇಧ ಕಾಯ್ದೆಯಡಿಯೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅಪಘಾತದ ಸಮಯದಲ್ಲಿ ಕಾರಿನ ವೇಗ ಎಷ್ಟಿತ್ತು ಮತ್ತು ಘಟನೆ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.