

ನವದೆಹಲಿ: 24 ಗಂಟೆಗಳೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಿಯನ್ನು ಹಾಜರುಪಡಿಸಬೇಕು ಎಂಬ ಗಡುವಿನ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅರೆಸ್ಟ್ ಅಲ್ಲ, ವಶಕ್ಕೆ ಪಡೆದ ಕ್ಷಣದಿಂದಲೇ deadline ಆರಂಭ ಎಂದು ಹೇಳಿದೆ.
ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಅವಧಿ ಲೆಕ್ಕ ಹಾಕಬೇಕು. ಅಧಿಕೃತವಾಗಿ ಬಂಧನ ದಾಖಲಿಸಿದ ಸಮಯದಿಂದಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬಂಧಿತ ವ್ಯಕ್ತಿಯನ್ನು 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು ಎಂಬ ಸಾಂವಿಧಾನಿಕ ನಿಯಮವನ್ನು ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠ ಈ ಮಹತ್ವದ ತೀರ್ಪು ನೀಡಿದೆ. ಸಂವಿಧಾನದ 22(2)ನೇ ವಿಧಿಯನ್ನು ವ್ಯಾಖ್ಯಾನಿಸುವಾಗ 'ಬಂಧನ' ಮತ್ತು 'ವಶಕ್ಕೆ ಪಡೆಯುವುದು' ಎಂಬುದರ ನಡುವೆ ಕೃತಕ ವ್ಯತ್ಯಾಸ ಮಾಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಪೊಲೀಸರು ವ್ಯಕ್ತಿಯನ್ನು ಮೊದಲು ವಶಕ್ಕೆ ಪಡೆದು, ನಂತರ ಅಧಿಕೃತವಾಗಿ ಬಂಧನ ದಾಖಲಿಸುವ ಮೂಲಕ 24 ಗಂಟೆಗಳ ಲೆಕ್ಕಾಚಾರವನ್ನು ಮುಂದೂಡಲು ಅವಕಾಶ ನೀಡಿದರೆ ಅದು ಸಂವಿಧಾನ ನೀಡಿರುವ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
"24 ಗಂಟೆಗಳ ಅವಧಿ ಅಧಿಕೃತ ಬಂಧನ ದಾಖಲಿಸಿದ ಸಮಯದಿಂದ ಮಾತ್ರ ಆರಂಭವಾಗುತ್ತದೆ ಎಂಬ ಅಭಿಪ್ರಾಯವು ಸಂವಿಧಾನದ 22(2)ನೇ ವಿಧಿ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 56ರ ಆಶಯಕ್ಕೆ ವಿರುದ್ಧವಾಗಿದೆ" ಎಂದು ಪೀಠ ಹೇಳಿದೆ.
ಯಾವ ಸಮಯವನ್ನು ಹೊರತುಪಡಿಸಬಹುದು?
ಬಂಧನದ ಸ್ಥಳದಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕರೆದೊಯ್ಯಲು ಬೇಕಾಗುವ ಸಮಂಜಸವಾದ ಪ್ರಯಾಣದ ಸಮಯವನ್ನು ಮಾತ್ರ 24 ಗಂಟೆಗಳ ಲೆಕ್ಕಾಚಾರದಿಂದ ಹೊರತುಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪೊಲೀಸರು ಅಧಿಕೃತ ಬಂಧನ ದಾಖಲಿಸುವ ಮೊದಲು ವಿಚಾರಣೆ, ತನಿಖೆ, ಶೋಧ ಅಥವಾ ವಸ್ತುಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕಳೆಯುವ ಸಮಯವನ್ನು 24 ಗಂಟೆಗಳ ಲೆಕ್ಕದಿಂದ ಹೊರಗಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸಂವಿಧಾನದ 22(2)ನೇ ವಿಧಿಯ ಪ್ರಕಾರ, ಬಂಧನಕ್ಕೊಳಗಾಗಿ ಪೊಲೀಸ್ ವಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಬಂಧನದ ಸ್ಥಳದಿಂದ ನ್ಯಾಯಾಲಯಕ್ಕೆ ಪ್ರಯಾಣಿಸಲು ಬೇಕಾಗುವ ಸಮಯ ಹೊರತುಪಡಿಸಿ 24 ಗಂಟೆಗಳ ಒಳಗೆ ಹತ್ತಿರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು.
24 ಗಂಟೆ ಮೀರಿದರೆ ಬಿಡುಗಡೆ ಮಾಡಬೇಕು!
ನಿಗದಿತ 24 ಗಂಟೆಗಳ ಅವಧಿ ಮೀರಿದರೂ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದಿದ್ದರೆ ಅಂತಹ ವ್ಯಕ್ತಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ, 24 ಗಂಟೆಗಳ ಸಾಂವಿಧಾನಿಕ ಮಿತಿಯೊಳಗಿದ್ದರೂ ವ್ಯಕ್ತಿಯನ್ನು ಅನಗತ್ಯವಾಗಿ ಹೆಚ್ಚು ಸಮಯ ವಶದಲ್ಲಿಡಬಾರದು. ಬಂಧನದ ಅವಧಿ ಸಮಂಜಸವಾಗಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಮ್ಯಾಜಿಸ್ಟ್ರೇಟ್ಗಳಿಗೂ ಮಹತ್ವದ ಸೂಚನೆ
ಬಂಧಿತ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮ್ಯಾಜಿಸ್ಟ್ರೇಟ್ಗಳು ಬಂಧನದ ನಿಜವಾದ ದಿನಾಂಕ ಮತ್ತು ಸಮಯವನ್ನು ದಾಖಲಿಸಬೇಕು. ಅಲ್ಲದೆ, ಸಂವಿಧಾನದ ನಿಯಮ ಪಾಲನೆಯಾಗಿದೆಯೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ವ್ಯಕ್ತಿಯನ್ನು ಎಷ್ಟು ಸಮಯ ವಶದಲ್ಲಿಡಲಾಗಿದೆ ಮತ್ತು ಆ ಅವಧಿ ಪ್ರಕರಣದ ಪರಿಸ್ಥಿತಿಗೆ ಅನುಗುಣವಾಗಿ ಸಮಂಜಸವಾಗಿದೆಯೇ ಎಂಬುದನ್ನೂ ಮ್ಯಾಜಿಸ್ಟ್ರೇಟ್ ಪರಿಶೀಲಿಸಬೇಕು. ಬಂಧನದ ಅವಧಿ ಅನಗತ್ಯವಾಗಿ ಹೆಚ್ಚಾಗಿದೆ ಎಂದು ಕಂಡುಬಂದರೆ ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನಿರಾಕರಿಸುವ ಅಧಿಕಾರವೂ ಮ್ಯಾಜಿಸ್ಟ್ರೇಟ್ಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಈ ಹಿಂದೆ ಒಡಿಶಾ ಹೈಕೋರ್ಟ್ನ ಆರ್ಯಮನ್ ಪಟ್ನಾಯಕ್ ಪ್ರಕರಣ, ಮದ್ರಾಸ್ ಹೈಕೋರ್ಟ್ನ ಕಣ್ಣನ್ ಪ್ರಕರಣ ಮತ್ತು ಕೇರಳ ಹೈಕೋರ್ಟ್ನ ಅರುಣ್ ಕೆ. ಥಾಮಸ್ ಪ್ರಕರಣಗಳಲ್ಲಿ ನೀಡಲಾಗಿದ್ದ ಭಿನ್ನ ಅಭಿಪ್ರಾಯಗಳನ್ನು ಸುಪ್ರೀಂ ಕೋರ್ಟ್ ಒಪ್ಪಿಲ್ಲ. ಅಧಿಕೃತ ಬಂಧನಕ್ಕೂ ಮುನ್ನದ ವಶದ ಅವಧಿಯನ್ನು 24 ಗಂಟೆಗಳ ಲೆಕ್ಕಾಚಾರದಿಂದ ಹೊರಗಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ತೀರ್ಪು ಬಂಧಿತರ ಸಾಂವಿಧಾನಿಕ ಹಕ್ಕುಗಳ ರಕ್ಷಣೆ ಮತ್ತು ಪೊಲೀಸ್ ಬಂಧನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಮಹತ್ವದ್ದಾಗಿದೆ.