ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ: 400ರ ಗಡಿ ತಲುಪಿದ AQI; ವಾಹನಗಳೇ ಮಾಲಿನ್ಯದ ಪ್ರಮುಖ ಮೂಲ ಎಂದ ಸುಪ್ರೀಂಕೋರ್ಟ್, ಕೇಂದ್ರ-ರಾಜ್ಯ ಸರ್ಕಾರಗಳಿಗೆ ತರಾಟೆ..!

ಮಾಲಿನ್ಯ ಬಿಕ್ಕಟ್ಟನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಒಂದು ನಿರ್ದಿಷ್ಟ ಅವಧಿಗೆ ಮಾತ್ರ ನಿರ್ವಹಿಸುತ್ತಿರುವ ರೀತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿದ್ದು, ಇದು ಸಂಪೂರ್ಣ ವೈಫಲ್ಯ ಎಂದು ತರಾಟೆಗೆ ತೆಗೆದುಕೊಂಡಿದೆ.
Delhi poor air quality
ದೆಹಲಿ ವಾಯುಮಾಲಿನ್ಯ.
Updated on: 

ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ (ದೆಹಲಿ-ಎನ್‌ಸಿಆರ್) ವಾಯು ಮಾಲಿನ್ಯದ ಮಟ್ಟವು ಅಪಾಯಕಾರಿ ಸ್ಥಿತಿ ತಲುಪಿದ್ದು, ಇದಕ್ಕೆ ವಾಹನಗಳ ಹೊರಸೂಸುವಿಕೆಯೇ ಪ್ರಮುಖ ಕಾರಣ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಯಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನು ಒಳಗೊಂಡ ಮೂವರು ನ್ಯಾಯಮೂರ್ತಿಗಳ ಪೀಠ, ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಈಗಾಗಲೇ 400ರ ಗಡಿ ದಾಟುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ.

ಮಾಲಿನ್ಯ ಬಿಕ್ಕಟ್ಟನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಒಂದು ನಿರ್ದಿಷ್ಟ ಅವಧಿಗೆ ಮಾತ್ರ ನಿರ್ವಹಿಸುತ್ತಿರುವ ರೀತಿಯನ್ನು ನ್ಯಾಯಪೀಠ ತೀವ್ರವಾಗಿ ಟೀಕಿಸಿದ್ದು, ಇದು "ಸಂಪೂರ್ಣ ವೈಫಲ್ಯ" ಎಂದು ತರಾಟೆಗೆ ತೆಗೆದುಕೊಂಡಿದೆ.

ಪ್ರತಿ ವರ್ಷ ಎದುರಾಗುವ ಈ ವಿಷಕಾರಿ ದಟ್ಟ ಹೊಗೆಯ ಸಮಸ್ಯೆಯನ್ನು ಕೇವಲ ತಾತ್ಕಾಲಿಕ ಕ್ರಮಗಳಿಂದ ಪರಿಹರಿಸಲು ಸಾಧ್ಯವಿಲ್ಲ, ಬದಲಿಗೆ ವರ್ಷಪೂರ್ತಿ ನಿರಂತರ ಪ್ರಯತ್ನಗಳನ್ನು ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿತು.

ದೆಹಲಿ ಮತ್ತು ಎನ್‌ಸಿಆರ್ ನಡುವೆ ಸಂಚರಿಸುವ ಅಪಾರ ಸಂಖ್ಯೆಯ ವಾಹನಗಳೇ ವಾಯುಮಾಲಿನ್ಯದ ಪ್ರಮುಖ ಮೂಲವಾಗಿದೆ ಎಂದು ಅಭಿಪ್ರಾಯಪಟ್ಟಿತು.

ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಪರಿಶೀಲಿಸಲು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ನಾವು ಈ ಬಗ್ಗೆ ನಿರಂತರವಾಗಿ ಮಾತನಾಡುತ್ತೇವೆ, ಕೆಲವೊಮ್ಮೆ ಹೇಳಿಕೆಗಳನ್ನು ನೀಡುತ್ತೇವೆ, ಸಲಹೆಗಳನ್ನೂ ಕೊಡುತ್ತೇವೆ. ಆದರೆ, ಎಕ್ಯೂಐ ಈಗಾಗಲೇ 400ರ ಗಡಿ ಮುಟ್ಟುತ್ತಿದೆ ಎಂದು ಹೇಳಿದರು.

ದೆಹಲಿ ಮತ್ತು ಗಾಜಿಯಾಬಾದ್, ಗ್ರೇಟರ್ ನೋಯ್ಡಾ, ಗುರುಗ್ರಾಮ್ ಹಾಗೂ ಫರಿದಾಬಾದ್ ನಡುವಿನ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಿರುವುದನ್ನು ಪ್ರಸ್ತಾಪಿಸಿದ ನ್ಯಾಯಪೀಠ, ವಾಹನ ದಟ್ಟಣೆಯ ಪ್ರಮಾಣದ ಬಗ್ಗೆ ತುರ್ತಾಗಿ ಗಮನಹರಿಸಬೇಕಿದೆ ಎಂದು ಹೇಳಿದರು.

Delhi poor air quality
ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: 482ಕ್ಕೆ ತಲುಪಿದ ವಾಯು ಗುಣಮಟ್ಟ ಸೂಚಿ; ಪರಿಸ್ಥಿತಿ ಮತ್ತಷ್ಟು ಗಂಭೀರ..!

ದೆಹಲಿಯ ರಸ್ತೆಗಳು ಹಾಗೂ ದೆಹಲಿಯನ್ನು ಎನ್‌ಸಿಆರ್ ಪ್ರದೇಶದೊಂದಿಗೆ ಸಂಪರ್ಕಿಸುವ ರಸ್ತೆಗಳನ್ನು ಗಮನಿಸಿ. ಯಾವುದೇ ರಸ್ತೆಯನ್ನು ನೋಡಿದರೂ ಅಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯನ್ನು ಗಮನಿಸಬಹುದು. ಇದೇ ಪ್ರಮುಖ ಸಮಸ್ಯೆ.

ಇದೇ ವೇಳೆ ವಾಯುಮಾಲಿನ್ಯದಿಂದಾಗಿ ದಿನಗೂಲಿ ಕಾರ್ಮಿಕರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಜನರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆಯೂ ನ್ಯಾಯಾಲಯ ಗಮನ ಸೆಳೆಯಿತು.

ವಾಯುಗುಣಮಟ್ಟ ಹದಗೆಟ್ಟಿದ್ದರೂ ಇವರು ಅನಿವಾರ್ಯವಾಗಿ ಹೊರಾಂಗಣದಲ್ಲಿ ಕೆಲಸ ಮಾಡಬೇಕಾಗಿದೆ. ಹಬ್ಬದ ಋತುವು ಇವರಲ್ಲಿ ಅನೇಕರಿಗೆ ಜೀವನೋಪಾಯಕ್ಕಾಗಿ ಹಣ ಗಳಿಸಲು ಅತ್ಯಂತ ಮಹತ್ವದ ಸಮಯವಾಗಿದೆ ಎಂದು ಹೇಳಿತು.

ಬಳಿಕ ಬೆಳೆ ಕಟಾವಿನ ಬಳಿಕ ಉಳಿಯುವ ಕೂಳೆ ಸುಡುವ ವಿಚಾರವಾಗಿ ಮಾತನಾಡಿದ ನ್ಯಾಯಪೀಠ, ಕೃಷಿ ತ್ಯಾಜ್ಯ ನಿರ್ವಹಿಸಲು ಬೆಂಕಿ ಹಚ್ಚುವ ಬದಲು ಯಂತ್ರೋಪಕರಣಗಳನ್ನು ಬಳಸುವಂತೆ ರೈತರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಒತ್ತಿಹೇಳಿತು.

ನಿಗದಿತ ಮಿತಿಯನ್ನು ಮೀರಿ ಎಕ್ಯೂಐ ಏರಿಕೆಯಾದಾಗ ಎಲ್ಲ ವಯೋಮಾನದ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಮುಚ್ಚಬೇಕು ಅಥವಾ ಹೈಬ್ರಿಡ್ ತರಗತಿಗಳನ್ನು ಪರಿಚಯಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯ ನಡೆಸಿತು. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವಾಗ ತಜ್ಞರ ಅಭಿಪ್ರಾಯವನ್ನು ಪರಿಗಣಿಸುವುದಾಗಿ ನ್ಯಾಯಪೀಠ ತಿಳಿಸಿತು.

ಕೇಂದ್ರ ಸರ್ಕಾರ ಮತ್ತು ಇತರ ಅಧಿಕಾರಿಗಳ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ವಾದ ಮಂಡಿಸಿ, ವಾಯುಮಾಲಿನ್ಯದ ಐದು ಪ್ರಮುಖ ಮೂಲಗಳನ್ನು ನಿಯಂತ್ರಿಸುವ ಪ್ರಸ್ತುತ ನಿಯಮಾವಳಿಗಳ ಕುರಿತು ನ್ಯಾಯಾಲಯಕ್ಕೆ ವಿವರಿಸಿದರು.

ಕೈಗಾರಿಕಾ ಹೊರಸೂಸುವಿಕೆ, ವಾಹನಗಳ ಮಾಲಿನ್ಯ, ಕಟ್ಟಡ ನಿರ್ಮಾಣ ಮತ್ತು ನೆಲಸಮಗೊಳಿಸುವ ಕಾಮಗಾರಿಗಳ ಧೂಳು, ರಸ್ತೆ ಧೂಳು ಹಾಗೂ ಕೂಳೆ ಸುಡುವಿಕೆ ಇವು ಪ್ರಮುಖ ಮಾಲಿನ್ಯ ಮೂಲಗಳಾಗಿವೆ ಎಂದು ತಿಳಿಸಿದರು.

ಮಾಲಿನ್ಯ ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದ ಅವರು, ನಿರ್ದಿಷ್ಟ ವರ್ಗದ ವಾಹನಗಳ ಪ್ರವೇಶಕ್ಕೆ ನಿರ್ಬಂಧ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳ (ಪಿಯುಸಿ) ಜಿಯೊ-ಟ್ಯಾಗಿಂಗ್ ಹಾಗೂ ದೂರುಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ಬಂದಾಗ ಅತಿಯಾಗಿ ಹೊಗೆ ಹೊರಸೂಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಗುರುವಾರ ದೆಹಲಿಯ ಒಟ್ಟು ವಾಯುಮಾಲಿನ್ಯದಲ್ಲಿ ಕೂಳೆ ಸುಡುವಿಕೆಯ ಪಾಲು ಶೇ.14ರಷ್ಟಿತ್ತು ಎಂದೂ ಐಶ್ವರ್ಯ ಭಾಟಿ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ಈ ಪ್ರಕರಣದಲ್ಲಿ ಕೆಲವು ಆದೇಶಗಳನ್ನು ಹೊರಡಿಸುವುದಾಗಿ ತಿಳಿಸಿದ ನ್ಯಾಯಪೀಠ, ದೀಪಾವಳಿ ರಜೆಯ ಬಳಿಕ ನ್ಯಾಯಾಲಯ ಪುನರಾರಂಭವಾದ ನಂತರ ನವೆಂಬರ್ 16ರಂದು ಮುಂದಿನ ವಿಚಾರಣೆ ನಡೆಸಲು ದಿನಾಂಕ ನಿಗದಿಪಡಿಸಿತು.

ಇದೇ ವೇಳೆ, ಶುಕ್ರವಾರ ದೆಹಲಿಯ ವಾಯುಗುಣಮಟ್ಟ ಮತ್ತಷ್ಟು ಹದಗೆಟ್ಟಿದ್ದು, ಒಟ್ಟಾರೆ ಎಕ್ಯೂಐ 391ಕ್ಕೆ ತಲುಪಿದೆ. ಇದರೊಂದಿಗೆ ವಾಯು ಗುಣಮಟ್ಟವು 'ತೀವ್ರ' ವರ್ಗಕ್ಕೆ ತೀರಾ ಸಮೀಪದಲ್ಲಿದೆ. ಈಗಾಗಲೇ ದಟ್ಟವಾದ ಹೊಗೆ ಮಂಜು ರಾಷ್ಟ್ರ ರಾಜಧಾನಿಯನ್ನು ಆವರಿಸಿದೆ.

ನಗರದ 59 ವಾಯುಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳ ಪೈಕಿ ಬೆಳಗ್ಗೆ 9 ಗಂಟೆ ವೇಳೆಗೆ 30 ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ತೀವ್ರ ಕಳಪೆ ಹಂತದಲ್ಲಿದೆ ಎಂದು ತಿಳಿದಬಂದಿದ್ದು, ಉಳಿದ ಕೇಂದ್ರಗಳಲ್ಲಿ ವಾಯುಗುಣಮಟ್ಟ ಅತ್ಯಂತ ಕೆಟ್ಟ ವಾಯು ಗುಣಮಟ್ಟ ಸೂಚ್ಯಂಕವನ್ನು ದಾಖಲಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ರೋಹಿಣಿಯಲ್ಲಿ ಗರಿಷ್ಠ 475 ಎಕ್ಯೂಐ ದಾಖಲಾಗಿದ್ದು, ಐಐಟಿ ದೆಹಲಿಯಲ್ಲಿ 472 ಎಕ್ಯೂಐ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X