IAS ಅಧಿಕಾರಿ ದಿವ್ಯಾ ಮಿತ್ತಲ್ ಬಳಿಕ ಯುಪಿ ಪಿಸಿಎಸ್ ಅಧಿಕಾರಿ 'ಅನುಪಮಾ ರಾಗ್' ರಾಜೀನಾಮೆ: ರಾಜಕೀಯ ಪ್ರವೇಶದ ಸುಳಿವು! Video

ಮಾಜಿ ಸಂಸದೆ ಸುಶೀಲಾ ಸರೋಜ ಅವರ ಪುತ್ರಿ ಮತ್ತು ಸಮಾಜವಾದಿ ಪಕ್ಷದ ವಕ್ತಾರ ಅನುರಾಗ್ ಭದೌರಿಯಾ ಅವರ ಪತ್ನಿಯಾಗಿರುವ ಅನುಪಮಾ, ಸಂಗೀತ ಮತ್ತು ಚಲನಚಿತ್ರ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಅನೇಕರಿಗೆ ಇವರು 'ಅನುಪಮಾ ರಾಗ್' ಎಂದೇ ಪರಿಚಿತರು.
Anupama Saroj Singh
ಅನುಪಮಾ ರಾಗ್
Updated on: 

ಲಖನೌ: IAS ಅಧಿಕಾರಿ ದಿವ್ಯಾ ಮಿತ್ತಲ್ ಬಳಿಕ ಉತ್ತರ ಪ್ರದೇಶದಲ್ಲಿ ಜಿಎಸ್‌ಟಿ (GST) ವಿಭಾಗದ ಉಪ ಆಯುಕ್ತರಾಗಿದ್ದ ಅನುಪಮಾ ಸರೋಜ ಸಿಂಗ್, ರಾಜ್ಯ ಆಡಳಿತ ಸೇವೆಯಿಂದ ಹೊರಬಂದು ಸಾರ್ವಜನಿಕ ಜೀವನದಲ್ಲಿ ಹೊಸ ಪಾತ್ರವನ್ನು ವಹಿಸಿಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅವರ ಈ ನಿರ್ಧಾರವು ಅವರು ರಾಜಕೀಯಕ್ಕೆ ಪ್ರವೇಶಿಸಬಹುದು ಎಂಬ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ಮಾಜಿ ಸಂಸದೆ ಸುಶೀಲಾ ಸರೋಜ ಅವರ ಪುತ್ರಿ ಮತ್ತು ಸಮಾಜವಾದಿ ಪಕ್ಷದ ವಕ್ತಾರ ಅನುರಾಗ್ ಭದೌರಿಯಾ ಅವರ ಪತ್ನಿಯಾಗಿರುವ ಅನುಪಮಾ, ಸಂಗೀತ ಮತ್ತು ಚಲನಚಿತ್ರ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಅನೇಕರಿಗೆ ಇವರು 'ಅನುಪಮಾ ರಾಗ್' ಎಂದೇ ಪರಿಚಿತರು.

ನವೆಂಬರ್ 4 ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ತಮ್ಮ ಈ ನಿರ್ಧಾರವನ್ನು 'ಹೊಸ ಬದ್ಧತೆಯೊಂದಿಗೆ ಆರಂಭವಾಗುತ್ತಿರುವ ಹೊಸ ಪಯಣ' ಎಂದು ಹೇಳಿಕೊಂಡಿದ್ದಾರೆ. ಆಡಳಿತ ಸೇವೆಯಿಂದ ಸಾರ್ವಜನಿಕ ಜೀವನಕ್ಕೆ ಬದಲಾಗುವುದು ಕೇವಲ ಹೊಸ ಪಾತ್ರವನ್ನು ವಹಿಸಿಕೊಳ್ಳುವುದಷ್ಟೇ ಅಲ್ಲ, ಬದಲಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.

ವೀಡಿಯೊ ಸಂದೇಶವೊಂದರಲ್ಲಿ ಮಾತನಾಡಿರುವ ಅನುಪಮಾ, ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಆಡಳಿತ ಸೇವೆಯಲ್ಲಿದ್ದ ವರ್ಷಗಳಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಪರಿಹರಿಸಲು ಶ್ರಮಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಆದರೆ, ವ್ಯವಸ್ಥೆಯ ಚೌಕಟ್ಟಿನೊಳಗೆ ಕೆಲಸ ಮಾಡುವಾಗ ಸಾಧಿಸಬಹುದಾದ ವಿಷಯಗಳಿಗೆ ಮಿತಿಗಳಿವೆ ಎಂದು ಅನ್ನಿಸಿತು. "ಈಗ ಕೇವಲ ಬದಲಾವಣೆಯನ್ನು ನಿರೀಕ್ಷಿಸುವ ಸಮಯವಲ್ಲ, ಬದಲಾಗಿ ಆ ಬದಲಾವಣೆಯ ಭಾಗವಾಗುವ ಸಮಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ರಾಜಕೀಯ ಮತ್ತು ನೀತಿ ನಿರೂಪಣೆಯಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಒತ್ತಿ ಹೇಳಿದ ಅವರು, ಉತ್ತಮ ಮತ್ತು ಹೆಚ್ಚು ಸಂವೇದನಾಶೀಲ ಸಮಾಜವನ್ನು ನಿರ್ಮಿಸಲು ಇದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ದೃಷ್ಟಿಕೋನವನ್ನು ರೂಪಿಸುವಲ್ಲಿ ಸಂಗೀತವು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳುವ ಅನುಪಮಾ, ಸಂಗೀತ ಉದ್ಯಮದಲ್ಲಿನ ತಮ್ಮ ಅನುಭವವು ಜನರ ಸಂಕಷ್ಟಗಳು, ಆಶೋತ್ತರಗಳು ಮತ್ತು ಕನಸುಗಳ ಬಗ್ಗೆ ಹೆಚ್ಚು ಸಂವೇದನಾಶೀಲರಾಗಲು ಸಹಾಯ ಮಾಡಿದೆ ಎಂಬ ನಂಬಿಕೆಯಿದೆ ಎಂದಿದ್ದಾರೆ. ಸರ್ಕಾರಿ ಉದ್ಯೋಗವನ್ನು ತೊರೆಯುವ ಬಗ್ಗೆ ಸುಮಾರು ಒಂದು ದಶಕದಿಂದಲೂ ಯೋಚಿಸುತ್ತಿದ್ದೆವು ಮತ್ತು ಅಂತಿಮವಾಗಿ ಈಗ ಆ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಅನುಪಮಾ ಸರೋಜ ಯಾವ ರಾಜಕೀಯ ಪಕ್ಷವನ್ನು ಸೇರಲಿದ್ದಾರೆ?

ಅನುಪಮಾ ಅವರು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಲು ಬಯಸಿರುವುದಾಗಿ ಸುಳಿವು ನೀಡಿದ್ದರೂ, ಅವರು ಯಾವಾಗ ಅಧಿಕೃತವಾಗಿ ರಾಜಕೀಯಕ್ಕೆ ಸೇರಲಿದ್ದಾರೆ ಅಥವಾ ಯಾವ ರಾಜಕೀಯ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ. ಸದ್ಯಕ್ಕೆ, ಅವರು ಮಹಿಳೆಯರು, ಹಿಂದುಳಿದ ಸಮುದಾಯಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲು ಬಯಸಿದ್ದಾರೆ. ತಮ್ಮ ಕುಟುಂಬದವರು ಮತ್ತು ಆಪ್ತರೊಂದಿಗೆ ಚರ್ಚಿಸಿದ ನಂತರವೇ ಮುಂದಿನ ನಡೆ ಏನೆಂಬುದನ್ನು ನಿರ್ಧರಿಸುವುದಾಗಿ ಅವರು ತಿಳಿಸಿದ್ದಾರೆ.

Anupama Saroj Singh
ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ

ತಮ್ಮ ಸಂದೇಶದಲ್ಲಿ, ಅವರು ಜನರಿಗೆ ಮನವಿಯೊಂದನ್ನು ಸಲ್ಲಿಸುತ್ತಾ, ತಾವು ಈ ಹೊಸ ಕ್ಷೇತ್ರಕ್ಕೆ ಕೇವಲ ತಮ್ಮ ಸ್ವಂತ ಧ್ವನಿಯೊಂದಿಗೆ ಮಾತ್ರವಲ್ಲದೆ, ಇತರರ ಧ್ವನಿಯಾಗುವ ಬದ್ಧತೆಯೊಂದಿಗೆ ಪ್ರವೇಶಿಸುತ್ತಿರುವುದಾಗಿ ಹೇಳಿದ್ದಾರೆ. ಸಂಗೀತ ಮತ್ತು ಚಲನಚಿತ್ರಗಳಿಂದ ಹಿಡಿದು ಆಡಳಿತ ಕ್ಷೇತ್ರಕ್ಕೆ, ಮತ್ತು ಈಗ ರಾಜಕೀಯದತ್ತ ಸಾಗುತ್ತಿರುವ ಅವರ ಈ ನಿರ್ಧಾರವು ಅವರ ಜೀವನ ಪಯಣದಲ್ಲಿ ಒಂದು ಹೊಸ ಅಧ್ಯಾಯವನ್ನು ತೆರೆದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X