ಕೊಯಮತ್ತೂರು (ತಮಿಳುನಾಡು): ಇತ್ತೀಚೆಗೆ ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕೊಯಮತ್ತೂರಿನ ಪೆರಿಯಾರ್ ಅರಿವುಲಗಂ (ಪೆರಿಯಾರ್ ಜ್ಞಾನ ಕೇಂದ್ರ) ಗ್ರಂಥಾಲಯದಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ನಕಲಿ ಪುಸ್ತಕ ಖರೀದಿ ಹಗರಣ ತಮಿಳುನಾಡು ರಾಜಕೀಯ ಮತ್ತು ಸಾಹಿತ್ಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಹೌದು, ತಮಿಳುನಾಡಿನ ಮೊದಲ ಮುಖ್ಯಮಂತ್ರಿ ಯಾರೆಂಬ ಪ್ರಶ್ನೆಗೆ ಎಂದೂ ಕೇಳರಿಯದ ಹೆಸರೊಂದು ಅಲ್ಲಿ ಮುದ್ರಿತವಾಗಿತ್ತು. ಪುರಾತನ ಕಾವ್ಯ ಕೃತಿಗೆ ಕಲ್ಪಿತ ಕವಿಯ ಹೆಸರನ್ನೇ ಲೇಖಕನೆಂದು ಬಿಂಬಿಸಲಾಗಿತ್ತು. ಕೊಯಮತ್ತೂರಿನ ಪೆರಿಯಾರ್ ಅರಿವುಳಗಂ ಗ್ರಂಥಾಲಯಕ್ಕೆ ಸರಬರಾಜಾದ ಸುಮಾರು 1,800 ಪುಸ್ತಕಗಳಲ್ಲಿ ಅಸಲಿ ಸತ್ಯಗಳಿಗಿಂತ ಹೆಚ್ಚಾಗಿ ಕೃತಕ ಬುದ್ಧಿಮತ್ತೆ ಸೃಷ್ಟಿಸಿದ ಸುಳ್ಳು ಕಂತೆಗಳೇ ರಾರಾಜಿಸುತ್ತಿವೆ ಎಂಬ ಅಂಶ ಇದೀಗ ತಮಿಳುನಾಡು ರಾಜಕೀಯ ಹಾಗೂ ಸಾಹಿತ್ಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಹಗರಣ ಹೇಗೆ ಬೆಳಕಿಗೆ ಬಂತು?
ಖ್ಯಾತ ತಮಿಳು ಸಾಹಿತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಪೆರುಮಾಳ್ ಮುರುಗನ್ ಅವರು ಆನ್‌ಲೈನ್ ಪತ್ರಿಕೆಯೊಂದರಲ್ಲಿ ಬರೆದ ವಿವರವಾದ ಲೇಖನದಿಂದ ಈ ಲೂಟಿ ಬಯಲಾಗಿದೆ. ಗ್ರಂಥಾಲಯಕ್ಕೆ ಭೇಟಿ ನೀಡಿದ್ದ ಅವರು, ಅಲ್ಲಿನ ತಮಿಳು ವಿಭಾಗದಲ್ಲಿ ಇಟ್ಟಿರುವ ಸಾವಿರಾರು ಪುಸ್ತಕಗಳನ್ನು ಪರಿಶೀಲಿಸಿದಾಗ ಈ ನಕಲಿ ಜಾಲ ಪತ್ತೆಯಾಗಿದೆ.
ಆರೋಪಗಳೇನು?
AI ಬರಹ ಹಾಗೂ ನಕಲಿ ಲೇಖಕರು:
ಗ್ರಂಥಾಲಯದಲ್ಲಿರುವ ಸುಮಾರು 1,800ಕ್ಕೂ ಹೆಚ್ಚು ಪುಸ್ತಕಗಳನ್ನು ಅಗಲ್ ವಿಲಕ್ಕು ಮತ್ತು ಫೀನಿಕ್ಸ್ ಎಂಬ ಎಂದೂ ಕೇಳಿರದ ಪ್ರಕಾಶನ ಸಂಸ್ಥೆಗಳಿಂದ ಖರೀದಿಸಲಾಗಿದೆ. ಈ ಪುಸ್ತಕಗಳ ಲೇಖಕರ ಹೆಸರುಗಳು (ಉದಾ: ತ್ರಿಷಾ ವಿಜಯ್, ಸೂರ್ಯ ಬಾಲು, ಮೋನಿಕಾ ಸೂರ್ಯ) ಸಂಪೂರ್ಣ ನಕಲಿಯಾಗಿದ್ದು, ಇವುಗಳನ್ನು ಕೃತಕ ಬುದ್ಧಿಮತ್ತೆ ಬಳಸಿ ಅರೆಬರೆ ಮಾಹಿತಿಯೊಂದಿಗೆ ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದೆ.
ಸುಳ್ಳು ಇತಿಹಾಸ:
ಪುಸ್ತಕಗಳಲ್ಲಿ ಐತಿಹಾಸಿಕ ತಥ್ಯಗಳನ್ನು ಸಂಪೂರ್ಣವಾಗಿ ತಿರುಚಲಾಗಿದೆ.ಒಂದು ಪುಸ್ತಕದಲ್ಲಿ 1947ರಲ್ಲಿ ತಮಿಳುನಾಡಿನ ಮೊದಲ ಮುಖ್ಯಮಂತ್ರಿ 'ಮುತ್ತುವೇಲು ಸುಬ್ಬಯ್ಯ ಅಯ್ಯರ್' ಎಂದು ಬರೆಯಲಾಗಿದೆ (ಆದರೆ ಇತಿಹಾಸದಲ್ಲಿ ಅಂತಹ ಯಾವುದೇ ವ್ಯಕ್ತಿ ಇರಲಿಲ್ಲ).
'ನಾಲಡಿಯಾರ್' ಎಂಬುದು ಜೈನ ಮುನಿಗಳು ಬರೆದ 400 ಪದ್ಯಗಳ ಸಂಗ್ರಹವಾಗಿದೆ. ಆದರೆ, ಅಲ್ಲಿನ ಪುಸ್ತಕವೊಂದರಲ್ಲಿ 'ನಾಲಡಿಯಾರ್' ಎಂಬಾತನೇ ಒಬ್ಬ ತಮಿಳು ಕವಿ ಮತ್ತು ತತ್ವಜ್ಞಾನಿ ಎಂದು ಬಿಂಬಿಸಲಾಗಿದೆ.
ಮಾಜಿ ಸಿಎಂ ಎಂ. ಕರುಣಾನಿಧಿ ಅವರ ಹೆಸರನ್ನು 'ಎಂ. ಕೆ. ರಾಮಸಾಮಿ' ಎಂದು ತಪ್ಪಾಗಿ ಮುದ್ರಿಸಲಾಗಿದೆ.
ನಕಲಿ ISBN ಮತ್ತು ವಿಳಾಸ:
ಈ ಪುಸ್ತಕಗಳ ಮೇಲೆ ಮುದ್ರಿಸಲಾಗಿರುವ ಅಂತರರಾಷ್ಟ್ರೀಯ ಪ್ರಮಾಣಿತ ಪುಸ್ತಕ ಸಂಖ್ಯೆಗಳು (ISBN) ಆನ್‌ಲೈನ್‌ನಲ್ಲಿ ಹುಡುಕಿದಾಗ ಅಸ್ತಿತ್ವದಲ್ಲೇ ಇಲ್ಲದಿರುವುದು ಕಂಡುಬಂದಿದೆ. ಪ್ರಕಾಶನ ಸಂಸ್ಥೆಗಳು ನೀಡಿರುವ ವಿಳಾಸಗಳೂ ಸಹ ನಕಲಿಯಾಗಿವೆ.
ಭಾರಿ ಬೆಲೆ ನಿಗದಿ:
ಮಾರುಕಟ್ಟೆಯಲ್ಲಿ ಕೇವಲ 300 ರಿಂದ 350 ರೂ. ಸಿಗಬಹುದಾದ ಸಾಮಾನ್ಯ ಗುಣಮಟ್ಟದ ಪುಸ್ತಕಗಳಿಗೆ ಭಾರಿ ಬೆಲೆ ನಿಗದಿಪಡಿಸಿ, ಗ್ರಂಥಾಲಯಕ್ಕೆ 1,400 ರೂ. ನಿಂದ 1,500 ರೂ. ವರೆಗಿನ ಹೆಚ್ಚಿನ ದರದಲ್ಲಿ ಮಾರಾಟ ಮಾಡಿ ಸಾರ್ವಜನಿಕ ಹಣವನ್ನು ಲೂಟಿ ಮಾಡಲಾಗಿದೆ.
ಏತನ್ಮಧ್ಯೆ, ಈ ಹಗರಣವು ತಮಿಳುನಾಡಿನ ರಾಜಕೀಯ ಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರವು, ಈ ಹಗರಣಕ್ಕೆ ಹಿಂದೆ ಅಧಿಕಾರದಲ್ಲಿದ್ದ ಡಿಎಂಕೆ (DMK) ಸರ್ಕಾರದ ಅವಧಿಯ ಭ್ರಷ್ಟಾಚಾರವೇ ಕಾರಣ ಎಂದು ಆರೋಪಿಸಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಡಿಎಂಕೆ, ಈ ಪುಸ್ತಕಗಳ ಖರೀದಿಗೆ ಮೇ ತಿಂಗಳಲ್ಲಿ ಹೊಸ ಸರ್ಕಾರ ಬಂದ ನಂತರವೇ ಅನುಮೋದನೆ ದೊರೆತಿದ್ದು, ಇದರಲ್ಲಿ ಪ್ರಸ್ತುತ ಆಡಳಿತದ ಪಾತ್ರವಿದೆ ಎಂದು ತಿರುಗೇಟು ನೀಡಿದೆ. ಮುಂದುವರೆದು, ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತಮಿಳುನಾಡು ಶಾಲಾ ಶಿಕ್ಷಣ ಸಚಿವ ಎ. ರಾಜ್‌ಮೋಹನ್ ಅವರು ಈ ಕುರಿತು ತಕ್ಷಣವೇ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.