

ನವದೆಹಲಿ: ಸರ್ಕಾರಿ ನೌಕರನೊಬ್ಬ 48 ಗಂಟೆಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದರೆ ನಿಯಮಗಳ ಪ್ರಕಾರ ಆತ ಸ್ವಯಂಚಾಲಿತವಾಗಿ ಅಮಾನತುಗೊಂಡಂತೆ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಸೋಮವಾರ ಬಿಹಾರದ ಸಮಷ್ಟಿಪುರ ಸದರ್ ಆಸ್ಪತ್ರೆಯ ಆಡಳಿತಾಧಿಕಾರಿ ವಿಶ್ವಜೀತ್ ಸಿಂಗ್ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ಮನಮೋಹನ್ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಅಮಾನತು ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ಹೇಳಿದೆ.
ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನೌಕರನ ಬಾಕಿ ವೇತನ ಬಿಡುಗಡೆ ಮಾಡಲು 4 ಸಾವಿರ ರೂ. ಲಂಚ ಕೇಳಿದ ಆರೋಪ ವಿಶ್ವಜೀತ್ ಸಿಂಗ್ ಮೇಲೆ ಇತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಅವರು ಸುಮಾರು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಹೀಗಾಗಿ 48 ಗಂಟೆಗೂ ಹೆಚ್ಚು ಕಾಲ ಬಂಧನದಲ್ಲಿದ್ದ ಸರ್ಕಾರಿ ನೌಕರನನ್ನು ಅಮಾನತುಗೊಳಿಸುವ ನಿಯಮ ಅನ್ವಯವಾಗುತ್ತದೆ ಎಂಬ ಅಂಶವನ್ನು ನ್ಯಾಯಪೀಠ ಉಲ್ಲೇಖಿಸಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠವು ಪಾಟ್ನಾ ಹೈಕೋರ್ಟ್‌ನ ಜಾಮೀನು ರದ್ದತಿ ಆದೇಶವನ್ನೂ ಪರಿಶೀಲಿಸಿದೆ. ವಿಚಾರಣಾ ನ್ಯಾಯಾಲಯವು ವಿಶ್ವಜೀತ್ ಸಿಂಗ್‌ಗೆ ಜಾಮೀನು ನೀಡಿದ ಸುಮಾರು ಒಂದು ವರ್ಷದ ಬಳಿಕ ಪಾಟ್ನಾ ಹೈಕೋರ್ಟ್ ಆ ಜಾಮೀನನ್ನು ರದ್ದುಗೊಳಿಸಿತ್ತು. 2026ರ ಜು.1ರಂದು ಹೈಕೋರ್ಟ್ ನೀಡಿದ್ದ ಈ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಲಂಚದ ಮೊತ್ತ ಕಡಿಮೆ ಅಥವಾ ಹೆಚ್ಚಾಗಿದೆ ಎಂಬ ಅಂಶವೊಂದನ್ನೇ ಆಧರಿಸಿ ಜಾಮೀನು ನಿರ್ಧರಿಸುವುದು ಸೂಕ್ತವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಆರೋಪಿಯ ವಿರುದ್ಧ ಗಂಭೀರ ಕ್ರಿಮಿನಲ್ ಹಿನ್ನೆಲೆ ಇದ್ದರೆ ಅಥವಾ ಪ್ರಕರಣದ ಸನ್ನಿವೇಶಗಳು ಅತ್ಯಂತ ಗಂಭೀರವಾಗಿದ್ದರೆ ಜಾಮೀನು ನಿರಾಕರಿಸಬಹುದು. ಆದರೆ ಸಾಮಾನ್ಯವಾಗಿ ಪ್ರಕರಣದ ಸ್ವರೂಪ ಮತ್ತು ವಿಧಿಸಬಹುದಾದ ಗರಿಷ್ಠ ಶಿಕ್ಷೆಯನ್ನು ಪರಿಗಣಿಸಿ ಜಾಮೀನು ನೀಡುವ ಬಗ್ಗೆ ನಿರ್ಧರಿಸಬೇಕು ಎಂದು ತಿಳಿಸಿದೆ.
48 ಗಂಟೆಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಹಿನ್ನೆಲೆಯಲ್ಲಿ ಅವರು ನಿಯಮಾನುಸಾರ ಸ್ವಯಂ ಅಮಾನತುಗೊಂಡಂತೆ ಪರಿಗಣಿಸಲ್ಪಡುತ್ತಾರೆ. ಹೀಗಿರುವಾಗ ಅಮಾನತು ರದ್ದುಗೊಳಿಸಿ ಅದೇ ಹುದ್ದೆಗೆ ಮರುನೇಮಕ ಮಾಡಿರುವ ವಿಚಾರವನ್ನು ಬಿಹಾರ ಸರ್ಕಾರ ತಕ್ಷಣ ಪರಿಶೀಲಿಸಬೇಕು ಮತ್ತು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.