'ರಸ್ತೆ ಮೇಲೆ ಪಟಾಕಿ ಹೊಡಿಬೇಡ' ಎಂದಿದ್ದಕ್ಕೇ ಪೊಲೀಸ್ ಅಧಿಕಾರಿಯನ್ನೇ ಹೊಡೆದು ಕೊಂದ ದುಷ್ಕರ್ಮಿಗಳು, ದೀಪಾವಳಿ ದಿನವೇ 3 ಕೊಲೆ!

ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆಗೊಳಗಾಗಿ ಮೃತಪಟ್ಟಿದ್ದಾರೆ.
Theni Police officer dies after confronting youths over crackers
ಥೇಣಿಯಲ್ಲಿ ಪೊಲೀಸ್ ಅಧಿಕಾರಿ ಕೊಲೆ
Updated on: 

ಚೆನ್ನೈ: ರಸ್ತೆ ಮೇಲೆ ಪಟಾಕಿ ಹೊಡಿಬೇಡ.. ದಾರಿಹೋಕರಿಗೆ ತೊಂದರೆಯಾಗುತ್ತದೆ ಎಂದು ಬುದ್ದಿ ಹೇಳಿದ್ದಕ್ಕೇ ಆಕ್ರೋಶಗೊಂಡ ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಯನ್ನೇ ಹೊಡೆದು ಕೊಂದ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆಗೊಳಗಾಗಿ ಮೃತಪಟ್ಟಿದ್ದಾರೆ.

ಇದೇ ವೇಳೆ ದೀಪಾವಳಿ ದಿನವೇ ರಾಜ್ಯದ ತಿರುಚ್ಚಿ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಕೊಲೆಯಾಗಿದ್ದು, ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ತೇಣಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಕಚೇರಿಯಲ್ಲಿ ವಿಶೇಷ ಉಪ ನಿರೀಕ್ಷಕರಾಗಿ (ಎಸ್‌ಎಸ್‌ಐ) ಕಾರ್ಯನಿರ್ವಹಿಸುತ್ತಿದ್ದ ಸೆಂಥಿಲ್ ಕುಮಾರ್ ಮೃತಪಟ್ಟ ಅಧಿಕಾರಿ ಎಂದು ಗುರುತಿಸಲಾಗಿದೆ.

Theni Police officer dies after confronting youths over crackers
ದೀಪಾವಳಿ ಸಂಭ್ರಮದ ನಡುವೆ ಸೂತಕ: ಕೈಯಲ್ಲೇ ರಾಕೆಟ್ ಸ್ಫೋಟ; 10 ವರ್ಷದ ಬಾಲಕ ಸಾವು!

ಆಗಿದ್ದೇನು?

ದೀಪಾವಳಿ ದಿನದಂದು ಕರ್ತವ್ಯ ಮುಗಿಸಿ ನಾಗರಿಕ ಉಡುಪಿನಲ್ಲಿ ಮನೆಗೆ ಮರಳುತ್ತಿದ್ದ ಪೊಲೀಸ್ ಅಧಿಕಾರಿ ಸೆಂಥಿಲ್ ಕುಮಾರ್ ಅವರಿಗೆ ರಸ್ತೆಯಲ್ಲಿ ಯುವಕರ ಗುಂಪೊಂದು ಪಟಾಕಿ ಸಿಡಿಸುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆಯಿಂದ ದೂರ ಹೋಗಿ ಪಟಾಕಿ ಸಿಡಿಸುವಂತೆ ಅವರು ಯುವಕರಿಗೆ ಸೂಚಿಸಿದ್ದಾರೆ.

ಅಲ್ಲದೆ, ಯುವಕರ ವರ್ತನೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಲು ಮುಂದಾಗಿದ್ದಾರೆ. ಈ ವೇಳೆ ಒಬ್ಬ ಯುವಕನನ್ನು ಹಿಡಿಯಲು ಪ್ರಯತ್ನಿಸಿದಾಗ, ಮತ್ತೊಬ್ಬ ವ್ಯಕ್ತಿ ಮೊಣಕೈಯಿಂದ ಸೆಂಥಿಲ್ ಕುಮಾರ್ ಅವರಿಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ನಿಯಂತ್ರಣ ತಪ್ಪಿ ಅವರು ಕೆಳಗೆ ಬಿದ್ದಿದ್ದಾರೆ ಎಂದು ದಕ್ಷಿಣ ವಲಯದ ಐಜಿ ವಿಜಯೇಂದ್ರ ಬಿದರಿ ತಿಳಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿ ಸೆಂಥಿಲ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮೂವರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಮೃತ ಸೆಂಥಿಲ್ ಕುಮಾರ್ ಅವರಿಗೆ ಈ ಹಿಂದಿನಿಂದಲೂ ಹೃದಯ ಸಂಬಂಧಿ ಸಮಸ್ಯೆ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ದೀಪಾವಳಿ ದಿನವೇ ಮೂವರ ಕೊಲೆ

ಇನ್ನೊಂದೆಡೆ, ದೀಪಾವಳಿ ಹಬ್ಬದ ದಿನವೇ ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ಇಬ್ಬರು 17 ವರ್ಷದ ಬಾಲಕರು ಸೇರಿದಂತೆ ಮೂವರು ಕೊಲೆಯಾಗಿದ್ದಾರೆ. ತಿರುಚ್ಚಿ ಹೊರವಲಯದ ಸಮಯಪುರಂ ಟೋಲ್ ಪ್ಲಾಜಾ ಸಮೀಪ ಇಬ್ಬರು ಅಪ್ರಾಪ್ತ ಬಾಲಕರನ್ನು ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಚೆನ್ನೈ ಮೂಲದ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವಕನನ್ನು ಪಟಾಕಿ ಸಿಡಿಸುವ ವಿಚಾರವಾಗಿ ನಡೆದ ಜಗಳದಲ್ಲಿ ಕಬ್ಬಿಣದ ಸ್ಪ್ಯಾನರ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ. ಇರುಂಗಲೂರು ಸಮೀಪ ಈ ಘಟನೆ ನಡೆದಿದೆ. ದೀಪಾವಳಿ ಸಂಭ್ರಮದ ನಡುವೆಯೇ ನಡೆದ ಈ ಸರಣಿ ಕೊಲೆಗಳು ತಮಿಳುನಾಡಿನ ಜನರನ್ನು ಬೆಚ್ಚಿಬೀಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X