

ನವದೆಹಲಿ: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗ (USCIRF) ಭಾರತದ ವಿರುದ್ಧ ಮಾಡಿರುವ ಟೀಕೆಗೆ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಮೊದಲು ನಿಮ್ಮ ಪೂರ್ವಗ್ರಹಗಳನ್ನು ಆತ್ಮಾವಲೋಕನ ಮಾಡಿಕೊಳ್ಳಿ, ಇತರರಿಗೆ ಪಾಠ ಹೇಳುವುದನ್ನು ನಿಲ್ಲಿಸಿ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ಧ್ವನಿ ಎತ್ತಿದ ಕಾರಣಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು USCIRF ಆರೋಪಿಸಿತ್ತು.
ಈ ಸಂಬಂಧ ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕ್ವಾತ್ರ, ಭಾರತೀಯ ನಾಗರಿಕರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ತೀರ್ಪು ನೀಡಲು USCIRFಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.
USCIRF ತನ್ನ ಎಕ್ಸ್ ಖಾತೆಯಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಅವರ ಪ್ರೊಫೈಲ್ ಹಂಚಿಕೊಂಡಿತ್ತು. ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ಹೋರಾಡಿದ ಮುಸ್ಲಿಂ ವ್ಯಕ್ತಿಯನ್ನು ಭಾರತದಲ್ಲಿ ಬಂಧಿಸಲಾಗಿದೆ ಎಂದು ಬಣ್ಣಿಸಿತ್ತು.
2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇಮಾಮ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಗಲಭೆಯಲ್ಲಿ 53 ಮಂದಿ ಮೃತಪಟ್ಟಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ವಿರೋಧಿಸಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಗಲಭೆಯ ಹಿಂದಿನ ಪ್ರಮುಖ ಸಂಚುಕೋರರಲ್ಲಿ ಇಮಾಮ್ ಕೂಡ ಒಬ್ಬರು ಎಂಬ ಆರೋಪವಿದೆ.
USCIRF ಟೀಕೆಗೆ ಪ್ರತಿಕ್ರಿಯಿಸಿದ ಕ್ವಾತ್ರ, "ಆಯೋಗದ ಪಕ್ಷಪಾತದ, ಸರಿಯಾದ ಮಾಹಿತಿಯಿಲ್ಲದ ಮತ್ತು ಪೂರ್ವಗ್ರಹಪೀಡಿತ ವರದಿಗಳು ಭಾರತದ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಎಲ್ಲ ಧರ್ಮಗಳ ಸಮಾನ ಹಕ್ಕುಗಳ ಬಗೆಗಿನ ಸಾಂವಿಧಾನಿಕ ಬದ್ಧತೆಯನ್ನು ಕುಗ್ಗಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಭಾರತವು USCIRFನ ಉದ್ದೇಶಪೂರ್ವಕ ಮತ್ತು ಪಕ್ಷಪಾತದ ನಿರೂಪಣೆಗಳನ್ನು ಮೀರಿ ಅಭಿವೃದ್ಧಿ ಹೊಂದುತ್ತಿದೆ. ಇತರರಿಗೆ ಉಪದೇಶ ನೀಡುವ ಮೊದಲು ಆಯೋಗ ತನ್ನದೇ ಪೂರ್ವಗ್ರಹಗಳನ್ನು ಪರಿಶೀಲಿಸಿಕೊಳ್ಳಲಿ ಎಂದು ಅವರು ತಿರುಗೇಟು ನೀಡಿದ್ದಾರೆ. USCIRF ಅನ್ನು ಭಾರತ ಈ ಹಿಂದಿನಿಂದಲೂ ಪಕ್ಷಪಾತಿ ಮತ್ತು ವಿಶ್ವಾಸಾರ್ಹತೆಯಿಲ್ಲದ ಸಂಸ್ಥೆ ಎಂದು ಟೀಕಿಸುತ್ತಾ ಬಂದಿದೆ.
1998ರಲ್ಲಿ ಅಮೆರಿಕ ಸರ್ಕಾರ ಈ ಆಯೋಗವನ್ನು ಸ್ಥಾಪಿಸಿತ್ತು. ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಹಿನ್ನೆಲೆಯಲ್ಲಿ ರಚನೆಯಾದ ಈ ಆಯೋಗವು ಅಮೆರಿಕದ ವಿದೇಶಾಂಗ ಇಲಾಖೆಗೆ ಶಿಫಾರಸುಗಳನ್ನು ಮಾಡುತ್ತದೆ. ಆದರೆ, ಆಯೋಗದ ಶಿಫಾರಸುಗಳು ಕಡ್ಡಾಯವಾಗಿ ಜಾರಿಗೊಳಿಸಬೇಕಾದವುಗಳಲ್ಲ.