Video: ಗುಜರಾತ್ ಸಫಾರಿ ಪಾರ್ಕ್‌ನಲ್ಲಿ ಸಿಂಹವನ್ನು ಬೈಕ್‌ನಲ್ಲಿ ಬೆನ್ನಟ್ಟಿದ ಸಿಬ್ಬಂದಿ, ಮೂವರ ವಜಾ.. ಆಗಿದ್ದೇನು?

ಗುಜರಾತ್ ನ ಅಮ್ರೇಲಿ ಜಿಲ್ಲೆಯ ಧಾರಿ ಗಿರ್ ಪೂರ್ವ ವಿಭಾಗದ ಅಂಬಾರ್ಡಿ ಸಫಾರಿ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಮೂವರು ವ್ಯಕ್ತಿಗಳು ಪ್ರತ್ಯೇಕ ಬೈಕ್‌ಗಳಲ್ಲಿ ಸಿಂಹವನ್ನು ಬೆನ್ನಟ್ಟುತ್ತಿರುವುದು..
Lion Chased On Bikes At Gujarat Safari Park
ಸಿಂಹವನ್ನು ಬೆನ್ನಟ್ಟಿದ ಅರಣ್ಯ ಸಿಬ್ಬಂದಿ
Updated on: 

ಅಮ್ರೇಲಿ: ಪ್ರವಾಸಿಗರಿಗೆ ಸಿಂಹವನ್ನು ಹತ್ತಿರದಿಂದ ತೋರಿಸುವ ಉದ್ದೇಶದಿಂದ ಅರಣ್ಯ ಸಿಬ್ಬಂದಿ ಬೈಕ್‌ಗಳಲ್ಲಿ ಸಿಂಹವನ್ನೇ ಬೆನ್ನಟ್ಟಿದ ಘಟನೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ.

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ಬೆನ್ನಲ್ಲೇ ಮೂವರು ಹೊರಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ಗುಜರಾತ್ ನ ಅಮ್ರೇಲಿ ಜಿಲ್ಲೆಯ ಧಾರಿ ಗಿರ್ ಪೂರ್ವ ವಿಭಾಗದ ಅಂಬಾರ್ಡಿ ಸಫಾರಿ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಮೂವರು ವ್ಯಕ್ತಿಗಳು ಪ್ರತ್ಯೇಕ ಬೈಕ್‌ಗಳಲ್ಲಿ ಸಿಂಹವನ್ನು ಬೆನ್ನಟ್ಟುತ್ತಿರುವುದು ಕಾಣಿಸುತ್ತದೆ.

ಬೈಕ್ ಸವಾರರೊಬ್ಬರ ಬಳಿ ವಾಕಿಟಾಕಿ ಕೂಡ ಇರುವುದು ಕಂಡುಬಂದಿದೆ. ಅರಣ್ಯ ಇಲಾಖೆಯ ಬೊಲೆರೊ ವಾಹನ ಕೂಡ ಆ ಪ್ರದೇಶದಲ್ಲಿ ಸಂಚರಿಸಿರುವುದು ದೃಶ್ಯಗಳಲ್ಲಿ ಕಾಣಿಸಿದೆ.

Lion Chased On Bikes At Gujarat Safari Park
TikTok ಶೋಕಿಗೆ ಕೆಲಸದಾಳು ಬಲಿ: ವಿಡಿಯೋ ಚಿತ್ರೀಕರಣದ ವೇಳೆ ಹುಲಿ ದಾಳಿ; ವ್ಯಕ್ತಿ ದುರಂತ ಸಾವು; video

ಸಿಬ್ಬಂದಿ ವಜಾ?

ದೀಪಾವಳಿ ರಜೆಯ ಸಂದರ್ಭದಲ್ಲಿ ಸಫಾರಿ ಪಾರ್ಕ್‌ಗೆ ಆಗಮಿಸಿದ್ದ ಗಣ್ಯರು (ವಿಐಪಿ) ಸಿಂಹಗಳನ್ನು ಹತ್ತಿರದಿಂದ ನೋಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಿಬ್ಬಂದಿ ಹೀಗೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಲವು ದಿಕ್ಕುಗಳಿಂದ ಬೈಕ್‌ಗಳಲ್ಲಿ ಸಿಂಹವನ್ನು ಬೆನ್ನಟ್ಟಿದ ಪರಿಣಾಮ, ಸಿಂಹವೂ ತಿರುಗಿ ತನ್ನನ್ನು ಹಿಂಬಾಲಿಸುತ್ತಿದ್ದವರ ಕಡೆಗೆ ಓಡಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ವಿಡಿಯೊ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ತನಿಖೆಯ ಬಳಿಕ ಮೂವರು ಹೊರಗುತ್ತಿಗೆ ಅರಣ್ಯ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

ಅರಣ್ಯಾಧಿಕಾರಿ ಹೇಳಿದ್ದೇನು?

ಈ ಕುರಿತು ಮಾಹಿತಿ ನೀಡಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೈಪಾಲ್ ಸಿಂಗ್, ಸಫಾರಿ ಪಾರ್ಕ್‌ನಲ್ಲಿರುವ ಸಿಂಹವನ್ನು ಸಂಜೆ ಅದರ ನಿಗದಿತ ಆವರಣಕ್ಕೆ (ಕ್ರಾಲ್‌) ಕರೆದೊಯ್ಯಲು ಸಿಬ್ಬಂದಿ ಪ್ರಯತ್ನಿಸುತ್ತಿದ್ದರು. ಸಾಮಾನ್ಯವಾಗಿ ಈ ಕೆಲಸವನ್ನು ಜೀಪ್ ಮೂಲಕ ಮಾಡಲಾಗುತ್ತದೆ.

ಆದರೆ, ಕೆಲವರು ಬೈಕ್ ಬಳಸಿದ್ದಾರೆ. ಇದರಿಂದ ಸಿಂಹ ಮತ್ತು ಸಿಬ್ಬಂದಿಗೂ ಅಪಾಯವಿತ್ತು. ಹೀಗಾಗಿ ಘಟನೆ ಸಂಬಂಧ ಸಿಬ್ಬಂದಿಗೆ ನೋಟಿಸ್ ನೀಡಲಾಗಿದ್ದು, ಮೂವರು ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

ಸಿಂಹಕ್ಕೆ ಕಿರುಕುಳ ನೀಡಿಲ್ಲ ಎಂದ ಅಧಿಕಾರಿಗಳು

ಇನ್ನೊಂದೆಡೆ, ಅರಣ್ಯ ಇಲಾಖೆಯ ಪ್ರಭಾರ ಸಹಾಯಕ ಸಂರಕ್ಷಣಾಧಿಕಾರಿ (ಎಸಿಎಫ್) ಮಿತೇಶ್ ವಾನಿಯಾ, ಈ ವಿಡಿಯೊ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಸಿಂಹಕ್ಕೆ ಯಾವುದೇ ಕಿರುಕುಳ ನೀಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಫಾರಿ ಪಾರ್ಕ್ 300 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ಪ್ರತಿದಿನ ಸಂಜೆ 5 ಗಂಟೆಗೆ ಸಿಂಹಗಳಿಗೆ ಆಹಾರ ನೀಡಲಾಗುತ್ತದೆ. ಇದಕ್ಕಾಗಿ 100X100 ಮೀಟರ್ ವಿಸ್ತೀರ್ಣದ ಬೇಲಿ ಹಾಕಿದ ವಿಶೇಷ ಆವರಣವನ್ನು (ಕ್ರಾಲ್‌) ನಿರ್ಮಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ವಿಡಿಯೊದಲ್ಲಿರುವ ಸಿಂಹ ಆಹಾರ ನೀಡುವ ಆವರಣದಿಂದ ಹೊರಗೆ ಹೋಗಿತ್ತು. ಅದನ್ನು ಮತ್ತೆ ಆವರಣದೊಳಗೆ ಕರೆತರಲು ಸಿಬ್ಬಂದಿ ಪ್ರಯತ್ನಿಸುತ್ತಿದ್ದರು. ಸಿಂಹಕ್ಕೆ ತೊಂದರೆ ನೀಡುವ ಯಾವುದೇ ಉದ್ದೇಶ ಸಿಬ್ಬಂದಿಗೆ ಇರಲಿಲ್ಲ ಎಂದು ವಾನಿಯಾ ಸ್ಪಷ್ಟಪಡಿಸಿದ್ದಾರೆ.

ದೀಪಾವಳಿ ರಜೆಯ ಸಂದರ್ಭದಲ್ಲಿ ಅಂಬಾರ್ಡಿ ಸಫಾರಿ ಪಾರ್ಕ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಈ ವೇಳೆ ಪ್ರವಾಸಿಗರ ನಿರ್ವಹಣೆಗಾಗಿ ಅರಣ್ಯ ಸಿಬ್ಬಂದಿ ಸತತ 12 ಗಂಟೆಗಳ ಕಾಲ ಕೆಲಸ ಮಾಡಿದ್ದರು ಎಂದೂ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X