

ಲಖನೌ: ಉತ್ತರ ಪ್ರದೇಶದ ಮುಜಫರ್ನಗರದ ನೈ ಮಂಡಿ ಪೊಲೀಸ್ ಠಾಣೆಯಲ್ಲಿ, ಮಾಜಿ ಶಾಸಕ ಶಾನವಾಜ್ ರಾಣಾ ಮತ್ತು ಅವರ ಇಬ್ಬರು ಪುತ್ರರ ವಿರುದ್ಧ ಪ್ರಕರಣ ದಾಖಲಾಗಿದೆ.
ನಕಲಿ ದಾಖಲೆಗಳನ್ನು ಬಳಸಿಕೊಂಡು, ಸ್ಕ್ರಾಪ್ ವ್ಯಾಪಾರಿಯೊಬ್ಬರಿಗೆ 75 ಲಕ್ಷ ರೂಪಾಯಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ.
ಸ್ಕ್ರ್ಯಾಪ್ ವ್ಯಾಪಾರಿ ಜಿತೇಂದ್ರ ಚೌಧರಿ ಈ ದೂರು ನೀಡಿದ್ದಾರೆ. ಶಾಸಕರ ಪುತ್ರರಾದ ಅಬ್ದುಲ್ ಅಹ್ಮದ್ ರಾಣಾ ಮತ್ತು ಅಜಮ್ ಶಾ ರಾಣಾ ಅವರ ವಿರುದ್ಧವೂ ತನಿಖೆ ನಡೆಯುತ್ತಿದೆ.
ಚೌಧರಿ ಅವರ ದೂರಿನ ಪ್ರಕಾರ, ರಾಣಾ ಅವರು ತಮ್ಮ ಘಟಕಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ತೋರಿಸಿ, ಚೌಧರಿಯವರಿಂದ 75 ಲಕ್ಷ ರೂಪಾಯಿ ಮೌಲ್ಯದ ಕಬ್ಬಿಣದ ಸ್ಕ್ರ್ಯಾಪ್ ಮತ್ತು ಇತರ ಕಬ್ಬಿಣದ ಸಾಮಗ್ರಿಗಳನ್ನು ಖರೀದಿಸಿದ್ದಾರೆ. ಅವರು ಹಣ ಪಾವತಿಸಿಲ್ಲ ಮತ್ತು ತಮಗೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಚೌಧರಿ ಆರೋಪಿಸಿದ್ದಾರೆ.