ರಕ್ತದ ಮಡುವಿನಲ್ಲಿ ಪೈಲಟ್`ಗಳು, ಫ್ಲೈಟ್ ಲ್ಯಾಂಡ್ ಮಾಡಿದ ಪ್ಲಂಬರ್; FlyDubai ವಿಮಾನ ಪತನವಾಗದಿದ್ದದ್ದೇ ಅಚ್ಚರಿ!

ಅಚ್ಚರಿ ಎಂದರೆ ಸ್ಮಿತ್ ಮಚ್ಚರ್ ಅವರೊಂದಿಗೆ ಪ್ಲಂಬರ್, ದಂತ ವೈದ್ಯ ಹಾಗೂ ವಿಮಾನದಲ್ಲಿದ್ದ ಇತರ ಸಿಬ್ಬಂದಿಯ ಸಮಯಪ್ರಜ್ಞೆಯೂ ಭಾರೀ ದುರಂತವೊಂದನ್ನು ತಪ್ಪಿಸಲು ನೆರವಾಗಿದ್ದಾರೆ.
Hero pilot, plumber and dentist among those who saved flydubai flight to Israel
ಸ್ಮಿತ್ ಮಚ್ಚರ್ ಸಾಹಸ ಮತ್ತು ಫ್ಲೈ ದುಬೈ ವಿಮಾನ ಘಟನೆ
Updated on: 

ನವದೆಹಲಿ: ಫ್ಲೈದುಬೈ ವಿಮಾನದಲ್ಲಿನ ಪೈಲಟ್ ಗಳ ಸಂಘರ್ಷದ ನಡುವೆಯೇ ಪತನದ ಅಂಚಿನಲ್ಲಿದ್ದ ವಿಮಾನವನ್ನು ಪ್ಲಂಬರ್ ಮತ್ತು ಡೆಂಟಿಸ್ಟ್ ಸಹ ಪ್ರಯಾಣಿಕರು ಲ್ಯಾಂಡ್ ಮಾಡಿದ ಅಚ್ಚರಿ ವಿಚಾರ ಬೆಳಕಿಗೆ ಬಂದಿದೆ.

ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್‌ನ ದಾಳಿಗೆ ಗುರಿಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಕಾಕ್‌ಪಿಟ್ ಬಾಗಿಲಿನ ಲಾಕ್‌ ತೆರೆಯುವಲ್ಲಿ ಯಶಸ್ವಿಯಾದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್, ವಿಮಾನದಲ್ಲಿದ್ದ 174 ಪ್ರಯಾಣಿಕರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಚ್ಚರಿ ಎಂದರೆ ಸ್ಮಿತ್ ಮಚ್ಚರ್ ಅವರೊಂದಿಗೆ ಪ್ಲಂಬರ್, ದಂತ ವೈದ್ಯ ಹಾಗೂ ವಿಮಾನದಲ್ಲಿದ್ದ ಇತರ ಸಿಬ್ಬಂದಿಯ ಸಮಯಪ್ರಜ್ಞೆಯೂ ಭಾರೀ ದುರಂತವೊಂದನ್ನು ತಪ್ಪಿಸಲು ನೆರವಾಗಿದ್ದಾರೆ.

ಆಗಿದ್ದೇನು?

ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ಎಫ್‌ಜೆ1073 ವಿಮಾನದಲ್ಲಿ ಕಾಕ್‌ಪಿಟ್‌ನಲ್ಲಿ ಸಹ ಪೈಲಟ್‌ನೊಂದಿಗೆ ಸಂಘರ್ಷ ನಡೆದಿತ್ತು. ಓಮನ್ ಮೂಲದವರೆಂದು ವರದಿಯಾಗಿರುವ ಸಹ ಪೈಲಟ್ ಸ್ಮಿತ್ ಮಚ್ಚರ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸ್ಮಿತ್ ಮಚ್ಚರ್ ಕಾಕ್‌ಪಿಟ್ ನೆಲದ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿದ್ದರು. ಆದರೂ ಅವರು ಕಾಕ್‌ಪಿಟ್ ಬಾಗಿಲಿನ ಬಿಡುಗಡೆ ವ್ಯವಸ್ಥೆಯನ್ನು ಒತ್ತಿ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು.

ಇದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಒಳಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು. ಘರ್ಷಣೆಯ ವೇಳೆ ವಿಮಾನ 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಸುಮಾರು ಬರೊಬ್ಬರಿ 14 ಸಾವಿರ ಅಡಿ ಕೆಳಕ್ಕೆ ಕುಸಿದಿತ್ತು ಎಂದು ಇಸ್ರೇಲಿ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಯಾಗಿದೆ.

Hero pilot, plumber and dentist among those who saved flydubai flight to Israel
‘ನಿಮ್ಮ ಪ್ರಾರ್ಥನೆಗೆ ಧನ್ಯವಾದ’: ಭಾರತದ ಹೀರೋ ಪೈಲಟ್ ಸ್ಮಿತ್ ಮಚ್ಚರ್ ಅಪಾಯದಿಂದ ಪಾರು!

ಪ್ಲಂಬರ್ ಕೈಗೆ ವಿಮಾನದ ನಿಯಂತ್ರಣ

ಈ ಭಯಾನಕ ಘಟನೆ ನಡುವೆಯೇ ಪತನದ ಅಂಚಿನಲ್ಲಿದ್ದ ವಿಮಾನವನ್ನು ಪ್ಲಂಬರ್ ಮತ್ತು ದಂತವೈದ್ಯರು ಸೇರಿದಂತೆ ಇತರೆ ಸಹ ಪ್ರಯಾಣಿಕರು ವಿಮಾನಲನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.

ಈ ವಿಚಾರವನ್ನು ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಂಚಿಕೊಂಡಿದ್ದು, ಕಾಕ್‌ಪಿಟ್‌ಗೆ ಪ್ರವೇಶಿಸಿದ ಪ್ರಯಾಣಿಕರಲ್ಲಿ ಯಾನಿವ್ ಹಯೂನ್ ಎಂಬ ಪ್ಲಂಬರ್ ಕೂಡ ಇದ್ದರು. ಅವರೇ ಇತರೆ ಪ್ರಯಾಣಿಕರ ನೆರವಿನಿಂದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು ಎಂದು ಮಾಹಿತಿ ನೀಡಿದ್ದಾರೆ.

ಪೈಲಟ್ ನಿರ್ದೇಶನದಂತೆ ವಿಮಾನ ಕಂಟ್ರೋಲ್

ಆರಂಭದಲ್ಲಿ ಸತತವಾಗಿ ಕೆಳಗೆ ಕುಸಿಯುತ್ತಿದ್ದ ವಿಮಾನವನ್ನು ಅಲ್ಲಿದ್ದ ಪ್ರಯಾಣಿಕ ಹಾಗೂ ವೃತ್ತಿಯಲ್ಲಿ ಪ್ಲಂಬರ್ ಆಗಿರುವ ಹಯೂನ್ ಕಂಟ್ರೋಲ್ ಮಾಡಲು ಮುಂದಾದರು. ಬಳಿಕ ಇತರ ವಿಮಾನ ಸಿಬ್ಬಂದಿ ನಿಯಂತ್ರಣ ವಹಿಸಿಕೊಂಡರು. ವಿಮಾನದಲ್ಲೇ ಮುಂದಿನ ಹಾರಾಟಕ್ಕಾಗಿ ಪ್ರಯಾಣಿಸುತ್ತಿದ್ದ ರಿಸರ್ವ್ ಪೈಲಟ್‌ಗಳು ಕೂಡ ಕಾಕ್‌ಪಿಟ್‌ಗೆ ಪ್ರವೇಶಿಸಿ ವಿಮಾನವನ್ನು ಸ್ಥಿರಗೊಳಿಸಿ ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ಇಳಿಸಲು ನೆರವಾದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಹಯೂನ್, “ನಾನು ಹಿಂದೆ ಸರಿದು ನಿಯಂತ್ರಣವನ್ನು ಹಿಡಿದು, ಹ್ಯಾಂಡಲ್‌ಗಳನ್ನು ಹಿಂದಕ್ಕೆ ಎಳೆಯಲು ಆರಂಭಿಸಿದೆ. ಟಿವಿ ಕಾರ್ಯಕ್ರಮಗಳಲ್ಲಿ ನೋಡಿದ್ದ ರೀತಿಯಲ್ಲೇ ಮಾಡಿದೆ,” ಎಂದು ಹೇಳಿರುವುದಾಗಿ ವರದಿಯಾಗಿದೆ.

ದಂತ ವೈದ್ಯನಿಂದ ಪೈಲಟ್‌ಗೆ ನೆರವು

ದಂತ ವೈದ್ಯ ಡಾ. ಶೋಟಾ ಮುಸಾವ್ ಕೂಡ ಕಾಕ್‌ಪಿಟ್‌ಗೆ ಧಾವಿಸಿದವರಲ್ಲಿ ಒಬ್ಬರು. ಸಿಎನ್‌ಎನ್‌ಗೆ ಮಾತನಾಡಿದ ಅವರು, ದಾಳಿಕೋರ ಸ್ಮಿತ್ ಮಚ್ಚರ್ ಅವರ ಮೇಲೆ ದಾಳಿ ನಡೆಸುತ್ತಿರುವುದನ್ನು ಕಂಡಿದ್ದಾಗಿ ತಿಳಿಸಿದ್ದಾರೆ.

“ಅವರು ತಲೆಯ ಮೇಲೆ, ಕೈಗಳ ಮೇಲೆ ತೀವ್ರ ಗಾಯಗೊಂಡಿದ್ದರು. ಸಾಕಷ್ಟು ರಕ್ತಸ್ರಾವವಾಗಿತ್ತು. ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು,” ಎಂದು ಮುಸಾವ್ ಹೇಳಿದ್ದಾರೆ.

ಸ್ಮಿತ್ ಮಚ್ಚರ್ ಅವರ ರಕ್ತದೊತ್ತಡ ತೀವ್ರವಾಗಿ ಕುಸಿದು ಅವರು ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಅವರು ಹೇಳಿದ್ದಾರೆ. ಕೆಲವೇ ಕ್ಷಣಗಳ ವಿಳಂಬವಾಗಿದ್ದರೆ ಅವರನ್ನು ಕಳೆದುಕೊಳ್ಳುತ್ತಿದ್ದೆವು ಎಂಬ ಆತಂಕವೂ ವ್ಯಕ್ತಪಡಿಸಿದ್ದಾರೆ.

ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಸಾವ್ ಕೂಡ ನೆರವಾಗಿದ್ದು, ಹೆಡ್‌ಫೋನ್‌ಗಳ ತಂತಿ ಹಾಗೂ ಪ್ಲಾಸ್ಟಿಕ್ ಜಿಪ್‌ ಟೈಗಳ ಸಹಾಯದಿಂದ ಆತನನ್ನು ಕಟ್ಟಿಹಾಕಲಾಯಿತು ಎಂದು ವರದಿಯಾಗಿದೆ.

Hero pilot, plumber and dentist among those who saved flydubai flight to Israel
'ಕೊಡಲಿಯಿಂದ ದಾಳಿ, ರಕ್ತಸ್ರಾವದ ನಡುವೆಯೇ ಕರ್ತವ್ಯ ನಿರ್ವಹಣೆ': 9/11 ಮಾದರಿ ದುರಂತ ತಪ್ಪಿಸಿದ ಭಾರತೀಯ ಪೈಲಟ್; Netanyahu ಶ್ಲಾಘನೆ

‘ವಿಮಾನ ಹೇಗೆ ಪತನವಾಗಲಿಲ್ಲ ಎಂಬುದೇ ಅಚ್ಚರಿ’

ವಿಮಾನ ಇಷ್ಟು ವೇಗವಾಗಿ ಕೆಳಕ್ಕೆ ಇಳಿದಿದ್ದರೂ ಪತನವಾಗದೆ ಉಳಿದಿರುವುದು ಅಚ್ಚರಿ ಮೂಡಿಸಿದೆ ಎಂದು ವಿಮಾನಯಾನ ತಜ್ಞರು ಹೇಳಿದ್ದಾರೆ. ತೀವ್ರ ಇಳಿಕೆಯ ಸಂದರ್ಭದಲ್ಲಿ ವಿಮಾನದ ಬಾಲ ಭಾಗದ ರಡ್ಡರ್‌ಗೆ ಭಾರೀ ಹಾನಿಯಾಗಿತ್ತು ಎನ್ನಲಾಗಿದೆ.

ಮಾಜಿ ಯುನೈಟೆಡ್ ಏರ್‌ಲೈನ್ಸ್ ಪೈಲಟ್ ಹಾಗೂ ವಿಮಾನಯಾನ ಸುರಕ್ಷತಾ ತಜ್ಞ ಸ್ಟೀವ್ ಅರೋಯೊ, ವಿಮಾನವು ಅಷ್ಟು ತೀವ್ರವಾಗಿ ಕೆಳಕ್ಕೆ ಇಳಿದಿರುವುದು ಹಾಗೂ ರಡ್ಡರ್ ಮೇಲೆ ಉಂಟಾದ ವಾಯುಬಲದ ಪರಿಣಾಮ ಗಮನಾರ್ಹವಾಗಿದೆ ಎಂದು ಹೇಳಿದ್ದಾರೆ.

ಇನ್ನೊಬ್ಬ ವಿಮಾನಯಾನ ತಜ್ಞ ಜೆಫ್ ಗುಝೆಟ್ಟಿ, ವಿಮಾನವನ್ನು ಮರುಸ್ಥಿರಗೊಳಿಸಲು ಸಾಕಷ್ಟು ಎತ್ತರ ಉಳಿದಿದ್ದೇ ಅದೃಷ್ಟವಾಯಿತು ಎಂದು ಹೇಳಿದ್ದಾರೆ. ಸ್ಮಿತ್ ಮಚ್ಚರ್ ಅವರ ಕಾಕ್‌ಪಿಟ್ ಬಾಗಿಲು ತೆರೆಯುವ ಸಾಮರ್ಥ್ಯವೇ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರ ಜೀವ ಉಳಿಸುವಲ್ಲಿ ನಿರ್ಣಾಯಕವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com