SIR Row: ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್!

ಹೆಚ್ಚಿನ ಸಂಖ್ಯೆಯ ಭಾರತೀಯ ನಾಗರಿಕರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಲು ಕಾರಣವಾಗುವ ಯಾವುದೇ ಪ್ರಕ್ರಿಯೆಯು ನಿರಂಕುಶವಾದುದು ಮತ್ತು ಸಂವಿಧಾನದ 326 ಹಾಗೂ 14ನೇ ವಿಧಿಗಳ ನೇರ ಉಲ್ಲಂಘನೆಯಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
SC Justice Ujjal Bhuyan
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್
Updated on: 

ಹೈದರಾಬಾದ್: ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' ಕುರಿತು ದೇಶಾದ್ಯಂತ ತೀವ್ರ ಟೀಕೆ ಹಾಗೂ ಚರ್ಚೆಯಾಗುತ್ತಿರುವಂತೆಯೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಭಾನುವಾರ ಮಹತ್ವದ ಹೇಳಿಕೆ ನೀಡಿದ್ದಾರೆ. ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಂಖ್ಯೆಯ ಭಾರತೀಯ ನಾಗರಿಕರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಲು ಕಾರಣವಾಗುವ ಯಾವುದೇ ಪ್ರಕ್ರಿಯೆಯು ನಿರಂಕುಶವಾದುದು ಮತ್ತು ಸಂವಿಧಾನದ 326 ಹಾಗೂ 14ನೇ ವಿಧಿಗಳ ನೇರ ಉಲ್ಲಂಘನೆಯಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.

NALSAR ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ 19ನೇ NALSAR ನ್ಯಾಯಮೂರ್ತಿ ಬಿ.ಆರ್. ಸಾಹ್ನಿ ಸ್ಮಾರಕ ಮೂಟ್ ಕೋರ್ಟ್ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ಉಜ್ಜಲ್ ಭುಯಾನ್, ಲಕ್ಷಾಂತರ ಭಾರತೀಯ ನಾಗರಿಕರನ್ನು ಮತದಾನದ ಹಕ್ಕಿಲ್ಲದವರನ್ನಾಗಿ ಮಾಡುವ ಮೂಲಕ ತಮ್ಮದೇ ದೇಶದಲ್ಲಿ' ದ್ವಿತೀಯ ದರ್ಜೆಯ ನಾಗರಿಕರು' ಎಂದು ಪರಿಗಣಿಸುವಂತಹ ಯಾವುದೇ ಪ್ರಕ್ರಿಯೆಯು ಮೂಲಭೂತವಾಗಿ ನಿರಂಕುಶವಾದುದಾಗಿದೆ ಎಂದರು.

ಸಾಂವಿಧಾನಿಕ ವ್ಯವಸ್ಥೆಯನ್ನೇ ನಿರಾಕರಿಸುವಂತಿದೆ: ಎಷ್ಟೇ ಸಮರ್ಥನೆಗಳನ್ನು ನೀಡಿದರೂ ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇದು ಸಂವಿಧಾನದ ಮೂಲ ಆಶಯದ ಮೇಲೆಯೇ ದಾಳಿ ನಡೆಸುತ್ತದೆ.ಭಾರತದ ಸಂವಿಧಾನದ ಅಡಿಯಲ್ಲಿ ನಾವು ಅಳವಡಿಸಿಕೊಂಡಿರುವ ಸಾಂವಿಧಾನಿಕ ವ್ಯವಸ್ಥೆಯನ್ನೇ ಇದು ನಿರಾಕರಿಸುವಂತಿದೆ ಎಂದು ಹೇಳಬಯಸುತ್ತೇನೆ. ಸಂವಿಧಾನವು ನಾಗರಿಕರನ್ನು ಮತದಾನದ ಹಕ್ಕುಳ್ಳವರು ಮತ್ತು ಹಕ್ಕಿಲ್ಲದವರು ಎಂಬ ಎರಡು ವರ್ಗಗಳಾಗಿ ವಿಂಗಡಿಸುವುದಿಲ್ಲ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದರು.

ನಾಗರಿಕರನ್ನು ಎರಡು ವರ್ಗಗಳಾಗಿ ವಿಂಗಡಣೆಗೆ ಅವಕಾಶವಿಲ್ಲ:

ಭಾರತೀಯ ಸಂವಿಧಾನವು ಮತದಾನದ ಹಕ್ಕುಳ್ಳ ನಾಗರಿಕರು ಮತ್ತು ಮತದಾನದ ಹಕ್ಕಿಲ್ಲದ ನಾಗರಿಕರು ಎಂದು ಎರಡು ವರ್ಗಗಳಾಗಿ ವಿಂಗಡನೆಗೆ ಅವಕಾಶ ನೀಡಿಲ್ಲ. ಭಾರತೀಯ ನಾಗರಿಕರನ್ನು ಮತದಾನದ ಹಕ್ಕಿಲ್ಲದವರನ್ನಾಗಿ ಮಾಡುವ ಮೂಲಕ ಅವರನ್ನು ಸಾಮೂಹಿಕವಾಗಿ ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುವ ಯಾವುದೇ ಪ್ರಕ್ರಿಯೆಯು ಭಾರತೀಯ ಸಂವಿಧಾನದ 326 ಮತ್ತು 14ನೇ ವಿಧಿಗಳ ಉಲ್ಲಂಘನೆಯಾಗುತ್ತದೆ. ಭಾರತೀಯ ಪ್ರಜೆಯೊಬ್ಬರ ಮತದಾನದ ಹಕ್ಕನ್ನು ಅಥವಾ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸುವ ಹಕ್ಕನ್ನು ಕಸಿದುಕೊಳ್ಳುವುದು, ದೇಹದಿಂದ ಆತ್ಮವನ್ನು ಬೇರ್ಪಡಿಸಿದಂತೆಯೇ ಎಂದು ಅವರು ಹೇಳಿದರು.

ಸಂವಿಧಾನಕ್ಕಿಂತ ಮಿಗಿಲಾದವರು ಯಾರೂ ಇಲ್ಲ: ಸಂವಿಧಾನಕ್ಕಿಂತ ಮಿಗಿಲಾದವರು ಯಾರೂ ಇಲ್ಲ. ಯಾವುದೇ ಪ್ರಾಧಿಕಾರವು ಹೀಗೆ ಮಾಡಲು ಸಾಧ್ಯವಿಲ್ಲ ಮತ್ತು ಯಾವುದೇ ನ್ಯಾಯಾಲಯವು ಅಂತಹ ಪ್ರಕ್ರಿಯೆಯನ್ನು ಅನುಮೋದಿಸಲು ಸಾಧ್ಯವಿಲ್ಲ ಎಂದರು.

SC Justice Ujjal Bhuyan
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ಅ.7 ರಂದು ಚುನಾವಣಾ ಆಯೋಗದ ಕಚೇರಿ ಬಳಿ ಇಂಡಿಯಾ ಮೈತ್ರಿಕೂಟ ಪಕ್ಷಗಳಿಂದ ಪ್ರತಿಭಟನೆ!

ನೋಟಿಸ್ ನೀಡದೆ ಹೆಸರು ಡಿಲೀಟ್ ಮಾಡುವಂತಿಲ್ಲ: ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ತೆಗೆದುಹಾಕುವ ವಿಷಯದ ಕುರಿತು ಮಾತನಾಡಿದ ನ್ಯಾಯಮೂರ್ತಿ, ಮತದಾರರು ಮೃತಪಟ್ಟಿರುವ ಸಂದರ್ಭವನ್ನು ಹೊರತುಪಡಿಸಿ, ಒಮ್ಮೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ನಂತರ, ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡದೆ ಮತ್ತು ತಮ್ಮ ವಾದವನ್ನು ಮಂಡಿಸಲು ಅವಕಾಶ ನೀಡದೆ ಆ ಹೆಸರನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

"ಮೃತ ಮತದಾರರ ವಿಷಯದಲ್ಲಿ ಹೊರತುಪಡಿಸಿ, ಒಮ್ಮೆ ಮತದಾರರ ಪಟ್ಟಿಯಲ್ಲಿ ದಾಖಲಾದ ಹೆಸರನ್ನು ನೋಟಿಸ್ ನೀಡದೆ ಮತ್ತು ವಿಚಾರಣೆಯ ಅವಕಾಶ ನೀಡದೆ ತೆಗೆದುಹಾಕುವಂತಿಲ್ಲ. ಮತದಾನದ ಹಕ್ಕು ಪ್ರಜೆಯ ಮೂಲಭೂತ ಹಕ್ಕಲ್ಲ ಎಂದು ನ್ಯಾಯಾಲಯವು ಹಲವಾರು ತೀರ್ಪುಗಳಲ್ಲಿ ಅಭಿಪ್ರಾಯಪಟ್ಟಿದೆ. ಆದಾಗ್ಯೂ, ನ್ಯಾಯಾಲಯವು ಇದನ್ನು ಸಾಂವಿಧಾನಿಕ ಹಕ್ಕು ಎಂದು ಗುರುತಿಸಿದೆ. ಭಾರತೀಯ ಪ್ರಜೆಯ ಮತದಾನದ ಹಕ್ಕು ಸಂವಿಧಾನದ ಮೂಲ ರಚನೆಯ ಅವಿಭಾಜ್ಯ ಅಂಗವಾಗಿದೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳ ಅಡಿಪಾಯವಾಗಿದೆ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com