

ನವದೆಹಲಿ: ದಕ್ಷಿಣ ದೆಹಲಿಯ ಸತ್ಯನಿಕೇತನದಲ್ಲಿ ಐದು ಅಂತಸ್ತಿನ ಪಿಜಿ ಕಟ್ಟಡವೊಂದು ಕುಸಿದು ಬಿದ್ದು 7 ಮಂದಿ ಮೃತಪಟ್ಟ ಕೇವಲ ಒಂದು ತಿಂಗಳ ನಂತರ, ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಮತ್ತೊಂದು ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಮಧ್ಯಾಹ್ನ 3:30 ರ ಸುಮಾರಿಗೆ ಇಸ್ಗಾ ಮಚ್ಲಿ ಮಂಡಿ ಪ್ರದೇಶದ ಬಳಿ ಈ ಘಟನೆ ಸಂಭವಿಸಿದ್ದು, ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ದೆಹಲಿಯ ಸೀಮಾಪುರಿಯ ಈದ್ಗಾ ಮಸೀದಿ ಹಾಗೂ ಮೀನು ಮಾರುಕಟ್ಟೆಯ ಸಮೀಪವಿದ್ದ ಐದು ಅಂತಸ್ತಿನ ಕಟ್ಟಡವೊಂದು ಬುಧವಾರ ಮಧ್ಯಾಹ್ನ ಸರಿಸುಮಾರು 3:15 ರಿಂದ 3:30 ರ ಅವಧಿಯಲ್ಲಿ ದಿಢೀರನೆ ಕುಸಿದು ಬಿದ್ದಿದೆ. ಕಟ್ಟಡದ ಮುಂಭಾಗದ ಭಾಗವು ಕುಸಿದುಬಿದ್ದ ಪರಿಣಾಮ ಅವಶೇಷಗಳ ರಾಶಿ ರಸ್ತೆಯವರೆಗೂ ಆವರಿಸಿಕೊಂಡಿದೆ. ಏತನ್ಮಧ್ಯೆ, ದೆಹಲಿ ಅಗ್ನಿಶಾಮಕ ಸೇವೆ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವವರನ್ನು ಚಿಕಿತ್ಸೆಗಾಗಿ ತಕ್ಷಣವೇ ಹತ್ತಿರದ ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ.