

ನವದೆಹಲಿ: ದೇಶದಲ್ಲಿ ಆಡಳಿತ ಬದಲಾವಣೆಯಾಗಬೇಕು. ಆದರೆ, ಈ ಬದಲಾವಣೆಯು ಚುನಾವಣೆಗಳು ಮತ್ತು ಸಾಂವಿಧಾನಿಕ ಮಾರ್ಗಗಳ ಮೂಲಕವೇ ನಡೆಯಬೇಕು ಎಂದು ನಟ ಪ್ರಕಾಶ್ ರಾಜ್ ಅವರು ಶುಕ್ರವಾರ ಹೇಳಿದ್ದಾರೆ.
ಇಂಡಿಯಾ ಟುಡೆ ಜೊತೆಗೆ ಮಾತನಾಡಿದ ಅವರು, 2024 ಮತ್ತು 2025ರಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ನೇಪಾಳಗಳಲ್ಲಿ ಬೃಹತ್ ಪ್ರತಿಭಟನೆಗಳ ಮೂಲಕ ಸರ್ಕಾರಗಳನ್ನು ಉರುಳಿಸಿದ ಉದಾಹರಣೆಗಳನ್ನು ಉಲ್ಲೇಖಿಸುತ್ತಾ, ಭಾರತದಲ್ಲಿ ಅಂತಹ ಪರಿಸ್ಥಿತಿ ಬರಬಾರದು ಎಂದರು.
'ನಮಗೆ ಈ ಆಡಳಿತ ಬದಲಾಗಬೇಕು ಎಂದಿದೆ; ನಾವು ಈ ದೇಶದಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲೇ ಅದನ್ನು ಬದಲಾಯಿಸುತ್ತೇವೆ. ನಾವು ನೇಪಾಳವಲ್ಲ. ನಾವು ಬಾಂಗ್ಲಾದೇಶವಲ್ಲ. ನಮ್ಮಲ್ಲಿ ಅಂಬೇಡ್ಕರ್ ಇದ್ದಾರೆ. ಗಾಂಧೀಜಿ ಇದ್ದಾರೆ. ಭಗತ್ ಸಿಂಗ್ ಇದ್ದಾರೆ. ನಮ್ಮಲ್ಲಿ ಸಂವಿಧಾನವಿದೆ. ನಮಗೆ ಮತದಾನದ ಹಕ್ಕಿದೆ. ಉತ್ತರ ಪ್ರದೇಶದ ಚುನಾವಣೆಯಿಂದ ಹಿಡಿದು 2029ರ ಲೋಕಸಭಾ ಚುನಾವಣೆವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ' ಎಂದು ಹೇಳಿದರು.
ಶುಕ್ರವಾರ ದೆಹಲಿಯಲ್ಲಿ ನಡೆಯಲಿದ್ದ 'ತಿರಂಗಾ ಮಾರ್ಚ್'ಗೂ ಮುನ್ನ, 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ವಶಕ್ಕೆ ಪಡೆದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ವ್ಯಕ್ತಪಡಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಬಲಪ್ರಯೋಗ ಮಾಡುತ್ತಿದೆ. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಸರ್ಕಾರ ನಿರಾಕರಿಸಿರುವುದು ಅವರನ್ನು ಇನ್ನಷ್ಟು ಹತಾಶರನ್ನಾಗಿಸಿದೆ ಮತ್ತು ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಆಗ್ರಹಿಸುವಂತೆ ಮಾಡಿದೆ ಎಂದು ಅವರು ಹೇಳಿದರು.
ಶಾಂತಿಯುತ ಪ್ರತಿಭಟನೆಗಳು ಮತ್ತು ಚುನಾವಣಾ ಬದಲಾವಣೆಗಾಗಿನ ಕರೆಗಳನ್ನು ಅರಾಜಕತೆ ಎಂದು ಬಿಂಬಿಸುವ ಅಭಿಪ್ರಾಯಗಳನ್ನು ತಳ್ಳಿಹಾಕಿದ ಅವರು, ನಾಗರಿಕರು ಪ್ರಶ್ನಿಸುವ, ಪ್ರತಿಭಟಿಸುವ ಮತ್ತು ಮತ ಚಲಾಯಿಸುವ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ. 'ನಮ್ಮ ಬಳಿ ಶಸ್ತ್ರಾಸ್ತ್ರಗಳಿಲ್ಲ. ಆದರೆ, ನಮ್ಮ ಬಳಿ ಸಂವಿಧಾನವಿದೆ. ಪ್ರತಿಭಟಿಸುವ ಹಕ್ಕೇ ನಮ್ಮ ಶಸ್ತ್ರಾಸ್ತ್ರವಾಗಿದೆ' ಎಂದು ಹೇಳಿದರು.
'ತಿರಂಗಾ ಮಾರ್ಚ್' (ತ್ರಿವರ್ಣ ಧ್ವಜ ಮೆರವಣಿಗೆ) ಗೂ ಮುನ್ನವೇ ನಡೆದ ಬಂಧನಗಳ ಬಗ್ಗೆ ಪ್ರಶ್ನಿಸಿರುವ ರಾಜ್, ರಾಷ್ಟ್ರಧ್ವಜವನ್ನು ಪ್ರದರ್ಶಿಸುವಂತೆ ಜನರನ್ನು ಪ್ರೋತ್ಸಾಹಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಯಾನವನ್ನು ಉಲ್ಲೇಖಿಸಿದ್ದಾರೆ. 'ನಾನು ಮೋದಿಯವರನ್ನು ಕೇಳುತ್ತಿದ್ದೇನೆ, ನಿಮ್ಮ 'ಹರ್ ಘರ್ ತಿರಂಗಾ' ಘೋಷಣೆಗೆ ಏನಾಯಿತು?. ಈ ದೇಶದ ಯುವಜನರು ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ನಡೆಯಲು ಬಯಸುತ್ತಿದ್ದಾರೆ' ಎಂದರು.
ಮಹಿಳೆಯರು ಸೇರಿದಂತೆ ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಮತ್ತು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವಂತೆ ವಿರೋಧ ಪಕ್ಷಗಳನ್ನು ಒತ್ತಾಯಿಸಿದರು. ನಾಗರಿಕರು ಶಾಂತಿಯುತ ಬೀದಿ ಪ್ರತಿಭಟನೆಗಳನ್ನು ಮುಂದುವರಿಸಲಿದ್ದಾರೆ ಎಂದು ಅವರು ಹೇಳಿದರು.
ರೈತರು, 'ಸಂಯುಕ್ತ ಕಿಸಾನ್ ಮೋರ್ಚಾ' ಮತ್ತು ನಾಗರಿಕ ಸಮಾಜದ ಗುಂಪುಗಳಿಂದ ಬೆಂಬಲ ಸಿಗುತ್ತಿರುವುದನ್ನು ಉಲ್ಲೇಖಿಸಿದ ರಾಜ್, ಪ್ರತಿಭಟನೆಯ ಮುಂದಿನ ಹಂತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬೀದಿಗಿಳಿಯಲಿದ್ದಾರೆ ಎಂದು ತಿಳಿಸಿದರು.