ಸೌರವ್ ದಾಸ್, ಆಶುತೋಷ್ ರಂಕಾಗೆ ಹಿನ್ನಡೆ: CJP ನಾಯಕರ ನ್ಯಾಯಾಂಗ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಾಪಸ್; ದೆಹಲಿ ಹೈಕೋರ್ಟ್ ಹೇಳಿದ್ದೇನು?

ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರು ಅರ್ಜಿಯ ವಿಚಾರಣೆ ನಡೆಸಿದರು. ಪ್ರಕರಣದ ಅರ್ಹತೆ ಅಥವಾ ಸತ್ಯಾಸತ್ಯತೆ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯ ಅನುಮತಿ..
CJP leaders Saurav Das and Ashutosh Ranka
ಬಂಧಿತ ಸಿಜೆಪಿ ನಾಯಕರು
Updated on: 

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ತಮ್ಮ ನ್ಯಾಯಾಂಗ ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಕಾಕ್‌ರೋಚ್ ಜನತಾ ಪಾರ್ಟಿ (CJP) ನಾಯಕರು ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಬುಧವಾರ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.

ಪ್ರಕರಣದಲ್ಲಿ ಪರ್ಯಾಯ ಕಾನೂನು ಪರಿಹಾರ ಲಭ್ಯವಿರುವುದರಿಂದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನ್ಯಾಯಾಲಯ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರು ಅರ್ಜಿಯ ವಿಚಾರಣೆ ನಡೆಸಿದರು. ಪ್ರಕರಣದ ಅರ್ಹತೆ ಅಥವಾ ಸತ್ಯಾಸತ್ಯತೆ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯ ಅನುಮತಿ ನೀಡಿತು.

ಬುಧವಾರ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಮುಂದೆ ನಡೆದ ವಿಚಾರಣೆಯಲ್ಲಿ ಏನಾಯಿತು ಎಂಬುದನ್ನು ಗಮನಿಸುವಂತೆ ದಾಸ್ ಮತ್ತು ರಂಕಾಗೆ ನ್ಯಾಯಾಲಯ ಸಲಹೆ ನೀಡಿತು. ಆ ಬಳಿಕವೂ ತಮ್ಮ ಅಹವಾಲು ಮುಂದುವರಿದರೆ ಮೇಲ್ಮನವಿ ಸಲ್ಲಿಸಬಹುದು ಎಂದು ತಿಳಿಸಿತು.

CJP leaders Saurav Das and Ashutosh Ranka
ಸೌರವ್ ದಾಸ್, ಅಶುತೋಷ್ ರಂಕಾ ವಿರುದ್ಧದ ಎರಡನೇ ಪ್ರಕರಣ ಕ್ರೈಮ್ ಬ್ರಾಂಚ್‌ಗೆ ವರ್ಗಾಯಿಸಿದ ದೆಹಲಿ ಪೊಲೀಸರು!

ಅ.21ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಅಕ್ಟೋಬರ್ 19ರಂದು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಆದೇಶದ ಮೂಲಕ ಅವರ ನ್ಯಾಯಾಂಗ ಬಂಧನವನ್ನು ಇನ್ನೂ ಎರಡು ದಿನಗಳ ಕಾಲ, ಅಂದರೆ ಅಕ್ಟೋಬರ್ 21ರವರೆಗೆ ವಿಸ್ತರಿಸಲಾಗಿತ್ತು.

ದುರ್ಗಾ ಪೂಜಾ ರಜೆ ಹಿನ್ನೆಲೆಯಲ್ಲಿ ಈ ವಾರದ ಆರಂಭದಲ್ಲಿ ಮುಚ್ಚಿದ್ದ ಹೈಕೋರ್ಟ್ ಮತ್ತೆ ಕಾರ್ಯಾರಂಭ ಮಾಡಿದ ಬಳಿಕ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು.

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ; ಅ.13ರಂದು ಬಂಧನ

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಸ್ಥಳವನ್ನು ಈ ಹಿಂದೆ ಅಧಿಕೃತ ಪ್ರತಿಭಟನಾ ತಾಣದ ಮಾನ್ಯತೆಯಿಂದ ಕೈಬಿಡಲಾಗಿತ್ತು. ಅಕ್ಟೋಬರ್ 13ರಂದು ಈ ಸ್ಥಳದ ಬೀಗ ಹಾಕಿದ್ದ ಗೇಟ್ ಹಾರಿ ಒಳಪ್ರವೇಶಿಸಿದ ಆರೋಪದ ಹಿನ್ನೆಲೆಯಲ್ಲಿ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

CJPಯ ಇತರ ಕಾರ್ಯಕರ್ತರೊಂದಿಗೆ ಇಬ್ಬರೂ ಸ್ಥಳದಲ್ಲಿ ರಾಷ್ಟ್ರಧ್ವಜ ಪ್ರದರ್ಶಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಬಳಿಕ ಪೊಲೀಸರು ಅವರನ್ನು ತಡೆದು ಮುಂಜಾಗ್ರತಾ ಕ್ರಮದಡಿ ಬಂಧಿಸಿದ್ದರು. ಸೋಮವಾರ ಇಬ್ಬರನ್ನು ಮಂದಿರ್ ಮಾರ್ಗ್ ಪೊಲೀಸ್ ಠಾಣೆಯ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಅಕ್ಟೋಬರ್ 21ರವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಲಾಗಿತ್ತು.

CJP leaders Saurav Das and Ashutosh Ranka
ನ್ಯಾಯಾಂಗ ಬಂಧನದ ವಿರುದ್ಧ ಸಿಜೆಪಿಯ ಸೌರವ್, ಅಶುತೋಷ್ ಹೈಕೋರ್ಟ್‌ ಗೆ ಮೊರೆ

ಪೊಲೀಸರ ಆರೋಪವೇನು?

ದೆಹಲಿ ಪೊಲೀಸರ ಪ್ರಕಾರ, ಪ್ರತಿಭಟನಾಕಾರರು ಖಾಸಗಿ ಆವರಣದ ಮೂಲಕ ಅತಿಕ್ರಮ ಪ್ರವೇಶ ಮಾಡಿ, ಅಧಿಕೃತ ಪ್ರತಿಭಟನಾ ಸ್ಥಳದ ಮಾನ್ಯತೆ ಕಳೆದುಕೊಂಡಿದ್ದ ಪ್ರದೇಶವನ್ನು ಪ್ರವೇಶಿಸಿದ್ದರು. ಅಲ್ಲದೆ, ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಅಡ್ಡಿಪಡಿಸಿದ್ದರು ಎಂದು ಆರೋಪಿಸಲಾಗಿದೆ.

ಆದರೆ, ಪ್ರಕರಣದಲ್ಲಿ ತಮ್ಮ ಇಬ್ಬರು ಸಹ ಸಂಚಾಲಕರನ್ನು ಬಿಡುಗಡೆ ಮಾಡದಂತೆ ಜಾಮೀನು ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲಾಗುತ್ತಿದೆ ಎಂದು CJP ಆರೋಪಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com