ರಾಮಮಂದಿರ ದೇಣಿಗೆ ಕಳ್ಳತನ: ಕಳ್ಳರ ಪಾಪ ಮುಚ್ಚಿಡಲು ಯತ್ನಿಸುತ್ತಿದೆಯೇ ಸರ್ಕಾರ..? ಮೋದಿ, ಶಾ, ಯೋಗಿ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಗಳ ಕಳವು ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಕ್ಷಿಸುತ್ತಿದ್ದು, ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು.
Jai ram ramesh
ಜೈರಾಮ್ ರಮೇಶ್online desk
Updated on: 

ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಮತ್ತು ಕಾಣಿಕೆಗಳ ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಹಗರಣದಲ್ಲಿ ಭಾಗಿಯಾಗಿರುವ "ಕಳ್ಳರ ಪಾಪಗಳನ್ನು" ಮುಚ್ಚಿಡಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಗಳ ಕಳವು ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಕ್ಷಿಸುತ್ತಿದ್ದು, ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಚಾರದಲ್ಲಿ ಪ್ರಧಾನಿ ಮೋದಿ ಮೌನ ಮುರಿಯಬೇಕು. ಹೊಣೆಗಾರಿಕೆಯನ್ನು ಖಚಿತಪಡಿಸುವ ಬದಲು ಸರ್ಕಾರವು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ವಿಶ್ವ ಹಿಂದೂ ಪರಿಷತ್‌ಗೆ (ವಿಎಚ್‌ಪಿ) ನಂಟಿರುವ ವ್ಯಕ್ತಿಗಳನ್ನು ರಾಮಮಂದಿರ ಟ್ರಸ್ಟ್‌ನ ಟ್ರಸ್ಟಿಗಳಾಗಿ ನೇಮಕ ಮಾಡಿರುವುದನ್ನೂ ಅವರು ಪ್ರಶ್ನಿಸಿದ್ದಾರೆ. ಅವರ ಉಸ್ತುವಾರಿಯಲ್ಲೇ ಕಾಣಿಕೆ ಕಳವು ನಡೆದಿದೆ ಎನ್ನಲಾದರೂ ಪ್ರಧಾನಿ ಸಮಗ್ರ ತನಿಖೆಗೆ ಆದೇಶಿಸದಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಆರ್‌ಎಸ್‌ಎಸ್ ಮತ್ತು ರಾಮಮಂದಿರ ಟ್ರಸ್ಟ್‌ಗೆ ಸಂಬಂಧಿಸಿದ ಅಂಕಿಅಂಶಗಳನ್ನು ಉಲ್ಲೇಖಿಸಿದ ರಮೇಶ್ ಅವರು, 2021ರಲ್ಲಿ ನಡೆದ ನಿಧಿ ಸಮರ್ಪಣಾ ಅಭಿಯಾನ ಹಾಗೂ ಇತರ ದೇಣಿಗೆಗಳ ಮೂಲಕ ಒಟ್ಟು 3,264 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

2025ರ ಏಪ್ರಿಲ್ 1ರಿಂದ 2026ರ ಫೆಬ್ರವರಿ 28ರವರೆಗೆ 82.78 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎನ್ನಲಾದ ಅಂಕಿಅಂಶಗಳ ಬಗ್ಗೆಯೂ ಅವರು ಪ್ರಶ್ನಿಸಿದ್ದಾರೆ.

Jai ram ramesh
ರಾಮಮಂದಿರ ಪ್ರಸಾದವೆಂದು ಸಿಹಿತಿಂಡಿ ಮಾರಿದ್ದ ಅಮೆಜಾನ್‌ಗೆ ಶಾಕ್; ಲಕ್ಷ ರೂಪಾಯಿ ದಂಡ ವಿಧಿಸಿದ CCPA

ಕೋಟ್ಯಾಂತರ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದರೂ ಕಾಣಿಕೆ ಸಂಗ್ರಹದ ಪ್ರಮಾಣದ ಕುರಿತು ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

2024ರ ಮೊದಲ ಒಂಬತ್ತು ತಿಂಗಳಲ್ಲಿ 13.55 ಕೋಟಿ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದರೆ, 2025ರ ಮಹಾಕುಂಭದ ಸಂದರ್ಭದಲ್ಲಿ ಸುಮಾರು 10 ಕೋಟಿ ಜನರು ಭೇಟಿ ನೀಡಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.

ರಾಮಮಂದಿರಕ್ಕೆ ಒಟ್ಟು ಎಷ್ಟು ದೇಣಿಗೆ ಸಂಗ್ರಹಿಸಲಾಗಿದೆ, ಕಾಣಿಕೆ ಹುಂಡಿಗಳಲ್ಲಿ ಎಷ್ಟು ಹಣ ಜಮೆಯಾಗಿದೆ ಮತ್ತು ಕಳವಾಗಿದೆ ಎನ್ನಲಾದ ಕಾಣಿಕೆಗಳ ಒಟ್ಟು ಮೌಲ್ಯ ಎಷ್ಟು ಎಂಬ ವಿವರಗಳನ್ನೂ ಅವರು ಕೇಳಿದ್ದಾರೆ.

ವಿಶೇಷ ತನಿಖಾ ತಂಡ (ಎಸ್‌ಐಟಿ) ಕಳವಾದ ಮೊತ್ತ ಕೇವಲ 80 ಲಕ್ಷ ರೂಪಾಯಿ ಎಂದು ಅಂದಾಜಿಸಿರುವುದೇಕೆ ಎಂಬುದನ್ನೂ ಅವರು ಪ್ರಶ್ನಿಸಿದ್ದಾರೆ.

ಸುಮಾರು 30 ಕೋಟಿ ಭಕ್ತರು ಸಲ್ಲಿಸಿದ ಕಾಣಿಕೆಗಳ ಲೆಕ್ಕಪತ್ರವನ್ನು ಸರಿಯಾಗಿ ನಿರ್ವಹಿಸಲಾಗಿದೆಯೇ ಎಂಬುದಕ್ಕೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ.

ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಈ ಘಟನೆಯನ್ನು “ಹಗಲು ದರೋಡೆ” ಎಂದು ಬಣ್ಣಿಸಿದ್ದಾರೆ ಎನ್ನಲಾದ ಹೇಳಿಕೆಯನ್ನು ಉಲ್ಲೇಖಿಸಿದ ರಮೇಶ್, ಇಷ್ಟೊಂದು ಗಂಭೀರ ಆರೋಪಗಳಿದ್ದರೂ ಸರ್ಕಾರ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಆದೇಶಿಸದಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಮೌನ ಮುಂದುವರಿಸಿದರೂ ಕಾಂಗ್ರೆಸ್ ಈ ವಿಚಾರವನ್ನು ಕೈಬಿಡುವುದಿಲ್ಲ. ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗುವವರ ವಿರುದ್ಧ ಸಂವಿಧಾನದ ಪ್ರಕಾರ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಪ್ರಕರಣದಲ್ಲಿ ರಾಮಮಂದಿರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿದಂತೆ ಇತರರನ್ನು ರಕ್ಷಿಸಲಾಗುತ್ತಿದೆ ಎಂದು ಕಾಂಗ್ರೆಸ್ ಈ ಹಿಂದೆಯೂ ಬಿಜೆಪಿ ವಿರುದ್ಧ ಆರೋಪಿಸಿತ್ತು.

ಜೂನ್ 4ರಂದು ಕಾಣಿಕೆ ಕಳವಿಗೆ ಸಂಬಂಧಿಸಿದ ವಿಡಿಯೊವೊಂದು ಚಂಪತ್ ರಾಯ್ ಅವರಿಗೆ ತಲುಪಿದೆ ಎನ್ನಲಾದರೂ, ಎಫ್‌ಐಆರ್ ದಾಖಲಿಸಲು 21 ದಿನಗಳ ವಿಳಂಬವಾಗಿರುವುದನ್ನೂ ಪಕ್ಷ ಪ್ರಶ್ನಿಸಿದೆ.

ಎಸ್‌ಐಟಿ ತನಿಖೆಯು ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಪಾರದರ್ಶಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com