

ಪಾಟ್ನಾ: ಬಿಹಾರದ ಮೊದಲ ಮುಖ್ಯಮಂತ್ರಿ ಡಾ. ಶ್ರೀಕೃಷ್ಣ ಸಿಂಗ್ ಅವರ 139ನೇ ಜನ್ಮ ದಿನಾಚರಣೆಯಂದು ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ವೇಳೆ ಕಾಂಗ್ರೆಸ್ ಸದಸ್ಯನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೊಗಳಿದ್ದು ನಂತರ ಗದ್ದಲ ಭುಗಿಲೆದ್ದಿತು. ಪ್ರಧಾನಿ ಮೋದಿ ಎಲ್ಲೂ ಹೋಗಲ್ಲ ಎಂದು ವ್ಯಕ್ತಿ ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಖರ್ಗೆ, ಮೋದಿ ಏನ್ ಅವರ ಅಪ್ಪನೂ ಹೋಗ್ತಾರೆ' ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಸಭಾಂಗಣದಲ್ಲಿ ವ್ಯಕ್ತಿಗೆ ಕಾಂಗ್ರೆಸ್ ಕಾರ್ಯಕರ್ತರು ಹಿಗ್ಗಾಮುಗ್ಗ ಥಳಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಛಪ್ರಾ ನಿವಾಸಿ ಸಂತೋಷ್ ಕುಮಾರ್ ಎಂದು ಗುರುತಿಸಲಾಗಿದೆ. ಕಾಂಗ್ರೆಸ್ ಬೆಂಬಲಿಗ ಎಂದು ಹೇಳಿಕೊಂಡು ಖರ್ಗೆ ಭಾಷಣದ ವೇಳೆ ಪ್ರಧಾನಿ ಮೋದಿ ಪರ ಹೇಳಿಕೆ ನೀಡಿದ್ದಾರೆ. ಬೀದಿ ಹೋರಾಟಗಳಿಂದ ಮೋದಿಯವರನ್ನು ಅಧಿಕಾರದಿಂದ ತೆಗೆದುಹಾಕಲು ಸಾಧ್ಯವಾಗಲ್ಲ ಎಂದು ಅವರು ಹೇಳಿದ್ದು ಇದಕ್ಕೆ ಖರ್ಗೆ ಮೋದಿ ಅವರ ತಂದೆಯನ್ನೂ ಎಳೆತಂದಿದ್ದು ವಾಗ್ವಾದಕ್ಕೆ ಕಾರಣವಾಯಿತು.
SIR ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿದ ಖರ್ಗೆ
ಕಾರ್ಯಕ್ರಮದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು 'ಸ್ವಾತಂತ್ರ್ಯದ ಎರಡನೇ ಯುದ್ಧ' ಎಂದು ಖರ್ಗೆ ಬಣ್ಣಿಸಿದರು. ಈ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಭವಿಷ್ಯದಲ್ಲಿ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ಗಳ ಮೂಲಕ ನಡೆಸಬೇಕು. ಕಳೆದ ಎರಡು ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ವಿಪಕ್ಷ ಬೆಂಬಲಿಗರ ಹೆಸರನ್ನು ಮತದಾರರ ಪಟ್ಟಿಯಿಂದ ಬದಲಾವಣೆಗಳ ಮೂಲಕ ತೆಗೆದುಹಾಕಲಾಗುತ್ತಿದೆ. ಪಶ್ಚಿಮ ಬಂಗಾಳ, ಹರಿಯಾಣ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಕ್ರಿಯೆಯ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದರು. ಆದಾಗ್ಯೂ, ಇವು ಖರ್ಗೆ ಅವರ ರಾಜಕೀಯ ಆರೋಪಗಳಾಗಿವೆ.
ಖರ್ಗೆ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪ್ರಧಾನಿ ವಿರುದ್ಧ ಇಂತಹ ಭಾಷೆಯ ಬಳಕೆ ದುರದೃಷ್ಟಕರ ಎಂದು ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಹೇಳಿದ್ದು ಕಾಂಗ್ರೆಸ್ ನಿಂದನೀಯ ಭಾಷೆಯನ್ನು ಬಳಸುತ್ತಿದೆ ಎಂದು ಆರೋಪಿಸಿದರು. ದೇಶದ ಜನರು ಇಂತಹ ನಡವಳಿಕೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದರು.