

ಲಖನೌ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್ಪ್ರೆಸ್ವೇನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನಗಳು (Convoy) ಆಂಬ್ಯುಲೆನ್ಸ್ ಸೇರಿ ಹಲವರು ವಾಹಗಳಿಗೆ ಸರಣಿ ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ರಾಹುಲ್ ಗಾಂಧಿ ಅವರು ಕೂದಲೆಳೆ ಅಂತಹರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಕ್ಸ್ಪ್ರೆಸ್ವೇಯ 91ನೇ ಕಿಲೋಮೀಟರ್ ಮೈಲಿಗಲ್ಲಿನ ಬಳಿ ಐದು ವಾಹನಗಳು ಮತ್ತು ಆಂಬುಲೆನ್ಸ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಹಾಗೂ ಬೆಂಗಾವಲು ಪಡೆಯಲ್ಲಿದ್ದ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ ಬೆಳಿಗ್ಗೆ ಸುಮಾರು 10.15ಕ್ಕೆ ಈ ಅಪಘಾತ ಸಂಭವಿಸಿದೆ. ಬೆಂಗಾವಲು ಪಡೆಯ ಮುಂಭಾಗದಲ್ಲಿದ್ದ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಸೇರಿದ ಖಾಸಗಿ ವಾಹನವು ಯಾವುದೋ ಕಾರಣಕ್ಕೆ ಏಕಾಏಕಿ ಬ್ರೇಕ್ ಹಾಕಿದೆ.
ಇದರಿಂದ ಹಿಂಬದಿಯಲ್ಲಿದ್ದ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ ಎಂದು ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯೂ ಬೆಂಗಾವಲು ಪಡೆಯೊಂದಿಗೆ ಇದ್ದರು. ಮಾನನಷ್ಟ ಮೊಕದ್ದಮೆಯ ವಿಚಾರಣೆಗಾಗಿ ರಾಹುಲ್ ಗಾಂಧಿ ಅವರು ಬೆಳಿಗ್ಗೆ 11.15ರ ಸುಮಾರಿಗೆ ಸುಲ್ತಾನ್ಪುರ ನ್ಯಾಯಾಲಯಕ್ಕೆ ತಲುಪುವ ನಿರೀಕ್ಷೆಯಿತ್ತು.
ರಾಹುಲ್ ಗಾಂಧಿ ಸೋಮವಾರ ಬೆಳಿಗ್ಗೆ ಲಖನೌನ ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನು ಸ್ವಾಗತಿಸಲು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಪಕ್ಷದ ನಾಯಕರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಈ ನಡುವೆ ರಾಹುಲ್ ಗಾಂಧಿ ಅವರು ಸುಲ್ತಾನ್ಪುರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಲಿಲ್ಲ.
2018ರ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಆಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಈ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಪ್ರಕರಣದ ವಕೀಲರಲ್ಲಿ ಒಬ್ಬರಾದ ಕಾಶಿ ಪ್ರಸಾದ್ ಶುಕ್ಲಾ ಅವರು ಸೋಮವಾರ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಅವರು ಅಮಿತ್ ಶಾ ಅವರನ್ನು ಕೊಲೆ ಪ್ರಕರಣವೊಂದರ ಆರೋಪಿಯಾಗಿ ಉಲ್ಲೇಖಿಸಿದ್ದರು ಎಂದು ತಿಳಿಸಿದ್ದಾರೆ.
ಆಗ ಸುಲ್ತಾನ್ಪುರ ಜಿಲ್ಲಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷರಾಗಿದ್ದ ಹಾಗೂ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರಾಗಿದ್ದ ವಿಜಯ್ ಮಿಶ್ರಾ ಅವರು ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು.
ಈ ಪ್ರಕರಣದ ತೀರ್ಪನ್ನು ಆರಂಭದಲ್ಲಿ ಅಕ್ಟೋಬರ್ 13ರಂದು ಪ್ರಕಟಿಸಲು ನ್ಯಾಯಾಲಯ ನಿಗದಿಪಡಿಸಿತ್ತು. ಬಳಿಕ ತೀರ್ಪು ಪ್ರಕಟಿಸುವ ದಿನಾಂಕವನ್ನು ಅಕ್ಟೋಬರ್ 26ಕ್ಕೆ ಮುಂದೂಡಲಾಗಿತ್ತು.