Cyclone Arnab: ಪಶ್ಚಿಮ ಬಂಗಾಳ, ಜಾರ್ಖಂಡ್‌ಗೂ ಮಳೆ ಎಚ್ಚರಿಕೆ, 600 ಕಿ.ಮೀ ರೈಲು ಹಳಿಗಳ ಮೇಲೆ ತೀವ್ರ ನಿಗಾ

ಚಂಡಮಾರುತವು ಬುಧವಾರ ಮುಂಜಾನೆ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಅರ್ನಬ್ ಚಂಡಮಾರುತವು ನಾಳೆ ಮಧ್ಯಾಹ್ನದೊಳಗೆ ಆಂಧ್ರಪ್ರದೇಶದ ಬಾಪಟ್ಲಾ..
Cyclone Arnabs early morning landfall
ಅರ್ನಬ್ ಚಂಡಮಾರುತ ಅಬ್ಬರ
Updated on: 

ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಿಶಾಖಪಟ್ಟಣಂಗೆ ಮುಂಜಾನೆ ಅಪ್ಪಳಿಸಿರುವ ಅರ್ನಬ್ ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ನಲ್ಲೂ ಭಾರಿ ಅವಾಂತರ ಸೃಷ್ಟಿಮಾಡಿದೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ತೀವ್ರ ಸ್ವರೂಪದ ಅರ್ನಬ್ ಚಂಡಮಾರುತವು ಕರಾವಳಿ ತೀರಕ್ಕೆ ಮತ್ತಷ್ಟು ಹತ್ತಿರವಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆಯು ಆಂಧ್ರಪ್ರದೇಶ ರಾಜ್ಯಕ್ಕೆ ಅತ್ಯಂತ ಭಾರಿ ಮಳೆ ಹಾಗೂ ಬಿರುಗಾಳಿಯ ರೆಡ್ ಅಲರ್ಟ್ ಘೋಷಿಸಿದೆ.

ಈ ಚಂಡಮಾರುತವು ಬುಧವಾರ ಮುಂಜಾನೆ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಅರ್ನಬ್ ಚಂಡಮಾರುತವು ನಾಳೆ ಮಧ್ಯಾಹ್ನದೊಳಗೆ ಆಂಧ್ರಪ್ರದೇಶದ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವೆ ಇರುವ ಯಾನಾಂ ತೀರದ ಬಳಿ ಭೀಕರವಾಗಿ ಅಪ್ಪಳಿಸಲಿದೆ.

'ರೆಡ್ ಅಲರ್ಟ್' ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಉತ್ತರ ಕರಾವಳಿ ಜಿಲ್ಲೆಗಳು ಮತ್ತು ತಗ್ಗು ಪ್ರದೇಶಗಳಲ್ಲಿ ಅತ್ಯಂತ ಭಾರಿ ಮಳೆಯಾಗಲಿದೆ.

Cyclone Arnabs early morning landfall
ಸುನಾಮಿ ಅಲ್ಲ ಸೈಕ್ಲೋನ್: Arnab ಚಂಡಮಾರುತ ಅಬ್ಬರ, ಚೆನ್ನೈ ಕಡಲತೀರಕ್ಕೆ ಅಪ್ಪಳಿಸಿದ ರಕ್ಕಸ ಅಲೆಗಳು, ಕಟ್ಟೆಚ್ಚರ! Video

ಶಾಲಾ-ಕಾಲೇಜುಗಳಿಗೆ ರಜೆ

ಆಂಧ್ರಪ್ರದೇಶದ 10 ಪ್ರಮುಖ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅನಕಾಪಲ್ಲಿ ಜಿಲ್ಲೆಯಲ್ಲಿ 3 ದಿನಗಳ ಕಾಲ ರಜೆ ವಿಸ್ತರಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಅಪಾಯಕಾರಿ ಪ್ರದೇಶಗಳಿಂದ ಈಗಾಗಲೇ 50,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಆಶ್ರಯ ತಾಣಗಳಿಗೆ ರವಾನಿಸಲಾಗಿದ್ದು, ಒಟ್ಟು 4 ಲಕ್ಷ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ.

ಪಶ್ಚಿಮ ಬಂಗಾಳ, ಜಾರ್ಖಂಡ್‌ಗೂ ಮಳೆ ಎಚ್ಚರಿಕೆ

ಈ ನಡುವೆ ಚಂಡಮಾರುತದ ಪ್ರಭಾವ ಆಂಧ್ರ ಪ್ರದೇಶ ಮಾತ್ರವಲ್ಲದೇ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಲ್ಲೂ ಭಾರಿ ಅವಾಂತರ ಸೃಷ್ಟಿ ಮಾಡಿದೆ. ಚಂಡಮಾರುತದ ಪ್ರಭಾವದಿಂದ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಮಳೆಯಾಗಿದೆ.

ದಕ್ಷಿಣ 24 ಪರಗಣ ಮತ್ತು ಪೂರ್ವ ಮೇದಿನಿಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಝಾರ್ಗ್ರಾಮ್, ಪಶ್ಚಿಮ ಮೇದಿನಿಪುರ, ಹೌರಾ ಮತ್ತು ಕೋಲ್ಕತ್ತಾದ ಕೆಲವು ಭಾಗಗಳಲ್ಲಿಯೂ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಎರಡು ದಿನಗಳಲ್ಲಿ ದಕ್ಷಿಣ 24 ಪರಗಣ, ಪೂರ್ವ ಮತ್ತು ಪಶ್ಚಿಮ ಮೇದಿನಿಪುರ, ಝಾರ್ಗ್ರಾಮ್, ಪುರುಲಿಯಾ, ಬಂಕುರಾ ಹಾಗೂ ಪಶ್ಚಿಮ ಬರ್ಧಮಾನ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೋಲ್ಕತ್ತಾದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಅಕ್ಟೋಬರ್ 29 ಮತ್ತು 30ರಂದು ಡಾರ್ಜಿಲಿಂಗ್, ಕಾಲಿಂಪಾಂಗ್, ಅಲಿಪುರ್ದುವಾರ್ ಮತ್ತು ಜಲ್ಪೈಗುರಿ ಜಿಲ್ಲೆಗಳಲ್ಲಿಯೂ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ನೆರೆಯ ಜಾರ್ಖಂಡ್‌ನ ರಾಂಚಿ ಜಿಲ್ಲಾಡಳಿತವು ಮಳೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 28 ಮತ್ತು 29ರಂದು ಶಾಲೆಗಳನ್ನು ಮುಚ್ಚುವಂತೆ ಆದೇಶಿಸಿದೆ.

ರಾಂಚಿ, ಖುಂಟಿ, ಸಿಮ್ಡೆಗಾ, ಗುಮ್ಲಾ, ಲೋಹರ್ದಗಾ, ಸರೈಕೆಲಾ-ಖರ್ಸಾವನ್ ಹಾಗೂ ಪೂರ್ವ ಮತ್ತು ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಗಳಿಗೆ ಅಕ್ಟೋಬರ್ 28ರ ಬೆಳಗ್ಗೆ 8.30ರಿಂದ 24 ಗಂಟೆಗಳ ಅವಧಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಗುಡುಗು, ಮಿಂಚು ಮತ್ತು ಬಿರುಗಾಳಿಯ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.

Cyclone Arnabs early morning landfall
ಆಂಧ್ರ, ಒಡಿಶಾಗೆ 'Cyclone Arnab' ಅಬ್ಬರದ ಭೀತಿ; 50 ರೈಲು, 21 ವಿಮಾನಗಳ ಹಾರಾಟ ಸ್ಥಗಿತ, 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ!

600 ಕಿ.ಮೀ ರೈಲು ಹಳಿಗಳ ಮೇಲೆ ತೀವ್ರ ನಿಗಾ

ಚಂಡಮಾರುತದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಸುಮಾರು 600 ಕಿ.ಮೀ ಉದ್ದದ ರೈಲು ಹಳಿಗಳ ಮೇಲೆ ನಿಗಾ ಇರಿಸಿದೆ. ಸುರಕ್ಷತಾ ಕ್ರಮಗಳನ್ನು ಬಲಪಡಿಸಲಾಗಿದ್ದು, ಹಾನಿ ಸಂಭವಿಸಿದರೆ ತ್ವರಿತವಾಗಿ ರೈಲು ಸಂಚಾರ ಪುನರಾರಂಭಿಸಲು ವ್ಯವಸ್ಥೆ ಮಾಡಲಾಗಿದೆ. ವಲಯ, ವಿಭಾಗ ಮತ್ತು ರೈಲ್ವೆ ಮಂಡಳಿ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸಿ ದಿನದ 24 ಗಂಟೆಯೂ ಪರಿಸ್ಥಿತಿಯನ್ನು ಗಮನಿಸಲಾಗುತ್ತಿದೆ.

ದಕ್ಷಿಣ ಕರಾವಳಿ ರೈಲ್ವೆ ಬುಧವಾರದ 24 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಪೂರ್ವ ಕರಾವಳಿ ರೈಲ್ವೆ 22 ರೈಲುಗಳನ್ನು ರದ್ದುಗೊಳಿಸಿದ್ದು, ದಕ್ಷಿಣ ಪೂರ್ವ ರೈಲ್ವೆ ನಾಲ್ಕು ರೈಲುಗಳ ಸಂಚಾರ ಸ್ಥಗಿತಗೊಳಿಸಿದೆ. ಹೀಗೆ ಒಟ್ಟು ಕನಿಷ್ಠ 50 ರೈಲುಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com