ಲಂಡನ್‌ನಿಂದ ಯಾರಿಗೂ ತಿಳಿಸದೆ ಗೌಪ್ಯವಾಗಿ ಪುಣೆಗೆ ಬಂದಿದ್ದ ಮಹಿಳೆ ಶವವಾಗಿ ಪತ್ತೆ; ಫುಡ್ ಡೆಲಿವರಿ ವಹಿವಾಟಿನಿಂದ ಬಯಲಾಯ್ತು ಸುಳಿವು!

ಹಲವು ದಿನಗಳಿಂದ ಕುಟುಂಬದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಮಹಿಳೆಯ ಸುಳಿವು ಫುಡ್ ಡೆಲಿವರಿ ವಹಿವಾಟುಗಳಿಂದ ಪತ್ತೆಯಾಗಿದೆ. ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
Woman Secretly Returns To Pune From UK
ಲಂಡನ್‌ನಿಂದ ಪುಣೆಗೆ ಬಂದಿದ್ದ ಮಹಿಳೆ ಶವವಾಗಿ ಪತ್ತೆ
Updated on: 

ಪುಣೆ: ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದ್ದ 34 ವರ್ಷದ ಮಹಿಳೆಯೊಬ್ಬರು ಕುಟುಂಬದವರಿಗೆ ಯಾವುದೇ ಮಾಹಿತಿ ನೀಡದೆ ಭಾರತಕ್ಕೆ ಮರಳಿದ್ದು, ಮಹಾರಾಷ್ಟ್ರದ ಪುಣೆಯ ಬಾಡಿಗೆ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಹಲವು ದಿನಗಳಿಂದ ಕುಟುಂಬದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಮಹಿಳೆಯ ಸುಳಿವು ಫುಡ್ ಡೆಲಿವರಿ ವಹಿವಾಟುಗಳಿಂದ ಪತ್ತೆಯಾಗಿದೆ. ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೃತ ಮಹಿಳೆಯನ್ನು ಛತ್ರಪತಿ ಸಂಭಾಜಿನಗರ ಮೂಲದ ಮುಗ್ಧಾ ದೇಶಮುಖ್ ಎಂದು ಗುರುತಿಸಲಾಗಿದೆ. ಅವರು ಕಳೆದ ವರ್ಷ ಜುಲೈನಲ್ಲಿ ಎಂಬಿಎ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದರು. ಅಲ್ಲಿ ಒಬ್ಬರೇ ವಾಸವಿದ್ದ ಮುಗ್ಧಾ, ತಮ್ಮ ಖರ್ಚುಗಳನ್ನು ನಿಭಾಯಿಸಲು ಅರೆಕಾಲಿಕ ಕೆಲಸವನ್ನೂ ಮಾಡುತ್ತಿದ್ದರು.

ಪೊಲೀಸರ ಮಾಹಿತಿ ಪ್ರಕಾರ, ಮುಗ್ಧಾ ತಮ್ಮ ಕುಟುಂಬದವರೊಂದಿಗೆ ದೂರವಾಣಿ ಕರೆ ಹಾಗೂ ಸಂದೇಶಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ಆದರೆ ಅಕ್ಟೋಬರ್ 24ರಂದು ಕುಟುಂಬದವರು ಕರೆ ಹಾಗೂ ಸಂದೇಶ ಕಳುಹಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.

ಇದರಿಂದ ಆತಂಕಗೊಂಡ ಪೋಷಕರು ಲಂಡನ್‌ನಲ್ಲಿದ್ದ ಮುಗ್ಧಾ ಅವರ ಸ್ನೇಹಿತೆಯನ್ನು ಸಂಪರ್ಕಿಸಿದ್ದಾರೆ. ಅಕ್ಟೋಬರ್ 22ರಂದು ಕೊನೆಯ ಬಾರಿಗೆ ಸಂದೇಶದ ಮೂಲಕ ಮಾತನಾಡಿದ್ದಾಗಿ ಸ್ನೇಹಿತೆ ತಿಳಿಸಿದ್ದಾರೆ. ಬಳಿಕ ಆಕೆ ಲಂಡನ್ ಪೊಲೀಸರಿಗೆ ಮುಗ್ಧಾ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾಳೆ.

ಆದರೆ, ಮುಗ್ಧಾ ಆಗಸ್ಟ್ ತಿಂಗಳ ಕೊನೆಯಲ್ಲೇ ಬ್ರಿಟನ್ ತೊರೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಕುಟುಂಬದವರು ಭಾರತೀಯ ಅಧಿಕಾರಿಗಳು ಹಾಗೂ ಭಾರತೀಯ ಹೈಕಮಿಷನ್ ಸಂಪರ್ಕಿಸಿ ಮುಗ್ಧಾ ಅವರನ್ನು ಪತ್ತೆಹಚ್ಚಲು ನೆರವು ಕೋರಿದ್ದಾರೆ.

Woman Secretly Returns To Pune From UK
Raptadu: ಮರಕತ್ತರಿಸುವ ಚೈನ್ ಸಾ ಹಿಡಿದು ಶಾಲೆಗೆ ನುಗ್ಗಿದ ದುಷ್ಕರ್ಮಿ ಭೀಕರ ದಾಳಿ, ಓರ್ವ ವಿದ್ಯಾರ್ಥಿನಿ ಸಾವು, ಮತ್ತೋರ್ವ ವಿದ್ಯಾರ್ಥಿನಿಗೆ ಗಾಯ! Video

ಫುಡ್ ಡೆಲಿವರಿ ವಹಿವಾಟಿನಿಂದ ಸಿಕ್ಕ ಸುಳಿವು!

ಮಗಳ ಸುಳಿವು ಪತ್ತೆಹಚ್ಚಲು ಮುಂದಾದ ತಂದೆ ಆಕೆಯ ಬ್ಯಾಂಕ್ ವಹಿವಾಟುಗಳ ವಿವರಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಕ್ಟೋಬರ್ 8ರಿಂದ 25ರವರೆಗೆ ಹಲವು ಫುಡ್ ಡೆಲಿವರಿ ವಹಿವಾಟುಗಳು ನಡೆದಿರುವುದು ಗಮನಕ್ಕೆ ಬಂದಿದೆ. ಇವುಗಳಲ್ಲಿ ಕೆಲವು ವಹಿವಾಟುಗಳು ಛತ್ರಪತಿ ಸಂಭಾಜಿನಗರದ ಓಸ್ಮಾನ್‌ಪುರ ಪ್ರದೇಶದಿಂದ ನಡೆದಿರುವುದು ಪತ್ತೆಯಾಗಿದೆ.

ಇದರಿಂದ ಮುಗ್ಧಾ ಭಾರತದಲ್ಲೇ ಎಲ್ಲೋ ವಾಸವಿರಬಹುದು ಎಂದು ಕುಟುಂಬದವರು ಶಂಕಿಸಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಮುಗ್ಧಾ ಅವರ ಮೊಬೈಲ್ ಸ್ಥಳದ ಸುಳಿವಿನ ಆಧಾರದ ಮೇಲೆ ಪುಣೆಯ ಗಹುಂಜೆಯಲ್ಲಿರುವ ಲೋಧಾ ಬೆಲ್ಮೊಂಡೊ ವಸತಿ ಸಮುಚ್ಚಯಕ್ಕೆ ತಲುಪಿದ್ದಾರೆ. ಅಲ್ಲಿನ ಬಾಡಿಗೆ ಫ್ಲ್ಯಾಟ್‌ಗೆ ತೆರಳಿದಾಗ ಮುಗ್ಧಾ ಶವವಾಗಿ ಪತ್ತೆಯಾಗಿದ್ದಾರೆ.

ಈ ಕುರಿತು ಮಾತನಾಡಿರುವ ಪಿಂಪ್ರಿ-ಚಿಂಚ್‌ವಾಡ್‌ನ ಶಿರಗಾಂವ್ ಪೊಲೀಸ್ ಠಾಣೆಯ ಹಿರಿಯ ಇನ್‌ಸ್ಪೆಕ್ಟರ್ ದೇವೇಂದ್ರ ಚವಾಣ್, "ಛತ್ರಪತಿ ಸಂಭಾಜಿನಗರ ಪೊಲೀಸರು ಮುಗ್ಧಾ ಅವರ ಸ್ಥಳವನ್ನು ಪತ್ತೆಹಚ್ಚಿ ಗಹುಂಜೆಯ ಲೋಧಾ ಬೆಲ್ಮೊಂಡೊ ವಸತಿ ಸಮುಚ್ಚಯದ ಮಾಹಿತಿ ನೀಡಿದರು. ನಾವು ಅವರು ವಾಸವಿದ್ದ ಫ್ಲ್ಯಾಟ್‌ಗೆ ತೆರಳಿದೆವು. ಬೀಗದ ಕೆಲಸಗಾರನ ಸಹಾಯದಿಂದ ಬಾಗಿಲು ತೆರೆದು ಒಳಗೆ ಪ್ರವೇಶಿಸಿದಾಗ ಅವರು ಮೃತಪಟ್ಟಿರುವುದು ಕಂಡುಬಂತು" ಎಂದು ತಿಳಿಸಿದ್ದಾರೆ.

ಮುಗ್ಧಾ ಅವರ ದೇಹದ ಮೇಲೆ ಯಾವುದೇ ಗೋಚರ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್‌ನಲ್ಲೇ ಬಾಡಿಗೆಗೆ ಪಡೆದಿದ್ದ ಫ್ಲ್ಯಾಟ್

ಪೊಲೀಸರ ತನಿಖೆಯ ಪ್ರಕಾರ, ಮುಗ್ಧಾ ಏಪ್ರಿಲ್ ತಿಂಗಳಲ್ಲೇ ಈ ಫ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಆಗಸ್ಟ್ ತಿಂಗಳಿನಿಂದ ಅಲ್ಲಿ ವಾಸಿಸಲು ಆರಂಭಿಸಿದ್ದರು ಎನ್ನಲಾಗಿದೆ. ಮಹಿಳೆಯ ಸಾವಿಗೆ ನಿಖರ ಕಾರಣವೇನು? ಅವರು ಲಂಡನ್‌ನಿಂದ ಯಾರಿಗೂ ತಿಳಿಸದೆ ಭಾರತಕ್ಕೆ ಮರಳಿದ್ದೇಕೆ? ಪುಣೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರೇ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X