

ಹೈದರಾಬಾದ್: ತೆಲಂಗಾಣದಲ್ಲಿ ನಡೆದಿದ್ದ 2 ವಾರಗಳ ರಾಜಕೀಯ ಹೈಡ್ರಾಮಾಗೆ ಕೊನೆಗೂ ತೆರೆ ಬಿದ್ದಿದ್ದು, ಕೊನೆಗೂ ಸಚಿವೆ ಕೊಂಡ ಸುರೇಖಾರನ್ನು ಸಿಎಂ ರೇವಂತ್ ರೆಡ್ಡಿ ತಮ್ಮ ಸಚಿವಸಂಪುಟದಿಂದ ಕೈಬಿಟ್ಟಿದ್ದಾರೆ.
ಹೌದು.. ತೆಲಂಗಾಣದಲ್ಲಿ ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಗೆ ಕೊನೆಗೂ ತೆರೆ ಬಿದ್ದಿದ್ದು, ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಮೇರೆಗೆ ಸಚಿವ ಕೊಂಡಾ ಸುರೇಖಾ ಅವರನ್ನು ತೆಲಂಗಾಣ ಸಚಿವ ಸಂಪುಟದಿಂದ ಕೈಬಿಡಲಾಗಿದೆ.
ಮುಖ್ಯಮಂತ್ರಿಗಳ ಕಚೇರಿ (CMO) ಗುರುವಾರ ಹೊರಡಿಸಿರುವ ಟಿಪ್ಪಣಿಯಲ್ಲಿ, ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಕೊಂಡಾ ಸುರೇಖಾ ಅವರನ್ನು ತಕ್ಷಣದಿಂದಲೇ ಸಚಿವ ಸಂಪುಟದಿಂದ ಕೈಬಿಡಲು ನಿರ್ಧರಿಸಿದ್ದಾರೆ ಎಂದು ತಿಳಿಸಲಾಗಿದೆ.
ಕಾಂಗ್ರೆಸ್‌ನ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
AICC ನಿರ್ಧಾರದ ಬೆನ್ನಲ್ಲೇ ಕೊಂಡಾ ಸುರೇಖಾ ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕುವ ಅಧಿಕೃತ ಶಿಫಾರಸನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ.
ಮುಂದಿನ ಕೆಲವೇ ಗಂಟೆಗಳಲ್ಲಿ ರಾಜಭವನದಿಂದ ಈ ಕುರಿತು ಅಧಿಕೃತ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ದೆಹಲಿಯಿಂದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಇಂದು ಸಂಜೆ ಹೈದರಾಬಾದ್‌ಗೆ ವಾಪಸ್ ಆಗುವ ಮುನ್ನವೇ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
2 ವಾರಗಳ ರಾಜಕೀಯ ಹೈಡ್ರಾಮಾ
ತೆಲಂಗಾಣದಲ್ಲಿ ರಾಜಕೀಯ ಸಂಚಲನಕ್ಕೆ ಆಗಸ್ಟ್ 19ರಂದು ಚಾಲನೆ ಸಿಕ್ಕಿತ್ತು. ಅಂದು ಕೊಂಡಾ ಸುರೇಖಾ ಅವರ ಪುತ್ರಿ ಸುಷ್ಮಿತಾ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಅವರ ಸಹೋದರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.
ಇದರ ಬೆನ್ನಲ್ಲೇ ಕೊಂಡಾ ಸುರೇಖಾ ಹಾಗೂ ಮುಖ್ಯಮಂತ್ರಿ ರೇವಂತ್ ರೆಡ್ಡಿ ನಡುವೆ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದವು. ಇದೀಗ ಸುರೇಖಾ ಅವರನ್ನು ಸಂಪುಟದಿಂದ ಕೈಬಿಡುವ ಮೂಲಕ ಈ ರಾಜಕೀಯ ಬಿಕ್ಕಟ್ಟಿಗೆ ಕಾಂಗ್ರೆಸ್ ನಾಯಕತ್ವ ಅಂತ್ಯ ಹಾಡಿದೆ.
‘ಚಿನ್ನದ ರಾಖಿ’ ಕಟ್ಟಿದ ಕೆಲವೇ ದಿನಗಳಲ್ಲಿ ಸಚಿವ ಸ್ಥಾನ ಕಳೆದುಕೊಂಡ ಸುರೇಖಾ
ಇದರ ನಡುವೆ ಕೊಂಡಾ ಸುರೇಖಾ ಅವರ ಸಂಪುಟದಿಂದ ವಜಾ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಕೆಲವು ವರದಿಗಳು ಹಾಗೂ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ, ಮುಖ್ಯಮಂತ್ರಿಯ ಸೂಚನೆಗಳನ್ನು ಪಾಲಿಸದಿರುವುದು ಹಾಗೂ ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವುದು ಸುರೇಖಾ ವಿರುದ್ಧದ ಕ್ರಮಕ್ಕೆ ಪ್ರಮುಖ ಕಾರಣ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಮಹಿಳಾ ಮುಖವಾಗಿ ಗುರುತಿಸಿಕೊಂಡಿದ್ದ ಸುರೇಖಾ, ಒಂದು ಹಂತದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಆಪ್ತ ಬೆಂಬಲಿಗರಾಗಿದ್ದರು ಎಂಬ ಚರ್ಚೆಯೂ ಇತ್ತು. ಆದರೆ ಇದೀಗ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದ್ದು, ಅದು ಸಚಿವ ಸ್ಥಾನ ಕಳೆದುಕೊಳ್ಳುವ ಹಂತಕ್ಕೆ ತಲುಪಿತ್ತು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಕುತೂಹಲಕಾರಿ ಸಂಗತಿಯೆಂದರೆ, ಕೆಲವೇ ದಿನಗಳ ಹಿಂದೆ ಕೊಂಡಾ ಸುರೇಖಾ ಅವರು ಮುಖ್ಯಮಂತ್ರಿ ರೇವಂತ್ ರೆಡ್ಡಿ, ಅವರ ಮೊಮ್ಮಗ ಹಾಗೂ ಅಳಿಯನಿಗೆ ವಿಶೇಷವಾಗಿ ತಯಾರಿಸಿದ ಚಿನ್ನದ ರಾಖಿಗಳನ್ನು ಕಟ್ಟಿದ್ದರು. ಇದೀಗ ಅವರು ಕಟ್ಟಿದ 'ಚಿನ್ನದ ರಾಖಿಯೂ ಸಚಿವ ಸ್ಥಾನ ಉಳಿಸಲಿಲ್ಲ” ಎಂಬಂತಹ ವ್ಯಂಗ್ಯಾತ್ಮಕ ಪ್ರತಿಕ್ರಿಯೆಗಳು ಹರಿದಾಡುತ್ತಿವೆ.
ಹಲವು ಬದಲಾವಣೆ
ಕೊಂಡಾ ಸುರೇಖಾ ಮಾತ್ರವಲ್ಲದೇ ತೆಲಂಗಾಣದಲ್ಲಿ ಇನ್ನು ಹಲವು ಹುದ್ದೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ತೆಲಂಗಾಣ ಯೋಜನಾ ಮಂಡಳಿಯ ಉಪಾಧ್ಯಕ್ಷ ಸ್ಥಾನಕ್ಕೆ ಜಿ. ಚಿನ್ನಾ ರೆಡ್ಡಿ ಅವರ ನೇಮಕವನ್ನೂ ತಕ್ಷಣದಿಂದಲೇ ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಅವರ ಸ್ಥಾನಕ್ಕೆ ಗದ್ವಾಲ್ ವಿಜಯಲಕ್ಷ್ಮಿ ಅವರನ್ನು ನೇಮಕ ಮಾಡಲಾಗಿದೆ.
ಇದಲ್ಲದೆ, ನರೇಲ್ಲಾ ಶಾರದಾ ಅವರನ್ನು ತೆಲಂಗಾಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನೇಮಕ ಮಾಡಲು ರೇವಂತ್ ರೆಡ್ಡಿ ಅನುಮೋದನೆ ನೀಡಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯೆ ಜಿ. ಸುಧಾ ರಾಣಿ ಅವರನ್ನು ಕಾಕತೀಯ ನಗರಾಭಿವೃದ್ಧಿ ಪ್ರಾಧಿಕಾರ (KUDA)ದ ಅಧ್ಯಕ್ಷೆಯಾಗಿ ನೇಮಕ ಮಾಡುವ ಪ್ರಸ್ತಾವಕ್ಕೂ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.