Delhi Building Collapse: ಸಾವಿನ ಸಂಖ್ಯೆ 5ಕ್ಕೆ ಏರಿಕೆ; ಮೂವರ ಸ್ಥಿತಿ ಗಂಭೀರ, ಇನ್ನೂ 40ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ, ತನಿಖೆಗೆ ಸಮಿತಿ ರಚನೆ!

ಅಧಿಕಾರಿಗಳ ಪ್ರಕಾರ, ಸುಮಾರು 75 ಹಾಸಿಗೆಗಳ ಪೇಯಿಂಗ್ ಗೆಸ್ಟ್ (PG) ವಸತಿ ಸೌಲಭ್ಯವಾಗಿ ಬಳಸಲಾಗುತ್ತಿದ್ದ ಕಟ್ಟಡವು ಮಧ್ಯಾಹ್ನ ಸುಮಾರು 1.30ಕ್ಕೆ ಕುಸಿದಿದೆ.
Delhi Building Collapse
ದೆಹಲಿ ಕಟ್ಟಡ ಕುಸಿತ
Updated on

ನವದೆಹಲಿ: ದೆಹಲಿಯ ಸತ್ಯ ನಿಕೇತನದಲ್ಲಿ ಭಾನುವಾರ ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೇರಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಈವರೆಗೂ 9 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅಂತೆಯೇ 40ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅಧಿಕಾರಿಗಳ ಪ್ರಕಾರ, ಸುಮಾರು 75 ಹಾಸಿಗೆಗಳ ಪೇಯಿಂಗ್ ಗೆಸ್ಟ್ (PG) ವಸತಿ ಸೌಲಭ್ಯವಾಗಿ ಬಳಸಲಾಗುತ್ತಿದ್ದ ಕಟ್ಟಡವು ಮಧ್ಯಾಹ್ನ ಸುಮಾರು 1.30ಕ್ಕೆ ಕುಸಿದಿದೆ. ಕಟ್ಟಡದ ಮಾಲೀಕರು ಗುರುಗ್ರಾಮ್‌ನಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ದೆಹಲಿಯ ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್ ಸಮೀಪದಲ್ಲಿರುವ ಸತ್ಯ ನಿಕೇತನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಾಸಿಸುತ್ತಾರೆ.

ಸ್ಥಳೀಯ ವಿಚಾರಣೆಯಲ್ಲಿ ಕಟ್ಟಡವು 40ರಿಂದ 50 ವರ್ಷ ಹಳೆಯದಾಗಿದ್ದು, ನೆಲಮಾಳಿಗೆ ಹಾಗೂ ಮೇಲ್ಭಾಗದಲ್ಲಿ ಐದು ಅಂತಸ್ತುಗಳನ್ನು ಹೊಂದಿತ್ತು ಎಂಬುದು ತಿಳಿದುಬಂದಿದೆ. PG ವಸತಿಯಾಗಿ ಬಳಸುತ್ತಿದ್ದ ಕಟ್ಟಡದ ನೆಲಮಾಳಿಗೆಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

Delhi Building Collapse
ದೆಹಲಿ: 6 ಅಂತಸ್ತಿನ ಕಟ್ಟಡ ಕುಸಿತ; ಓರ್ವ ಸಾವು, ಹಲವರು ಸಿಲುಕಿರುವ ಶಂಕೆ

ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ದೆಹಲಿ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ದೆಹಲಿ ಅಗ್ನಿಶಾಮಕ ದಳ ಹಾಗೂ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (DDMA) ತಂಡಗಳು ಸ್ಥಳಕ್ಕೆ ಧಾವಿಸಿವೆ.

ಅಗ್ನಿಶಾಮಕ ವಾಹನಗಳು ಹಾಗೂ CATS ಆಂಬುಲೆನ್ಸ್‌ಗಳ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿ ಹಾಗೂ ಹೆಚ್ಚುವರಿ ಡಿಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

40ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

ಇನ್ನು ಕಟ್ಟಡ ಕುಸಿದ ವೇಳೆ ಸುಮಾರು 50 ವಿದ್ಯಾರ್ಥಿಗಳು ಕಟ್ಟಡದೊಳಗಿದ್ದರು ಎಂದು ಶಂಕಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಭಾನುವಾರವಾಗಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಕೊಠಡಿಗಳಲ್ಲೇ ಇದ್ದರು ಎಂದು ಅವರು ಹೇಳಿದ್ದಾರೆ.

ಅವಶೇಷಗಳಡಿ ಸಿಲುಕಿದ್ದವರ ಸಹಾಯಕ್ಕಾಗಿ ಕೂಗುವ ಧ್ವನಿ ಕೇಳಿಸಿತ್ತು ಎಂದು ಸ್ಥಳದಲ್ಲಿದ್ದ ವಿದ್ಯಾರ್ಥಿಯೊಬ್ಬ ತಿಳಿಸಿದ್ದಾರೆ. ಮತ್ತೊಬ್ಬ ಪ್ರತ್ಯಕ್ಷದರ್ಶಿ, ಕುಸಿದ ಕಟ್ಟಡವು ಪುರುಷರಿಗಾಗಿ ಇರುವ ‘ಹಾಸ್ಟೆಲ್ ಡೇಝ್’ ಎಂಬ PG ವಸತಿಯಾಗಿತ್ತು ಎಂದು ಹೇಳಿದ್ದಾರೆ. ಕಟ್ಟಡ ಕುಸಿದ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಅವಶೇಷಗಳ ನಡುವೆ ಬದುಕುಳಿದವರಿಗಾಗಿ ಶೋಧ ನಡೆಸಿದರು.

ಸ್ಥಳೀಯರ ಹರಸಾಹಸ

ರಕ್ಷಣಾ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳು ಸ್ಥಳಕ್ಕೆ ತಲುಪುವ ಮುನ್ನವೇ ಸ್ಥಳೀಯರು ಕೈಗಳಿಂದಲೇ ಅವಶೇಷಗಳನ್ನು ತೆರವುಗೊಳಿಸಿ ಸಿಲುಕಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊವೊಂದರಲ್ಲಿ ವ್ಯಕ್ತಿಯೊಬ್ಬರು ಕಾಂಕ್ರೀಟ್ ಸ್ಲ್ಯಾಬ್‌ನಡಿ ಸಿಲುಕಿರುವುದು ಕಂಡುಬಂದಿದ್ದು, ಅವರನ್ನು ರಕ್ಷಿಸಲು ಹಲವು ಮಂದಿ ಸ್ಲ್ಯಾಬ್ ಎತ್ತಲು ಪ್ರಯತ್ನಿಸುತ್ತಿರುವ ದೃಶ್ಯ ಕಂಡುಬಂದಿದೆ.

ಈವರೆಗೆ ರಕ್ಷಿಸಲಾದ ಒಂಬತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗಾಗಿ ಕನಿಷ್ಠ 12 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅವಶೇಷಗಳಲ್ಲಿರುವ ಕಾಂಕ್ರೀಟ್ ಸ್ಲ್ಯಾಬ್‌ಗಳು ಹಾಗೂ ಕಬ್ಬಿಣದ ಗರ್ಡರ್‌ಗಳನ್ನು ತೆರವುಗೊಳಿಸಲು ಎಕ್ಸ್‌ಕವೇಟರ್‌ಗಳನ್ನು ಬಳಸಲಾಗುತ್ತಿದೆ.

ಹೆಚ್ಚುವರಿ ಯಂತ್ರೋಪಕರಣಗಳನ್ನೂ ಸ್ಥಳಕ್ಕೆ ತರಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿಗೆ ನೆರವಾಗಲು ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಜನದಟ್ಟಣೆಯನ್ನು ನಿಯಂತ್ರಿಸಲು ಗಲಭೆ ನಿಯಂತ್ರಣ ತಂಡಗಳನ್ನೂ ಕರೆಸಲಾಗಿದೆ.

Delhi Building Collapse
ದೆಹಲಿಯಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ: ಓರ್ವ ಸಾವು; ಅವಶೇಷಗಳಡಿ ಹಲವು ಕಾರ್ಮಿಕರು ಸಿಲುಕಿರುವ ಶಂಕೆ!

ತನಿಖೆಗೆ ಸಮಿತಿ ರಚನೆ

ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಕಟ್ಟಡ ಕುಸಿತದ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟಡದ ಪಕ್ಕದಲ್ಲಿರುವ ಮತ್ತೊಂದು ಕಟ್ಟಡವನ್ನು ಖಾಲಿ ಮಾಡಿಸಲಾಗಿದೆ.

ಅವಶೇಷಗಳಡಿ ಸಿಲುಕಿರುವವರನ್ನು ಸುರಕ್ಷಿತವಾಗಿ ರಕ್ಷಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದ್ದು, ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ನೆರವು ಒದಗಿಸಲಾಗುತ್ತಿದೆ ಎಂದು ಸಿಎಂ ಹೇಳಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ದೆಹಲಿ ಬಿಜೆಪಿ ಸಂಸದ ರಾಮ್‌ವೀರ್ ಸಿಂಗ್ ಬಿಧೂರಿ, ಕಟ್ಟಡ ಕುಸಿತದ ಬಗ್ಗೆ ತನಿಖೆ ನಡೆಸಲು ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದೆ ಎಂದು ತಿಳಿಸಿದ್ದಾರೆ. ತನಿಖಾ ಸಮಿತಿಯ ವರದಿ ಬಂದ ಬಳಿಕ ತಪ್ಪಿತಸ್ಥರೆಂದು ಕಂಡುಬರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಕಟ್ಟಡದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಅವರನ್ನು ಬಂಧಿಸಿರುವ ಸಾಧ್ಯತೆಯೂ ಇದೆ ಎಂದು ಬಿಧೂರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com