

ಭುವನೇಶ್ವರ: ಇರ್ಫಾನ್ ಈ ಜಗತ್ತನ್ನು ಅಗಲಿದ ನಂತರ ವಿಶ್ವದಾದ್ಯಂತ ಅವರ ಅಭಿಮಾನಿಗಳಿಂದ ಹರಿದುಬಂದ ಅಪಾರ ಪ್ರೀತಿಯನ್ನು ನೋಡುವವರೆಗೂ, ಅವರು ಇಷ್ಟೊಂದು ಜನರ ಜೀವನವನ್ನು ಸ್ಪರ್ಶಿಸಿದ್ದಾರೆ ಎಂಬುದು ನನಗೆ ತಿಳಿದಿರಲೇ ಇಲ್ಲ" ಎಂದು ಖ್ಯಾತ ಲೇಖಕಿ ಮತ್ತು ನಿರ್ಮಾಪಕಿ ಸುತಪಾ ಸಿಕ್ದರ್ ಅತ್ಯಂತ ಭಾವುಕರಾಗಿ ನುಡಿದಿದ್ದಾರೆ.
ಭುವನೇಶ್ವರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 'ಒಡಿಶಾ ಸಾಹಿತ್ಯ ಹಬ್ಬ 2026' ರ (Odisha Literary Festival 2026) ವಿಶೇಷ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿರಿಯ ಪತ್ರಕರ್ತೆ ಕಾವೇರಿ ಬಮ್ಜಾಯ್ ಅವರೊಂದಿಗಿನ ಈ ಚರ್ಚೆಯಲ್ಲಿ ಸುತಪಾ ಅವರು, ನಟ, ದಿವಂಗತ ಇರ್ಫಾನ್ ಖಾನ್ ಅವರ ವೈಯಕ್ತಿಕ ಜೀವನ ಮತ್ತು ಅವರ ಅದ್ಭುತ ಕಲಾಪ್ರೇಮದ ಅಪರೂಪದ ನೆನಪುಗಳನ್ನು ಬಿಚ್ಚಿಟ್ಟರು. ಸಂವಾದದ ವೇಳೆ ಇರ್ಫಾನ್ ಅವರ ಸಿನಿಮಾ ಬದುಕಿನ ಮಹತ್ವದ ನಿರ್ಧಾರವೊಂದನ್ನು ಸುತಪಾ ನೆನಪಿಸಿಕೊಂಡರು.
ಇರ್ಫಾನ್ ಅವರಿಗೆ ಭಾರತೀಯ ಕಥೆಗಳ ಮೇಲೆ ಅಪಾರ ನಂಬಿಕೆಯಿತ್ತು. ಒಮ್ಮೆ ಹಾಲಿವುಡ್‌ನ ಅತ್ಯಂತ ದೊಡ್ಡ ಅಂತರರಾಷ್ಟ್ರೀಯ ಚಿತ್ರವೊಂದರ ಆಫರ್ ಬಂದಿದ್ದರೂ, ಅವರು ಕೇವಲ ಅಮಿತಾಭ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಭಾರತೀಯ ಚಲನಚಿತ್ರ 'ಪಿಕು' ಗಾಗಿ ಆ ದೊಡ್ಡ ಹಾಲಿವುಡ್ ಸಿನಿಮಾವನ್ನೇ ನಿರಾಕರಿಸಿದ್ದರು ಎಂದು ಅವರು ಬಹಿರಂಗಪಡಿಸಿದರು.
ದಿವಂಗತ ನಟ ಇರ್ಫಾನ್ ಖಾನ್ ಅವರು ಅಗಲಿದ ಹಲವು ವರ್ಷಗಳ ಬಳಿಕವೂ ಯುವ ನಟರ ಒಂದು ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಇರ್ಫಾನ್ ಅವರ ಅಗಲಿಕೆಯ ನೋವಿನೊಂದಿಗೆ ಬದುಕಲು ಕಲಿಯುತ್ತಿರುವ ತನಗೆ, ಅವರಿಂದ ಸ್ಫೂರ್ತಿ ಪಡೆದಿರುವ ಯುವ ನಟರೇ ಶಕ್ತಿಯಾಗಿದ್ದಾರೆ. ಸಾಂಪ್ರದಾಯಿಕ ಚಿತ್ರರಂಗದ ಹಿನ್ನೆಲೆಯಿಂದ ಬಂದವರಲ್ಲದಿದ್ದರೂ ಇರ್ಫಾನ್ ಅವರ ಪ್ರಯಾಣವು ನಟನೆಯನ್ನೇ ವೃತ್ತಿಯಾಗಿ ಪರಿಗಣಿಸದಿದ್ದ ಅನೇಕ ಯುವಕರಿಗೂ ಪ್ರೇರಣೆ ನೀಡಿದೆ ಎಂದು ಹೇಳಿದರು.
ಇರ್ಫಾನ್ ಅವರಿಂದ ಪ್ರಭಾವಿತರಾದ ಜನರಿಂದ ಇಂದಿಗೂ ಸಂದೇಶಗಳು ಬರುತ್ತಿವೆ. “ಇರ್ಫಾನ್ ಇಷ್ಟು ಜನರ ಬದುಕನ್ನು ಸ್ಪರ್ಶಿಸಿದ್ದರು ಎಂಬುದೇ ನನಗೆ ಗೊತ್ತಿರಲಿಲ್ಲ. ಒಬ್ಬ ವ್ಯಕ್ತಿ ತನ್ನ ಇಡೀ ಜೀವನದಲ್ಲಿ ತನ್ನ ಕಲೆಗೆ ಪ್ರಾಮಾಣಿಕವಾಗಿದ್ದರೆ, ಅದರ ಪ್ರಭಾವ ಮುಂದುವರಿಯುತ್ತದೆ ಎಂಬುದನ್ನು ಆಗ ಅರಿತುಕೊಂಡೆ.
ಇರ್ಫಾನ್ ಅವರ ಪರಂಪರೆ ಕೇವಲ ಅವರ ನಟನೆಯಷ್ಟಕ್ಕೆ ಸೀಮಿತವಾಗಿಲ್ಲ. ಅವರು ಕೇವಲ ನುರಿತ ನಟ ಅಥವಾ ಕಲಾವಿದರಾಗಿರಲಿಲ್ಲ; ತಮ್ಮ ಕಲೆಯೊಂದಿಗೆ ಅವರಿಗೆ ಆಧ್ಯಾತ್ಮಿಕ ಸಂಬಂಧವಿತ್ತು.
ಇರ್ಫಾನ್ ಅವರಿಗೆ ಎಲ್ಲದರ ಬಗ್ಗೆಯೂ ಕುತೂಹಲವಿತ್ತು. ಅದನ್ನೇ ತಾನು ಇಂದಿಗೂ ಹೆಚ್ಚು ಕಳೆದುಕೊಳ್ಳುತ್ತಿದ್ದೇನೆ. ಅವರು ಅಪಾರ ಓದುಗರಾಗಿದ್ದರು ಹಾಗೂ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಲು ಆಸಕ್ತಿ ಹೊಂದಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಬಳಿಕವೂ ಅವರ ಕುತೂಹಲ ಕಡಿಮೆಯಾಗಿರಲಿಲ್ಲ. ಪ್ರಕೃತಿ, ಸಾವಯವ ಕೃಷಿ ಹಾಗೂ ಭಾರತದ ವೈವಿಧ್ಯತೆಯ ಬಗ್ಗೆಯೂ ಅವರಿಗೆ ಅಪಾರ ಆಸಕ್ತಿ ಇತ್ತು ಎಂದು ನೆನಪಿಸಿಕೊಂಡರು.
ಇರ್ಫಾನ್‌ಗೆ ಕಥೆ ಎಲ್ಲಿಂದ ಬರುತ್ತದೆ ಎಂಬುದಕ್ಕಿಂತ ಅದು ಉತ್ತಮ ಕಥೆಯೇ ಎಂಬುದು ಮುಖ್ಯವಾಗಿತ್ತು. ತಮ್ಮ ವೃತ್ತಿಜೀವನದಲ್ಲೂ ಅವರು ಇದೇ ನಿಲುವನ್ನು ಅನುಸರಿಸಿದ್ದರು. 2015ರ ‘ಪಿಕು’ ಸಿನಿಮಾದಲ್ಲಿ ನಟಿಸಲು ಅಂತರರಾಷ್ಟ್ರೀಯ ಪ್ರಾಜೆಕ್ಟ್‌ವೊಂದನ್ನು ಅವರು ನಿರಾಕರಿಸಿದ್ದನ್ನು ಸ್ಮರಿಸಿದರು.
‘ಮೊದಲ ನೋಟದಲ್ಲೇ ಪ್ರೀತಿ ಆಗಿರಲಿಲ್ಲ’
ಇರ್ಫಾನ್ ಜೊತೆಗಿನ ತಮ್ಮ ಸಂಬಂಧ ಬಾಲಿವುಡ್‌ನಲ್ಲಿನ ಸಾಮಾನ್ಯ ಗ್ಲಾಮರ್ ಜೀವನಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು.
ರಾಷ್ಟ್ರೀಯ ನಾಟಕ ಶಾಲೆಯಲ್ಲಿ (NSD) ಇರ್ಫಾನ್ ಅವರನ್ನು ಮೊದಲ ಬಾರಿಗೆ ನೋಡಿದಾಗ ಅವರು ಕಪ್ಪು ಪಾಲಿಯೆಸ್ಟರ್ ಪ್ಯಾಂಟ್ ಧರಿಸಿದ್ದರು. ಅದು ತಮ್ಮಲ್ಲಿ ಅಷ್ಟೇನೂ ಉತ್ತಮ ಅಭಿಪ್ರಾಯ ಮೂಡಿಸಿರಲಿಲ್ಲ ಎಂದು ನೆನಪಿಸಿಕೊಂಡರು.
ಮೊದಲ ನೋಟದಲ್ಲೇ ಪ್ರೀತಿ ಅಥವಾ ಆಕರ್ಷಣೆ ಉಂಟಾಗಿರಲಿಲ್ಲ. ಆದರೆ, ಇರ್ಫಾನ್ ಅವರನ್ನು ಒಬ್ಬ ವ್ಯಕ್ತಿಯಾಗಿ, ಮನುಷ್ಯನಾಗಿ, ನಟನಾಗಿ ಮತ್ತು ಕಲಾವಿದನಾಗಿ ತಿಳಿದುಕೊಳ್ಳುತ್ತಾ ಹೋದಂತೆ ಪ್ರೀತಿ ಬೆಳೆದಿತು. ಅದು ಅದ್ಭುತ ಅನುಭವವಾಗಿತ್ತು ಎಂದು ಹೇಳಿದರು.
ತಮ್ಮ ಜೀವನವು ಬಾಲಿವುಡ್‌ನ ಸಾಂಪ್ರದಾಯಿಕ ಜೀವನಶೈಲಿಯ ಸುತ್ತಲೂ ರೂಪುಗೊಂಡಿರಲಿಲ್ಲ. ಪ್ರವಾಸ ಮಾಡಬೇಕು, ಇರ್ಫಾನ್ ತಮ್ಮ ಕಲೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ತಾವು ಸಾವಯವ ಕೃಷಿ ನಡೆಸಬೇಕು ಎಂಬುದು ತಮ್ಮ ಆಸೆಯಾಗಿತ್ತು ಎಂದು ತಿಳಿಸಿದರು.
ಇದೇ ವೇಳೆ ಬಾಲಿವುಡ್‌ನ ಸಾಮಾನ್ಯ ಜೀವನಶೈಲಿಯನ್ನು ಅನುಸರಿಸದಿರುವ ಬಗ್ಗೆ ತಮಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದರು.
ಇರ್ಫಾನ್ ಅವರ ಚಿತ್ರೀಕರಣದ ಸಂದರ್ಭದಲ್ಲಿ ತಾವು ಅವರೊಂದಿಗೆ ತೆರಳುತ್ತಿದ್ದರೂ, ಉದ್ದೇಶಪೂರ್ವಕವಾಗಿ ಚಿತ್ರತಂಡದ ಸೆಟ್‌ನಿಂದ ದೂರವಿರುತ್ತಿದ್ದೆ. ರಾತ್ರಿ ಇಬ್ಬರೂ ಭೇಟಿಯಾಗಿ ಸಾಕಷ್ಟು ಮಾತನಾಡುತ್ತಿದ್ದೆವು. ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿಂದ ಕೆಲವೊಮ್ಮೆ ಜಗಳವೂ ನಡೆಯುತ್ತಿತ್ತು ಎಂದು ಅವರು ನೆನಪಿಸಿಕೊಂಡರು.
ಬರವಣಿಗೆಯ ಮೂಲಕ ಇರ್ಫಾನ್ ಜೊತೆ ಸಂಭಾಷಣೆ
ಇರ್ಫಾನ್ ನಿಧನರಾಗಿ ಆರು ವರ್ಷಗಳಾದರೂ, ಸುತಾಪಾ ಇಂದಿಗೂ ಬರವಣಿಗೆಯ ಮೂಲಕ ಅವರೊಂದಿಗೆ ಸಂಭಾಷಣೆ ಮುಂದುವರಿಸಿದ್ದಾರೆ.
ನಾನು ಅವರ ಭಾಗವನ್ನೂ ಬರೆಯುತ್ತೇನೆ. ಅದು ನನಗಾಗಿ ಮಾತ್ರ. ಅವರು ಶಾಶ್ವತವಾಗಿ ಸೃಷ್ಟಿಸಿರುವ ಖಾಲಿತನದಿಂದ ಹೊರಬರಲು ಇದು ನನಗೆ ಸಹಾಯ ಮಾಡುತ್ತದೆ. ಆ ಜಾಗವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅವರಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಹೀಗಾಗಿ ಅವರನ್ನು ನನ್ನ ಜೀವನದ ಒಂದು ಭಾಗವಾಗಿಸಿಕೊಂಡಿದ್ದೇನೆ” ಎಂದು ಹೇಳಿದರು.