

ನಲ್ಗೊಂಡ: ಹಂದಿ ಮಾಂಸದ ಸಾರು (ಪೋರ್ಕ್ ಕರಿ) ಮಾಡಿಕೊಡಲು ಪತ್ನಿ ನಿರಾಕರಿಸಿದ್ದಕ್ಕೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, 66 ವರ್ಷದ ಪತ್ನಿಯನ್ನು 72 ವರ್ಷದ ಪತಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಶಬ್ದುಲಾಪುರ ಗ್ರಾಮದಲ್ಲಿರುವ ದಂಪತಿಯ ಮನೆಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ನಿದ್ರಿಸುತ್ತಿದ್ದ ವೇಳೆ ಆಕೆಯ ಪತಿ ಹರಿತವಾದ ವಸ್ತುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ದಾಳಿಯಿಂದ ಆಕೆಯ ಹಣೆಗೆ, ಎದೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೋರ್ಕ್ ಕರಿ ವಿಚಾರಕ್ಕೆ ಜಗಳ
ದಂಪತಿ ಆಗಾಗ್ಗೆ ಸಣ್ಣಪುಟ್ಟ ಕೌಟುಂಬಿಕ ವಿಚಾರಗಳಿಗೆ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿ ಕೂಡ ಪೋರ್ಕ್ ಕರಿ ಮಾಡಿಕೊಡುವಂತೆ ಪತಿ ಕೇಳಿದ್ದು, ಪತ್ನಿ ಅದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಈ ವೇಳೆ ಕೋಪಗೊಂಡ ಪತಿ ಆಕೆಯ ಮೇಲೆ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ದಾಳಿಯಿಂದ ಗಂಭೀರ ಗಾಯಗೊಂಡ ಮಹಿಳೆ ಮನೆಯಲ್ಲೇ ಮೃತಪಟ್ಟಿದ್ದಾರೆ.
ಮಗಳ ದೂರು, ಪತಿ ಬಂಧನ
ಘಟನೆಯ ಬಳಿಕ ದಂಪತಿಯ ಪುತ್ರಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ ಕನಗಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 72 ವರ್ಷದ ಆರೋಪಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.
ಘಟನೆಗೆ ಕಾರಣವಾದ ಪರಿಸ್ಥಿತಿಗಳು ಹಾಗೂ ದಾಳಿ ನಡೆಯುವ ಮುನ್ನ ದಂಪತಿ ನಡುವೆ ಏನಾಯಿತು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.