‘BRICS‌ ನಿಂದ ಭಾರತಕ್ಕೇನು ಲಾಭ?’: ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನೆ, ತಿರುಗೇಟು ಕೊಟ್ಟ BJP

BRICS ಶೃಂಗಸಭೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಪಿ. ಚಿದಂಬರಂ ಅವರು BRICS‌ನಿಂದ ಭಾರತಕ್ಕೆ ಸಿಕ್ಕಿರುವ ಸ್ಪಷ್ಟ ಪ್ರಯೋಜನಗಳೇನು? ಎಂದು ಪ್ರಶ್ನಿಸಿದ್ದಾರೆ.
No Benefits For India From BRICS, Says P Chidambaram
ಚಿದಂಬರಂ ಮತ್ತು ಬ್ರಿಕ್ಸ್ ಶೃಂಗಸಭೆ
Updated on

ನವದೆಹಲಿ: BRICS, SCO, G20, QUAD ಶೃಂಗಸಭೆಗಳಿಂದ ಭಾರತಕ್ಕೇನೂ ಲಾಭವಾಗಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಂ ಚಿದಂಬರಂ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಮಹತ್ವದ BRICS ಶೃಂಗಸಭೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಪಿ. ಚಿದಂಬರಂ ಅವರು BRICS‌ನಿಂದ ಭಾರತಕ್ಕೆ ಸಿಕ್ಕಿರುವ ಸ್ಪಷ್ಟ ಪ್ರಯೋಜನಗಳೇನು? ಎಂದು ಪ್ರಶ್ನಿಸಿದ್ದಾರೆ.

ಕಳೆದ ಎರಡು-ಮೂರು BRICS ಶೃಂಗಸಭೆಗಳಿಂದ ಭಾರತಕ್ಕೆ ಯಾವುದೇ ಗಮನಾರ್ಹ ಅಥವಾ ಸ್ಪಷ್ಟ ಫಲಿತಾಂಶಗಳು ದೊರೆತಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

2026ರ BRICS ಶೃಂಗಸಭೆ ಕುರಿತು ಮಾತನಾಡಿದ ಅವರು, BRICS ಮಾತ್ರವಲ್ಲದೆ ಶಾಂಘೈ ಸಹಕಾರ ಸಂಘಟನೆ (SCO), G20 ಮತ್ತು QUAD ಸೇರಿದಂತೆ ಭಾರತವು ಹಲವು ಬಹುಪಕ್ಷೀಯ ಸಂಘಟನೆಗಳ ಭಾಗವಾಗಿದೆ. ಆದರೆ, ಇವುಗಳಿಂದ ದೇಶಕ್ಕೆ ಸಿಕ್ಕಿರುವ ಸ್ಪಷ್ಟ ಪ್ರಯೋಜನಗಳೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

‘ಎಷ್ಟು ಅಧ್ಯಕ್ಷರು, ಎಷ್ಟು ಪ್ರಧಾನಮಂತ್ರಿಗಳು ಬರುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಕಳೆದ ಎರಡು-ಮೂರು BRICS ಶೃಂಗಸಭೆಗಳಿಂದ ಯಾವುದೇ ಸ್ಪಷ್ಟ ಪ್ರಯೋಜನ ಅಥವಾ ಸ್ಪಷ್ಟ ಫಲಿತಾಂಶ ಸಿಕ್ಕಿದೆ ಎಂದು ನನಗೆ ಅನಿಸುವುದಿಲ್ಲ’ ಎಂದು ಚಿದಂಬರಂ ಅವರು ತಿಳಿಸಿದ್ದಾರೆ.

‘ನಾವು BRICS‌ನಲ್ಲಿದ್ದೇವೆ, SCOನಲ್ಲಿದ್ದೇವೆ, G20 ಮತ್ತು QUADನಲ್ಲೂ ಇದ್ದೇವೆ. ಆದರೆ ಇದರಿಂದ ನಮಗೆ ಏನು ಲಾಭ ಸಿಗುತ್ತಿದೆ? ನನಗೆ ಕಾಣುತ್ತಿಲ್ಲ. ಕಳೆದ ಎರಡು-ಮೂರು ಶೃಂಗಸಭೆಗಳಿಂದ ಯಾವುದೇ ಪ್ರಯೋಜನ ಕಂಡಿಲ್ಲ. ಈ ಹಿಂದೆ ನಡೆದ BRICS ಶೃಂಗಸಭೆಗಳಿಂದ ಕೆಲವು ಸ್ಪಷ್ಟ ಪ್ರಯೋಜನಗಳು ದೊರೆತಿದ್ದವು’ ಎಂದು ಅವರು ಹೇಳಿದ್ದಾರೆ.

No Benefits For India From BRICS, Says P Chidambaram
7ನೇ ತಿಂಗಳಿಗೆ ಕಾಲಿಟ್ಟ US-Iran ಸಂಘರ್ಷ: ಯುದ್ಧ ಅಂತ್ಯಕ್ಕೆ ಕೌಂಟ್‌ಡೌನ್; ಇನ್ನು ಅವರ ಆಟ ನಡೆಯಲ್ಲ, ಅಮೆರಿಕ ಎಲೆಕ್ಷನ್ ಬೆನ್ನಲ್ಲೇ ಇರಾನ್'ಗೆ ಖೆಡ್ಡಾ ಎಂದ ಟ್ರಂಪ್..!

'ಕಾಂಗ್ರೆಸ್ ಗೆ ರಾಜತಾಂತ್ರಿಕತೆಯೇ ಅರ್ಥವಾಗಲ್ಲ': ಬಿಜೆಪಿ ತಿರುಗೇಟು

ಇನ್ನು ಚಿದಂಬರಂ ಅವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ಕಾಂಗ್ರೆಸ್‌ಗೆ ರಾಜತಾಂತ್ರಿಕತೆಯ ಬಗ್ಗೆ ಇರುವ ದೃಷ್ಟಿಕೋನದ ಕುರಿತು ಈ ಹೇಳಿಕೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ನಳಿನ್ ಕೊಹ್ಲಿ ಹೇಳಿದ್ದಾರೆ.

‘ಕಾಂಗ್ರೆಸ್ ರಾಜತಾಂತ್ರಿಕತೆಯನ್ನು ಹೇಗೆ ನೋಡುತ್ತದೆ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಾಕಿಸ್ತಾನವನ್ನು ಭಯೋತ್ಪಾದನೆಯ ಬಲಿಪಶು ಎಂದು ಕರೆಯಲಾಗುತ್ತಿತ್ತು. ಆದರೆ ಪಾಕಿಸ್ತಾನವೇ ಭಯೋತ್ಪಾದನೆಯನ್ನು ನಡೆಸುವ ದೇಶವಾಗಿದೆ’ ಎಂದು ನಳಿನ್ ಕೊಹ್ಲಿ ಟೀಕಿಸಿದ್ದಾರೆ.

‘ರಾಜತಾಂತ್ರಿಕತೆಯನ್ನು ಕೇವಲ ಕೊಡು-ಕೊಳ್ಳುವಿಕೆಯ ದೃಷ್ಟಿಯಿಂದಲೇ ಕಾಂಗ್ರೆಸ್ ನೋಡುತ್ತದೆಯೇ? ಅದಕ್ಕಾಗಿಯೇ ಅವರು ಸ್ಪಷ್ಟ ಲಾಭದ ಬಗ್ಗೆ ಪ್ರಶ್ನಿಸುತ್ತಿದ್ದಾರೆಯೇ?’ ದೊಡ್ಡ ಹಾಗೂ ಮಹತ್ವದ ಅಂತಾರಾಷ್ಟ್ರೀಯ ಕಾರ್ಯಕ್ರಮದ ಮೇಲೂ ಕಾಂಗ್ರೆಸ್ ರಾಜಕೀಯ ಮಾಡಲು ಪ್ರಯತ್ನಿಸುತ್ತಿದೆ ಎಂದು ನಳಿನ್ ಕೊಹ್ಲಿ ಆರೋಪಿಸಿದ್ದಾರೆ.

ಸೆ.12-13ರಂದು BRICS ಶೃಂಗಸಭೆ

ಅಂದಹಾಗೆ ಇದೇ ಸೆಪ್ಟೆಂಬರ್ 12 ಮತ್ತು 13ರಂದು ದೆಹಲಿಯಲ್ಲಿ BRICS ಶೃಂಗಸಭೆ ಆಯೋಜನೆಯಾಗಿದ್ದು, ಇದರ ಸಿದ್ಧತೆಗಳು ಭರದಿಂದ ಸಾಗಿವೆ. ಶೃಂಗಸಭೆಯಲ್ಲಿ ಭಾಗವಹಿಸಲಿರುವ ಗಣ್ಯ ನಾಯಕರನ್ನು ಸ್ವಾಗತಿಸಲು ದೆಹಲಿಯ ನಾಗರಿಕ ಹಾಗೂ ಮೂಲಸೌಕರ್ಯ ಸಂಸ್ಥೆಗಳು ಸಿದ್ಧತೆಗಳನ್ನು ಚುರುಕುಗೊಳಿಸಿವೆ.

2026ರ ಜನವರಿ 1ರಿಂದ ಭಾರತ BRICS ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು, ‘Building for Resilience, Innovation, Cooperation and Sustainability’ ಎಂಬ ಧ್ಯೇಯದಡಿ ತನ್ನ ಅಧ್ಯಕ್ಷತೆಯನ್ನು ಮುನ್ನಡೆಸುತ್ತಿದೆ.

BRICS ಒಕ್ಕೂಟದಲ್ಲಿ ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಭಾರತ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ 11 ಪ್ರಮುಖ ಉದಯೋನ್ಮುಖ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿವೆ.

ಬೆಲಾರಸ್, ಬೊಲಿವಿಯಾ, ಕ್ಯೂಬಾ, ಕಜಕಿಸ್ತಾನ, ಮಲೇಷ್ಯಾ, ನೈಜೀರಿಯಾ, ಥಾಯ್ಲೆಂಡ್, ಉಗಾಂಡಾ, ಉಜ್ಬೇಕಿಸ್ತಾನ ಹಾಗೂ ವಿಯೆಟ್ನಾಂ BRICS ಪಾಲುದಾರ ರಾಷ್ಟ್ರಗಳಾಗಿ ಭಾಗವಹಿಸುತ್ತಿವೆ.

ಈ ಮಹತ್ವ ಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಹಾಗೂ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಸೇರಿದಂತೆ ಹಲವು ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

BRICS ರಾಷ್ಟ್ರಗಳು ಒಟ್ಟಾಗಿ ವಿಶ್ವದ ಸುಮಾರು 49ರಷ್ಟು ಜನಸಂಖ್ಯೆ ಹಾಗೂ ಜಾಗತಿಕ ಒಟ್ಟು ದೇಶೀಯ ಉತ್ಪನ್ನದ (GDP) ಸುಮಾರು 40ರಷ್ಟು ಪಾಲನ್ನು ಪ್ರತಿನಿಧಿಸುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com