TMC ಪಕ್ಷದ ಹೆಸರು, ಚಿಹ್ನೆ ಫ್ರೀಜ್ ಮಾಡಿದ ಚುನಾವಣಾ ಆಯೋಗ: ಉಪಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್‌, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ..!

ಅಕ್ಟೋಬರ್‌ 6ರಂದು ನಡೆಯಲಿರುವ ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಎರಡೂ ಬಣಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
Mamata Banerjee
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸುವ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹೆಸರು ಮತ್ತು ಅದರ ಅಧಿಕೃತ "ಹುಲ್ಲು ಮತ್ತು ಹೂವು" (Flowers and Grass) ಚಿಹ್ನೆಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು (ಫ್ರೀಜ್) ಹಾಕಿದೆ.

ಪಶ್ಚಿಮ ಬಂಗಾಳದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಹೆಸರು ಹಾಗೂ ಚುನಾವಣಾ ಚಿಹ್ನೆ ಬಳಕೆ ಕುರಿತು ತೃಣಮೂಲ ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಬಣಗಳ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಗುರುವಾರ ಮಧ್ಯಂತರ ಆದೇಶ ಹೊರಡಿಸಿದೆ.

ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಟಿಎಂಸಿಯ ಹೆಸರು ಮತ್ತು ಚಿಹ್ನೆ ಬಳಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಅಕ್ಟೋಬರ್‌ 6ರಂದು ನಡೆಯಲಿರುವ ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಎರಡೂ ಬಣಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.

ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅರೂಪ್‌ ರಾಯ್‌ ನೇತೃತ್ವದ ಎರಡು ಬಣಗಳು ನಂದಿಗ್ರಾಮ ಮತ್ತು ರೆಜಿನಗರ ಉಪಚುನಾವಣೆಗೆ ಪ್ರತ್ಯೇಕ ಹೆಸರು ಹಾಗೂ ಚುನಾವಣಾ ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಆಯೋಗ ಸೂಚಿಸಿದೆ.

ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಎಂಬ ಪಕ್ಷದ ಹೆಸರನ್ನು ಬಳಸುವುದನ್ನು ಎರಡೂ ಬಣಗಳಿಗೆ ಆಯೋಗ ನಿರ್ಬಂಧಿಸಿದೆ. ಅದೇ ರೀತಿ ಪಕ್ಷಕ್ಕೆ ಮೀಸಲಾಗಿರುವ ‘ಹೂವು ಮತ್ತು ಹುಲ್ಲು’ ಚಿಹ್ನೆಯನ್ನೂ ಬಳಸುವಂತಿಲ್ಲ ಎಂದು ತಿಳಿಸಿದೆ.

ಚುನಾವಣಾ ಚಿಹ್ನೆಗಳ (ಮೀಸಲು ಮತ್ತು ಹಂಚಿಕೆ) ಆದೇಶ, 1968ರ ಪ್ಯಾರಾ 15ರ ಅಡಿಯಲ್ಲಿ ಆಯೋಗ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಈ ಮಧ್ಯಂತರ ವ್ಯವಸ್ಥೆ ಜಾರಿಯಲ್ಲಿರಲಿದೆ ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

ಉಪಚುನಾವಣೆಯ ಉದ್ದೇಶಕ್ಕಾಗಿ ತಮಗೆ ಯಾವ ಹೆಸರಿನಿಂದ ಗುರುತಿಸಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಆದ್ಯತೆಯ ಕ್ರಮದಲ್ಲಿ ಮೂರು ಹೆಸರುಗಳ ಪಟ್ಟಿಯನ್ನು ಸೆಪ್ಟೆಂಬರ್‌ 18ರಂದು ಬೆಳಗ್ಗೆ 11 ಗಂಟೆಯೊಳಗೆ ಸಲ್ಲಿಸುವಂತೆ ಎರಡೂ ಬಣಗಳಿಗೆ ಆಯೋಗ ಸೂಚಿಸಿದೆ.

ಪ್ರತಿ ಬಣವು ಪ್ರಸ್ತಾಪಿಸುವ ಮೂರು ಹೆಸರುಗಳಲ್ಲಿ ಯಾವುದಾದರೂ ಒಂದು ಹೆಸರನ್ನು ಆಯೋಗ ಅನುಮೋದಿಸಬಹುದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

Mamata Banerjee
ಪಶ್ಚಿಮ ಬಂಗಾಳ ಉಪಚುನಾವಣೆ: ನಂದಿಗ್ರಾಮದಲ್ಲಿ ಹತ್ಯೆಗೀಡಾದ ಸಿಎಂ ಸುವೇಂದು ಆಪ್ತ ಸಹಾಯಕನ ತಾಯಿ ಕಣಕ್ಕೆ!

ಅದೇ ರೀತಿ ಉಪಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳಿಗೆ ನೀಡಬಹುದಾದ ಮೂರು ಮುಕ್ತ ಚುನಾವಣಾ ಚಿಹ್ನೆಗಳನ್ನು ಆದ್ಯತೆಯ ಕ್ರಮದಲ್ಲಿ ಸೂಚಿಸುವಂತೆಯೂ ಎರಡೂ ಬಣಗಳಿಗೆ ನಿರ್ದೇಶಿಸಲಾಗಿದೆ. ಪ್ರಸ್ತುತ ಚುನಾವಣೆಗಾಗಿ ಆಯೋಗ ಅಧಿಸೂಚಿಸಿರುವ ಮುಕ್ತ ಚಿಹ್ನೆಗಳ ಪಟ್ಟಿಯಿಂದಲೇ ಅವುಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಲಾಗಿದೆ.

ಟಿಎಂಸಿಯೊಳಗೆ ಎರಡು ಬಣಗಳಿವೆ ಎಂಬ ನಿರ್ಧಾರಕ್ಕೆ ಬಂದ ಬಳಿಕ ಚುನಾವಣಾ ಆಯೋಗ ಈ ಮಧ್ಯಂತರ ಆದೇಶ ನೀಡಿದೆ. ಒಂದು ಬಣಕ್ಕೆ ಮಮತಾ ಬ್ಯಾನರ್ಜಿ ಹಾಗೂ ಮತ್ತೊಂದು ಬಣಕ್ಕೆ ಅರೂಪ್‌ ರಾಯ್‌ ನೇತೃತ್ವ ವಹಿಸಿದ್ದು, ಎರಡೂ ಬಣಗಳು ಮಾನ್ಯತೆ ಪಡೆದ ರಾಜಕೀಯ ಪಕ್ಷವನ್ನು ತಾವು ಪ್ರತಿನಿಧಿಸುತ್ತೇವೆ ಎಂದು ಪ್ರತಿಪಾದಿಸುತ್ತಿವೆ ಎಂದು ಆಯೋಗ ಹೇಳಿದೆ.

ಈ ವಿವಾದಕ್ಕೆ ಚುನಾವಣಾ ಚಿಹ್ನೆಗಳ ಆದೇಶದ ಪ್ಯಾರಾ 15ರ ಅಡಿಯಲ್ಲಿ ಸಮಗ್ರ ನಿರ್ಧಾರ ಅಗತ್ಯವಿದೆ ಎಂದು ಆಯೋಗ ತಿಳಿಸಿದೆ.

ಸ್ಪರ್ಧಾತ್ಮಕ ಹಕ್ಕು ಮಂಡಿಸುವ ಬಣಗಳ ವಿವಾದದಲ್ಲಿ ಲಭ್ಯವಿರುವ ದಾಖಲೆಗಳು ಮತ್ತು ವಾಸ್ತವಾಂಶಗಳನ್ನು ಪರಿಶೀಲಿಸಿ, ಎರಡೂ ಬಣಗಳ ವಾದ ಆಲಿಸಿದ ಬಳಿಕ ಯಾವ ಬಣವನ್ನು ರಾಜಕೀಯ ಪಕ್ಷವೆಂದು ಗುರುತಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಈ ನಿಯಮ ಆಯೋಗಕ್ಕೆ ನೀಡುತ್ತದೆ.

ಆದರೆ, ಉಪಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ವಿಚಾರಣೆ ಪೂರ್ಣಗೊಳಿಸಲು ಸಮಯಾವಕಾಶ ಕಡಿಮೆ ಇರುವುದರಿಂದ ತಕ್ಷಣಕ್ಕೆ ಮಧ್ಯಂತರ ಆದೇಶ ಹೊರಡಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಎರಡೂ ಬಣಗಳಿಗೆ ಸಮಾನ ಅವಕಾಶ ಕಲ್ಪಿಸುವುದು ಹಾಗೂ ಅಂತಿಮ ನಿರ್ಧಾರವಾಗುವವರೆಗೆ ಅವುಗಳ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವುದು ಇದರ ಉದ್ದೇಶ ಎಂದು ಹೇಳಿದೆ.

ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್‌ನ ಸಂಘಟನಾ ರಚನೆ, ಅಧಿಕೃತ ಪ್ರತಿನಿಧಿಗಳು, ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ ಎರಡೂ ಬಣಗಳು ಪರಸ್ಪರ ವಿರುದ್ಧ ಹಕ್ಕು ಮಂಡಿಸುತ್ತಿರುವ ನಡುವೆಯೇ ಆಯೋಗದ ಈ ಕ್ರಮ ಹೊರಬಿದ್ದಿದೆ.

ಈ ತಿಂಗಳ ಆರಂಭದಲ್ಲೇ ಆಯೋಗ ಎರಡೂ ಬಣಗಳ ವಾದಗಳನ್ನು ಆಲಿಸುವ ಪ್ರಕ್ರಿಯೆ ಆರಂಭಿಸಿದ್ದು, ತಮ್ಮ ನಿಲುವನ್ನು ಸಮರ್ಥಿಸುವ ದಾಖಲೆಗಳನ್ನು ಎರಡೂ ಬಣಗಳು ಸಲ್ಲಿಸಿದ್ದವು.

ಚುನಾವಣಾ ಆಯೋಗದ ಮಧ್ಯಂತರ ಆದೇಶಕ್ಕೆ ಎರಡೂ ಬಣಗಳಿಂದ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮಮತಾ ಬ್ಯಾನರ್ಜಿ ಬಣವು ಆದೇಶವನ್ನು “ಕಾನೂನಿಗೆ ವಿರುದ್ಧ” ಎಂದು ತಿರಸ್ಕರಿಸಿದರೆ, ಬಂಡಾಯ ಬಣವು ಆದೇಶವನ್ನು ಸ್ವಾಗತಿಸಿದೆ.

ಮಾಜಿ ಮುಖ್ಯಮಂತ್ರಿಯ ಬೆಂಬಲಿಗ ಹಾಗೂ ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ, ಪಕ್ಷವು ಈ ಆದೇಶವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

“ಈ ಆದೇಶ ಕಾನೂನಿಗೆ ವಿರುದ್ಧವಾಗಿದೆ. ಹಲವು ಕಾನೂನು ಲೋಪಗಳಿರುವುದರಿಂದ ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ. ಆದೇಶದಲ್ಲಿ ವಾಸ್ತವಾಂಶಗಳನ್ನು ಉಲ್ಲೇಖಿಸಿಲ್ಲ. ಆದರೆ, ಕೆಲವೊಮ್ಮೆ ನಿಯಮಗಳು ಮತ್ತು ಕಾನೂನಿಗೆ ಅನುಗುಣವಾಗಿರದ ವಿಷಯಗಳನ್ನು ತಾತ್ಕಾಲಿಕವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನಾವು ನಮ್ಮ ಉತ್ತರವನ್ನು ಸಲ್ಲಿಸುತ್ತೇವೆ. ನಾಳೆ ಬೆಳಗ್ಗೆ 11 ಗಂಟೆಯೊಳಗೆ ನಿಮಗೆ ತಿಳಿಸುತ್ತೇವೆ” ಎಂದು ಹೇಳಿದ್ದಾರೆ.

ಬಂಡಾಯ ಬಣದ ನಾಯಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಅಖ್ರುಜ್ಜಮಾನ್‌ ಅನ್ಸಾರಿ ಅವರು ಚುನಾವಣಾ ಆಯೋಗದ ಮಧ್ಯಂತರ ವ್ಯವಸ್ಥೆಯನ್ನು ಪಾಲಿಸುವುದಾಗಿ ತಿಳಿಸಿದ್ದಾರೆ. ಅಂತಿಮ ತೀರ್ಪಿನಲ್ಲಿ ಪಕ್ಷದ “ಮೂಲ” ಹೆಸರು ಮತ್ತು ಚಿಹ್ನೆ ತಮಗೆ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗದ ಆದೇಶವನ್ನು ನಾವು ಒಪ್ಪಿಕೊಳ್ಳುತ್ತೇವೆ. ನಮಗೆ ಎರಡು ಹೂವುಗಳಿರುವ ಹುಲ್ಲಿನ ಚಿಹ್ನೆಯೇ ಬೇಕಾಗಿತ್ತು. ಆದರೆ, ಸದ್ಯಕ್ಕೆ ಆಯೋಗ ಮಧ್ಯಂತರ ಆದೇಶ ನೀಡಿದೆ. ಆಯೋಗ ಅಂತಿಮ ತೀರ್ಪು ನೀಡಿದಾಗ ಪಕ್ಷದ ಅಧಿಕೃತ ಮತ್ತು ಮೂಲ ಹೆಸರು ಹಾಗೂ ಚಿಹ್ನೆ ನಮಗೆ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com