

ಡೆಹ್ರಾಡೂನ್: 2006ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿಥಾರಿ ಹತ್ಯಾಕಾಂಡ ಪ್ರಕರಣದೊಂದಿಗೆ ಸುಮಾರು ಎರಡು ದಶಕಗಳಿಂದ ಗುರುತಿಸಿಕೊಂಡಿದ್ದ ಆರೋಪಿ ಸುರೇಂದ್ರ ಕೋಲಿ (50) ಹರಿದ್ವಾರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಶುಕ್ರವಾರ ಭೂಪತ್ವಾಲಾ ಪ್ರದೇಶದ ಚಹಾ ಅಂಗಡಿಯೊಂದರಲ್ಲಿ ಆತನ ಮೃತದೇಹ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ಕಾರಣ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿದ್ವಾರ ಸಿಟಿ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್ ಮಾತಾ ದೇವಸ್ಥಾನದ ಎದುರಿನ ಚಹಾ ಅಂಗಡಿಯಲ್ಲಿ ಕೋಲಿಯ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹವನ್ನು ವಶಕ್ಕೆ ಪಡೆದು, ಸುತ್ತಮುತ್ತಲಿನವರನ್ನು ವಿಚಾರಣೆ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ಕೋಲಿ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಭಿಕಿಯಾಸೈನ್ ಪ್ರದೇಶದ ಮಂಗ್ರುಖಾಲ್ ಗ್ರಾಮದ ಶಂಕು ರಾಮ್ ಅವರ ಪುತ್ರ. ಪ್ರಾಥಮಿಕವಾಗಿ ಇದು ಆತ್ಮಹತ್ಯೆ ಪ್ರಕರಣವೆಂದು ಕಂಡುಬರುತ್ತಿದೆ. ಆದರೆ ಸಾವಿಗೆ ಕಾರಣ ಹಾಗೂ ಅದಕ್ಕೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣವಾಗಿರಬಹುದಾದ ಯಾವುದೇ ನಿರ್ದಿಷ್ಟ ವಿಚಾರವನ್ನು ಪೊಲೀಸರು ಸದ್ಯ ಬಹಿರಂಗಪಡಿಸಿಲ್ಲ.
ಪ್ರಾಥಮಿಕ ವಿಚಾರಣೆಯ ಪ್ರಕಾರ, ಕೋಲಿ ಕಳೆದ ಕೆಲವು ತಿಂಗಳುಗಳಿಂದ ಹರಿದ್ವಾರದಲ್ಲಿ ವಾಸಿಸುತ್ತಿದ್ದ. ಇದಕ್ಕೂ ಮೊದಲು ರೋಷನಾಬಾದ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ಭೂಪತ್ವಾಲಾ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದ ಆತ, ಮೃತದೇಹ ಪತ್ತೆಯಾದ ಚಹಾ ಅಂಗಡಿಯನ್ನು ನಡೆಸಲು ಆರಂಭಿಸಿದ್ದ ಎಂದು ತಿಳಿದುಬಂದಿದೆ.
ಕಳೆದ ಕೆಲವು ವಾರಗಳಲ್ಲಿ ಕೋಲಿಯ ಸಂಪರ್ಕದಲ್ಲಿದ್ದವರು ಯಾರು, ಆತನ ಚಲನವಲನ ಹೇಗಿತ್ತು ಮತ್ತು ಯಾವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹತ್ಯಾಕಾಂಡ
ನೋಯ್ಡಾದ ಸೆಕ್ಟರ್ 31ರ ಉದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಮನೆಯಲ್ಲಿ ಕೋಲಿ ಮನೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ. 2006ರ ಡಿಸೆಂಬರ್ 29ರಂದು ಪಂಧೇರ್ ಅವರ ಮನೆಯ ಹಿಂಭಾಗದ ಚರಂಡಿಯಲ್ಲಿ ಹಲವು ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಅವುಗಳಲ್ಲಿ ಮಕ್ಕಳು ಮತ್ತು ನಿಥಾರಿ ಪ್ರದೇಶದಿಂದ ಕಾಣೆಯಾಗಿದ್ದ ಯುವತಿಯರ ಅವಶೇಷಗಳೂ ಇದ್ದವು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಅವಶೇಷಗಳ ಪತ್ತೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಪ್ರಕರಣದ ತನಿಖೆ ಹಲವು ವರ್ಷಗಳ ಕಾಲ ಮುಂದುವರಿದು, ಅನೇಕ ಪ್ರಕರಣಗಳಲ್ಲಿ ವಿಚಾರಣೆ ನಡೆಯಿತು. ಹಲವಾರು ಪ್ರಕರಣಗಳಲ್ಲಿ ಕೋಲಿಗೆ ಮರಣದಂಡನೆ ವಿಧಿಸಲಾಗಿತ್ತು. ಆದರೆ 2023ರ ಅಕ್ಟೋಬರ್‌ನಲ್ಲಿ ಅಲಹಾಬಾದ್ ಹೈಕೋರ್ಟ್, ಗಂಭೀರ ತನಿಖಾ ಲೋಪಗಳು ಹಾಗೂ ಸಾಕಷ್ಟು ಸಾಕ್ಷ್ಯಗಳ ಕೊರತೆಯನ್ನು ಉಲ್ಲೇಖಿಸಿ, ತನ್ನ ಮುಂದೆ ವಿಚಾರಣೆಗೆ ಬಂದಿದ್ದ ಪ್ರಕರಣಗಳಲ್ಲಿ ಕೋಲಿ ಮತ್ತು ಪಂಧೇರ್ ಅವರನ್ನು ಖುಲಾಸೆಗೊಳಿಸಿತ್ತು.
2025ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಉಳಿದಿದ್ದ ಪ್ರಕರಣದಲ್ಲಿಯೂ ಕೋಲಿಯನ್ನು ಖುಲಾಸೆಗೊಳಿಸಿ ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಇದರೊಂದಿಗೆ ಹಲವು ವರ್ಷಗಳ ಕಾನೂನು ಹೋರಾಟದ ಬಳಿಕ ಕೋಲಿಗೆ ಕಾನೂನಾತ್ಮಕ ಸ್ವಾತಂತ್ರ್ಯ ದೊರೆತಿತ್ತು.
ಕುಟುಂಬಕ್ಕೂ ತೀವ್ರ ಸಂಕಷ್ಟ
ಕಾನೂನಾತ್ಮಕವಾಗಿ ಬಿಡುಗಡೆಯಾದರೂ, ನಿಥಾರಿ ಪ್ರಕರಣದ ಕಳಂಕದ ನೆರಳು ಕೋಲಿಯ ಕುಟುಂಬದ ಮೇಲೂ ವರ್ಷಗಳ ಕಾಲ ಉಳಿದಿತ್ತು ಎನ್ನಲಾಗಿದೆ. ಕೋಲಿಯ ತಾಯಿ ಕುಂತಿ ದೇವಿ ಸುಮಾರು ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಪತ್ನಿ ಶಾಂತಿ ದೇವಿ ಸುಮಾರು ಒಂದು ದಶಕದ ಹಿಂದೆ ಇಬ್ಬರು ಮಕ್ಕಳೊಂದಿಗೆ ಮಂಗ್ರುಖಾಲ್ ಗ್ರಾಮವನ್ನು ತೊರೆದಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
“ಕುಟುಂಬಕ್ಕೆ ಈ ಅವಮಾನವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ಅವರು ನಿರಂತರವಾಗಿ ಅವಮಾನ ಎದುರಿಸುತ್ತಿದ್ದರು” ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಗ್ರಾಮದಲ್ಲಿರುವ ಕೋಲಿಯ ಕುಟುಂಬದ ಪೂರ್ವಿಕರ ಮನೆ ಇದೀಗ ಪಾಳುಬಿದ್ದ ಸ್ಥಿತಿಯಲ್ಲಿದೆ. 2014ರಲ್ಲಿ ಕೋಲಿಯ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆ ಎದುರಾದ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ್ ಸಿಂಗ್ ರಾವತ್ ಕಾನೂನು ನೆರವಿಗೆ ಮುಂದಾಗಿದ್ದರು.
“ನಾನು ವಕೀಲರನ್ನು ಸಂಪರ್ಕಿಸಿ, ತಡರಾತ್ರಿಯಲ್ಲಿಯೂ ನ್ಯಾಯಾಲಯ ತೆರೆಯುವಂತೆ ಮಾಡಿದ್ದೆ. ಒಂದು ಪ್ರಕರಣದಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸಿದರೆ ಉಳಿದ ಪ್ರಕರಣಗಳ ವಿಚಾರಣೆಯ ಮೇಲೆ ಪರಿಣಾಮ ಬೀರಬಹುದು ಎಂದು ವಾದಿಸಿದ್ದೆವು. ನ್ಯಾಯಾಲಯ ನಮ್ಮ ವಾದವನ್ನು ಪರಿಗಣಿಸಲು ಒಪ್ಪಿಕೊಂಡಿತ್ತು” ಎಂದು ರಾವತ್ ಸ್ಮರಿಸಿಕೊಂಡಿದ್ದಾರೆ.
ನಿಥಾರಿ ಹತ್ಯಾಕಾಂಡ ಪ್ರಕರಣವು ದೇಶದ ಅತ್ಯಂತ ಕಳವಳಕಾರಿ ಅಪರಾಧ ತನಿಖೆಗಳಲ್ಲಿ ಒಂದಾಗಿ ಉಳಿದಿದ್ದು, ಅದರ ಸಂತ್ರಸ್ತರ ಕುಟುಂಬಗಳನ್ನು ಇಂದಿಗೂ ಕಾಡುತ್ತಿದೆ. ಇದೀಗ ಸುರೇಂದ್ರ ಕೋಲಿಯ ಸಾವಿನೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ದುರಂತ ಅಧ್ಯಾಯ ಅಂತ್ಯಗೊಂಡಿದೆ.