‘ಸಲ್ವಾರ್ ತೆಗೆದು ಸ್ತನಗಳ ಒತ್ತುವುದು ಅತ್ಯಾಚಾರ ಯತ್ನವಲ್ಲವೇ?’: ಪಾಟ್ನಾ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಆಕ್ಷೇಪ

ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ (suo motu) ಕೈಗೆತ್ತಿಕೊಂಡಿದ್ದು, ಪ್ರಕರಣದಲ್ಲಿ ಖುಲಾಸೆಗೊಂಡಿರುವ ಆರೋಪಿಗೆ ನೋಟಿಸ್ ಜಾರಿ ಮಾಡಿದೆ.
Supreme Court
ಸುಪ್ರೀಂ ಕೋರ್ಟ್
Updated on: 

ನವದೆಹಲಿ: ಮಹಿಳೆಯ ಸಲ್ವಾರ್ ಕಳಚಿ ಸ್ತನಗಳ ಒತ್ತಿದ ಕೃತ್ಯವು ಅತ್ಯಾಚಾರಕ್ಕೆ ಯತ್ನವೆಂದು ಪರಿಗಣಿಸಲಾಗುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ಇತ್ತೀಚಿನ ತೀರ್ಪಿಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.

ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ (suo motu) ಕೈಗೆತ್ತಿಕೊಂಡಿದ್ದು, ಪ್ರಕರಣದಲ್ಲಿ ಖುಲಾಸೆಗೊಂಡಿರುವ ಆರೋಪಿಗೆ ನೋಟಿಸ್ ಜಾರಿ ಮಾಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಬುಧವಾರ ವಿಚಾರಣೆ ನಡೆಸಿತು.

“ಈ ತೀರ್ಪಿನಲ್ಲಿ ಕೆಲವು ಆಕ್ಷೇಪಾರ್ಹ ಭಾಗಗಳಿವೆ. ಆರೋಪಿಯ ವಾದ ಆಲಿಸಿದ ಬಳಿಕವಷ್ಟೇ ನಾವು ಅದನ್ನು ರದ್ದುಗೊಳಿಸಬಹುದು” ಎಂದು ಸಿಜೆಐ ಸೂರ್ಯಕಾಂತ್ ಹೇಳಿದ್ದಾರೆ.

ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೂ ಒಳಗೊಂಡ ಪೀಠವು ಆರೋಪಿಯಾಗಿರುವ ಹಿಮಾಂಶು ಪಾಠಕ್ ಅವರಿಗೆ ಸ್ಥಳೀಯ ಪೊಲೀಸರ ಮೂಲಕ ನೋಟಿಸ್ ತಲುಪಿಸಲು ರಾಜ್ಯ ಸರ್ಕಾರಕ್ಕೆ ಸಹಕರಿಸುವಂತೆ ಸೂಚಿಸಿದೆ.

Supreme Court
'ಪಾಪಿ ಮಗ': 'ಅವಳೊಬ್ಬಳೇ ಅಲ್ಲ.. ಸಾಕಷ್ಟು ಮಂದಿ ಇದ್ದಾರೆ, ಮುಲಾಜಿಲ್ಲದೇ ಅವನನ್ನ ಗಲ್ಲಿಗೇರಿಸಿ': ಆರೋಪಿ ಮಗನ ವಿರುದ್ಧವೇ ತಾಯಿ ಆರೋಪ!

ಏನಿದು ಘಟನೆ?

ಮೂಲಗಳ ಪ್ರಕಾರ ಈ ಪ್ರಕರಣದ ಘಟನೆ 2008ರಲ್ಲಿ ಬಿಹಾರದಲ್ಲಿ ನಡೆದಿತ್ತು. ಸಂತ್ರಸ್ತೆ ತನ್ನ ತಂದೆಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಫೋಟೋ ಸ್ಟುಡಿಯೋಗೆ ತೆರಳಿದ್ದ ವೇಳೆ ಆರೋಪಿ ಛಾಯಾಗ್ರಾಹಕ ಆಕೆಯನ್ನು ಸ್ಟುಡಿಯೋದೊಳಗೆ ಕರೆದೊಯ್ದಿದ್ದ.

ಆರೋಪಿ ಒಳಗಿನಿಂದ ಬಾಗಿಲು ಹಾಕಿಕೊಂಡು ಸಂತ್ರಸ್ತೆಯ ಸಲ್ವಾರ್ ಕಳಚಲು ಪ್ರಯತ್ನಿಸಿ, ಆಕೆಯ ಎದೆ ಒತ್ತಿದ್ದ ಎಂದು ಆರೋಪಿಸಲಾಗಿದೆ.

ಸಂತ್ರಸ್ತೆ ಕೂಗಿಕೊಂಡಾಗ ಆಕೆಯ ತಂದೆ ಬಾಗಿಲು ತೆರೆಯುವಂತೆ ಆರೋಪಿಯನ್ನು ಒತ್ತಾಯಿಸಿದ್ದರು. ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು 2013ರಲ್ಲಿ ಆರೋಪಿಯನ್ನು ದೋಷಿ ಎಂದು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಪಾಟ್ನಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ.

Supreme Court
ಜಮುಯಿ ಕೇಸ್‌ನಲ್ಲಿ ಪಾಪಿ ಮಗನ ಬೆನ್ನತ್ತಿ ಹೋದ ಪೊಲೀಸರಿಗೆ ಸಿಕ್ತು ಬಿಗ್ ಟ್ವಿಸ್ಟ್: 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಗಾರ ತಂದೆಯೂ ಅರೆಸ್ಟ್!

ಪಾಟ್ನಾ ಹೈಕೋರ್ಟ್ ತೀರ್ಪಿನಲ್ಲಿ ಏನಿತ್ತು?

ಜುಲೈ 9ರಂದು ಅಪ್‌ಲೋಡ್ ಮಾಡಲಾದ ತೀರ್ಪಿನಲ್ಲಿ ಪಾಟ್ನಾ ಹೈಕೋರ್ಟ್, ಆರೋಪಿ ಸಂತ್ರಸ್ತೆಯನ್ನು ಸ್ಟುಡಿಯೋದಲ್ಲಿ ಕೂಡಿ ಹಾಕಿ, ಬಾಗಿಲು ಮುಚ್ಚಿ, ಆಕೆಯ ಸಲ್ವಾರ್ ತೆಗೆದುಹಾಕಲು ಪ್ರಯತ್ನಿಸಿ ಹಾಗೂ ಎದೆ ಒತ್ತುವ ಮೂಲಕ ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶ ಅಥವಾ ಅಂತಹ ಕೃತ್ಯದಿಂದ ಘನತೆಗೆ ಧಕ್ಕೆ ಉಂಟಾಗುವ ಸಾಧ್ಯತೆಯ ಅರಿವಿನೊಂದಿಗೆ ಅಪರಾಧ ಬಲಪ್ರಯೋಗ ಮಾಡಿದ್ದಾನೆ ಎಂದು ಹೇಳಿತ್ತು.

ಆದರೆ ಆರೋಪಿಯ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಯತ್ನದ ಆರೋಪಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 376 ಮತ್ತು 511ರ ಅಂಶಗಳು ಸಾಬೀತಾಗಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಈ ಕೃತ್ಯವು ಅತ್ಯಾಚಾರಕ್ಕೆ ಯತ್ನವೆಂದು ಪರಿಗಣಿಸುವ ಬದಲು, ಐಪಿಸಿ ಸೆಕ್ಷನ್ 354ರಡಿ ಮಹಿಳೆಯ ಘನತೆಗೆ ಧಕ್ಕೆ ತಂದ ಅಪರಾಧ ಎಂದು ಪರಿಗಣಿಸಬಹುದೆಂದು ಹೇಳಿದ್ದ ಹೈಕೋರ್ಟ್, ಆರೋಪಿಯನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿತ್ತು.

ಈ ತೀರ್ಪಿನ ಬಗ್ಗೆ ಹಿರಿಯ ವಕೀಲೆ ಶೋಭಾ ಗುಪ್ತಾ ಅವರು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತಂದ ಬಳಿಕ, ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com