ತಂತ್ರಜ್ಞಾನ, ಆವಿಷ್ಕಾರದಿಂದ ಹೊಸ ವೇಗ, ಭಾರತದ ಆರ್ಥಿಕ ಬೆಳವಣಿಗೆ ಶೇ.10 ಮೀರಬಹುದು: ನಿರ್ಮಲಾ ಸೀತಾರಾಮನ್

ಬೆಂಗಳೂರಿನಲ್ಲಿ ನಡೆದ ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಹೆಚ್ಚಿನ ಆರ್ಥಿಕ ಬೆಳವಣಿಗೆಯು ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತದತ್ತ ದೇಶದ ಪಯಣವನ್ನು ಮತ್ತಷ್ಟು..
FM Nirmala Sitharaman
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Updated on: 

ಬೆಂಗಳೂರು: ತಂತ್ರಜ್ಞಾನ ಮತ್ತು ನಾವೀನ್ಯತೆಯ ಹೆಚ್ಚಿನ ಬಳಕೆಯಿಂದ ಭಾರತವು ಶೇ.10ಕ್ಕೂ ಹೆಚ್ಚು ಆರ್ಥಿಕ ಬೆಳವಣಿಗೆ ದರ ಸಾಧಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಹೆಚ್ಚಿನ ಆರ್ಥಿಕ ಬೆಳವಣಿಗೆಯು ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತದತ್ತ ದೇಶದ ಪಯಣವನ್ನು ಮತ್ತಷ್ಟು ವೇಗಗೊಳಿಸಲಿದೆ.

ಆದರೆ ಇದಕ್ಕಾಗಿ ಎಲ್ಲ ಕ್ಷೇತ್ರಗಳಿಂದಲೂ ಹೆಚ್ಚಿನ ಪ್ರಯತ್ನ ಅಗತ್ಯ. ಶೇ.10ಕ್ಕೂ ಅಧಿಕ ಬೆಳವಣಿಗೆ ಸಾಧಿಸುವುದು ಸಾಧ್ಯ. ನಿಮ್ಮನ್ನು ಉತ್ತೇಜಿಸಲು ಮಾತ್ರ ನಾನು ಇದನ್ನು ಹೇಳುತ್ತಿಲ್ಲ. ಇದು ಸಾಧ್ಯ ಎಂದು ಹೇಳಿದರು.

2015ರಿಂದ ದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಮತ್ತು ಚಟುವಟಿಕೆಗಳಲ್ಲಿ ಕಂಡುಬಂದ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ಮುಂಬರುವ ವರ್ಷಗಳಲ್ಲಿ ಸ್ಟಾರ್ಟ್‌ಅಪ್‌ಗಳು ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಬಹುದು. ದೇಶದ ಭವಿಷ್ಯದ ಬಗ್ಗೆ ಅತಿಯಾದ ನಿರಾಶಾವಾದ ಅಥವಾ ಅನುಮಾನ ವ್ಯಕ್ತಪಡಿಸುವುದನ್ನು ಬಿಟ್ಟು, ನೆಲಮಟ್ಟದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಗುರುತಿಸುವ ಅಗತ್ಯವಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

“ನಮ್ಮಲ್ಲಿ ಭಾರತ ವಿಫಲವಾಗಲಿ ಎಂದು ಬಯಸುವವರು ಹಲವರಿದ್ದಾರೆ. ನಾವು ಅದನ್ನು ಸಹಿಸಲು ಸಾಧ್ಯವಿಲ್ಲ. ಜನರು ಸಕಾರಾತ್ಮಕವಾಗಿ ಯೋಚಿಸುವಂತೆ ಪ್ರೇರೇಪಿಸಬೇಕಿದೆ” ಎಂದು ಅವರು ಹೇಳಿದರು.

FM Nirmala Sitharaman
ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಪ್ರಮುಖ BRICS ಮಾರುಕಟ್ಟೆಗಳಿಗೆ ಭಾರತದ ರಫ್ತು ಶೇ 34ರಷ್ಟು ಏರಿಕೆ; ಚೀನಾಗೆ ಅತಿ ಹೆಚ್ಚು!

ಕೃಷಿಯಲ್ಲಿ ತಂತ್ರಜ್ಞಾನಕ್ಕೆ ಒತ್ತು

ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯಿಂದ ಉತ್ಪಾದಕರನ್ನು ಮಾರುಕಟ್ಟೆಯೊಂದಿಗೆ ಸಂಪರ್ಕಿಸುವುದು ಹಾಗೂ ಉತ್ಪಾದಕತೆ ಹೆಚ್ಚಿಸುವಲ್ಲಿ ಗಮನಾರ್ಹ ಬದಲಾವಣೆ ಸಾಧ್ಯವಾಗಿದೆ.

ಕೊಯ್ಲು ಪ್ರಕ್ರಿಯೆಯನ್ನು ವೇಗಗೊಳಿಸುವುದು, ಮುಂದಿನ ಬೆಳೆಗೆ ಭೂಮಿಯನ್ನು ಸಿದ್ಧಪಡಿಸುವುದು ಸೇರಿದಂತೆ ಹಲವು ಕಾರ್ಯಗಳಲ್ಲಿ ತಂತ್ರಜ್ಞಾನ ನೆರವಾಗುತ್ತಿದೆ. ಈ ಹಿಂದೆ ಕೈಯಾರೆ ಮಾಡಲಾಗುತ್ತಿದ್ದ ಜಮೀನುಗಳ ನಿಖರ ಮ್ಯಾಪಿಂಗ್‌ಗಾಗಿ ಡ್ರೋನ್‌ಗಳು ಮತ್ತು ವೈಮಾನಿಕ ಜಿಯೋಸ್ಪೇಷಿಯಲ್ ಸಾಧನಗಳನ್ನು ಬಳಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.

“ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಸಂದರ್ಭದಲ್ಲಿ ಸ್ಟಾರ್ಟ್‌ಅಪ್‌ಗಳಲ್ಲಿ ನಡೆಯುವ ಆವಿಷ್ಕಾರಗಳು ಪ್ರತಿಯೊಂದು ಕ್ಷೇತ್ರಕ್ಕೂ ತಲುಪಬೇಕು” ಎಂದು ಅವರು ಹೇಳಿದರು.

ರಸಗೊಬ್ಬರ ವಿತರಣೆಯಲ್ಲೂ POS ತಂತ್ರಜ್ಞಾನ

ರಸಗೊಬ್ಬರ ವಿತರಣೆಯಲ್ಲಿ ಕಳ್ಳತನ ಮತ್ತು ಅಕ್ರಮ ಬಳಕೆಯನ್ನು ತಡೆಯಲು ಪಾಯಿಂಟ್ ಆಫ್ ಸೇಲ್ (POS) ಯಂತ್ರಗಳ ಬಳಕೆಯನ್ನು ಉದಾಹರಣೆಯಾಗಿ ನೀಡಿದರು. ಇದು ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ರೈತನ ವಿವರಗಳು, ಜಮೀನು ಹಾಗೂ ಬೆಳೆಯ ಮಾಹಿತಿಯನ್ನು ದಾಖಲಿಸುತ್ತದೆ. ಮಣ್ಣು, ನೀರಾವರಿ ಮತ್ತು ಬೆಳೆಯ ಪರಿಸ್ಥಿತಿಯನ್ನು ಆಧರಿಸಿ ಅಗತ್ಯವಿರುವ ರಸಗೊಬ್ಬರದ ಪ್ರಮಾಣದ ಕುರಿತು ರೈತರಿಗೆ ಮಾಹಿತಿ ನೀಡಲು ಈ ವ್ಯವಸ್ಥೆ ನೆರವಾಗಲಿದೆ ಎಂದರು.

ರಸಗೊಬ್ಬರ ಖರೀದಿಯಲ್ಲಿ ರೈತರಿಗೆ ತಮ್ಮ ಆಯ್ಕೆಯ ಸ್ವಾತಂತ್ರ್ಯ ಮುಂದುವರಿಯಲಿದೆ. ಆದರೆ ಬೆಳೆಗೆ ಎಷ್ಟು ಪ್ರಮಾಣ ಸಾಕಾಗಬಹುದು ಎಂಬುದರ ಕುರಿತು ತಂತ್ರಜ್ಞಾನ ಮಾಹಿತಿ ನೀಡಲಿದೆ. ಅತಿಯಾದ ಕೀಟನಾಶಕ ಹಾಗೂ ರಸಗೊಬ್ಬರ ಬಳಕೆಯಿಂದ ಮಣ್ಣು ಮತ್ತು ನೀರು ಕಲುಷಿತವಾಗುತ್ತಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞಾನ ನೆರವಾಗಬಹುದು ಎಂದು ಸಚಿವೆ ಸ್ಪಷ್ಟಪಡಿಸಿದರು.

“ಈ ತಂತ್ರಜ್ಞಾನಗಳು ಎಷ್ಟು ಬೇಗ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತಲುಪುತ್ತವೆಯೋ ಅಷ್ಟು ಭಾರತಕ್ಕೆ ಉತ್ತಮ. ಇದರಿಂದ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ದು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಬಹುದು” ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com