ರಾಮನಗರ: ಲೋಕಸಭೆ ಮರು ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಹೋರಾಟಕ್ಕೆ ಬಿಜೆಪಿ, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಮಾತ್ರವಲ್ಲದೆ ಕಾಂಗ್ರೆಸ್‌ನ ಅತೃಪ್ತರ ಬೆಂಬಲವೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಂ ಮತ್ತು ದುರ್ವರ್ತನೆಯಿಂದ ಬೇಸತ್ತವರು ಇದೀಗ ಕಾಂಗ್ರೆಸ್ ಮಣಿಸಲು ಸಜ್ಜಾಗಿದ್ದಾರೆ. ಮುಖ್ಯಮಂತ್ರಿ ಆದ ಬಳಿಕ ಸಿದ್ದರಾಮಯ್ಯ ವರ್ತನೆ ಬದಲಾಗಿದೆ. ಅವರ ಧೋರಣೆ ವಿರುದ್ಧ ಪ್ರತಿಪಕ್ಷಗಳು ಸಮರ ಸಾರಿದ್ದು, ಇದಕ್ಕೆ ಕಾಂಗ್ರೆಸ್‌ನ ಪ್ರಬಲ ಗುಂಪಿನ ಸಹಕಾರವೂ ಇದೆ. ಈ ಎಲ್ಲರ ಗುರಿ ಕಾಂಗ್ರೆಸ್ ಸೋಲಿಸುವುದೇ ಆಗಿದೆ ಎಂದರು. ಕಾಂಗ್ರೆಸ್ ಧೂಳೀಪಟ ಮಾಡುವುದಾಗಿ ಯಡಿಯೂರಪ್ಪ ಅವರು ಸದನದಲ್ಲೇ ಹೇಳಿದ್ದಾರೆ. ಅಂತೆಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸೆಣಸುತ್ತಿದ್ದಾರೆ ಎಂದರು.
ಇಂದಿನಿಂದ ರಮ್ಯ ಪ್ರಚಾರ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ ರಮ್ಯ ಆ.12ರಿಂದ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಸಾಕು ತಂದೆ ಆರ್.ಟಿ. ನಾರಾಯಣ್ ಅವರ ನಿಧನದಿಂದಾಗಿ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ರಮ್ಯ, ವಸತಿ ಸಚಿವ ಅಂಬರೀಷ್ ಜತೆಗೂಡಿ ನಾಳೆಯಿಂದ ಮೊದಲ ಹಂತದಲ್ಲಿ ಮಂಡ್ಯ ನಗರದಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಲಿದ್ದಾರೆ.