ರಾಜಕೀಯ

ಶಿವಮೊಗ್ಗದಲ್ಲಿ ಯಾರ ಹಿಗ್ಗು

ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ, 2ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲಿ ಕೆಜೆಪಿ ಸದ್ದಿನೊಂದಿಗೆ ಈ ಬಾರಿಯ ಕದನ ಸಿದ್ಧತೆಯ ವಿವರ ನಿಮಗಾಗಿ..

Published On :

ನಡೆದಿದೆ ಜಯದ 'ಶಿಕಾರಿ'ಪುರ
ಶಿಕಾರಿಪುರ ಕ್ಷೇತ್ರ ಮಾಜಿ ಸಿಎಂ ಯಡಿಯೂರಪ್ಪ ಪಾಲಿಗೆ ಭದ್ರಕೋಟೆ. 1983ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೆಂಕಟಪ್ಪ ಅವರ ವಿರುದ್ಧ ಗೆದ್ದ ಬಳಿಕ ಸತತವಾಗಿ ಗೆಲ್ಲುತ್ತಾ ಬಂದಾಗ 1999ರಲ್ಲಿ ಬಂಗಾರಪ್ಪ ಅಲೆಯಲ್ಲಿ ಕೊಚ್ಚಿ ಹೋಗಿದ್ದರು. ಆದರೆ, ಮುಂದೆ ನಡೆದ ಚುನಾವಣೆಯಲ್ಲಿ ಗೆದ್ದು ಭದ್ರವಾಗಿ ತಳ ಊರಿದ್ದಾರೆ. ಈಗ ಕೆಜೆಪಿ ಕಟ್ಟಿ ಹೊಸ ಮನ್ವಂತರಕ್ಕೆ ಸಜ್ಜಾಗಿ ಬಿಜೆಪಿ ನೆಲೆ ಅಲುಗಾಡಿಸಿದ್ದಾರೆ. ಕೆಜೆಪಿಯಿಂದ ಬಿಎಸ್‌ವೈ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ನಿಂದ ಒಂದು ಕಾಲದಲ್ಲಿ ಬಿಎಸ್‌ವೈ ಆಪ್ತರಾಗಿದ್ದ ಶಾಂತವೀರಪ್ಪಗೌಡ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಜೆಪಿಯಿಂದ ಪದ್ಮನಾಭ ಭಟ್ ಹೆಸರು ಕೇಳಿ ಬರುತ್ತಿದೆ. ಆದರೆ, ಅವರು ಚುನಾವಣಾ ರಾಜಕೀಯ ಬೇಡವೆನ್ನುತ್ತಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್ ಸದ್ಯಕ್ಕೆ ಲೆಕ್ಕಕ್ಕಿಲ್ಲ.

ಸೊರಬ: ಯಾರಿಗೆ 'ಬಂಗಾರ'?
ಸೊರಬ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಹರತಾಳು ಹಾಲಪ್ಪ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೆಜೆಪಿ ಬಾಗಿಲು ತಟ್ಟಿದ್ದಾರೆ. ಹೀಗಾಗಿ ಕೆಜೆಪಿಯಿಂದ ಹಾಲಪ್ಪ ಅವರೇ ಅಭ್ಯರ್ಥಿ. ಬಿಜೆಪಿಯಿಂದ ಹುಲ್ತಿಕೊಪ್ಪ ಶ್ರೀಧರ ಅಥವಾ ನಾಗರಾಜಗೌಡ ಕಣಕ್ಕಿಳಿಯುವ ಸಾಧ್ಯತೆ ಇದೆ. ಜೆಡಿಎಸ್‌ನಿಂದ ಮಧು ಬಂಗಾರಪ್ಪ, ಕಾಂಗ್ರೆಸ್‌ನಿಂದ ಕುಮಾರ ಬಂಗಾರಪ್ಪ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಬಂಗಾರಪ್ಪ ಅವರ ನಿಧನದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು ಅಣ್ಣ-ತಮ್ಮರ ಕಾದಾಟಕ್ಕೆ ವೇದಿಕೆಯಾಗಲಿದೆ. ಇವೆಲ್ಲದರ ಮಧ್ಯೆ ಕಾಗೋಡು ತಿಮ್ಮಪ್ಪ ಸಹೋದರರನ್ನು ಒಂದುಗೂಡಿಸಲು ಯತ್ನಿಸುತ್ತಿದ್ದಾರೆ. ಇದು ಫಲಿಸಿದರೆ ಮಧು ವಿಧಾನಸಭೆಗೆ, ಕುಮಾರ ಲೋಕಸಭೆಗೆ ಸ್ಪರ್ಧಿಸುವ ಸೂತ್ರ ಹೆಣೆಯಲಾಗಿದೆ. ಇದೆಲ್ಲದಕ್ಕೂ ಕಾಲವೇ ಉತ್ತರಿಸಬೇಕು.

ಗ್ರಾಮಾಂತರ: ಯಾರಿಗೆ ಗಂಡಾಂತರ?
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಕೆ.ಜಿ. ಕುಮಾರಸ್ವಾಮಿ. ಆರಂಭದಲ್ಲಿ ಬಿಎಸ್‌ವೈ ಜತೆ ಗುರುತಿಸಿಕೊಂಡು ಈಗ ಹಿಂದೆ ಸರಿದಿದ್ದು ಈ ಬಾರಿಯೂ ಬಿಜೆಪಿಯಿಂದ ಅವರೇ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ನಿಂದ ಕರಿಯಣ್ಣ, ಜೆಡಿಎಸ್‌ನಿಂದ ಶಾರದಾ ಪೂರ್ಯಾನಾಯ್ಕ ಸ್ಪರ್ಧಿಸುವುದು ಬಹುತೇಕ ಖಚಿತ. ಕೆಜೆಪಿಯಿಂದ ಜಿಪಂ ಸದಸ್ಯ ಅಶೋಕ ನಾಯ್ಕ, ಭೋವಿ ಸಮಾಜಕ್ಕೆ ಸೇರಿದ ಮಾಜಿ ಸಚಿವ, ಬಿಎಸ್‌ವೈ ಆಪ್ತ ಬಸವಣ್ಯಪ್ಪ, ವಕೀಲ ಎಲ್. ಶ್ರೀನಿವಾಸಬಾಬು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಇಲ್ಲಿ ಬಿಎಸ್‌ವೈ ಹಿಡಿತವಿದೆ. ಇದು ಕಳೆದ ವಿಧಾನಸಭೆ, ಜಿಪಂ ಚುನಾವಣೆಯಲ್ಲಿ ಸಾಬೀತಾಗಿದೆ. ಈ ಬಾರಿಯ ಕದನ ಕುತೂಹಲಕಾರಿಯಾಗುವುದರಲ್ಲಿ ಅನುಮಾನವಿಲ್ಲ. ಇಲ್ಲಿ ಲಿಂಗಾಯಿತರೇ ಹೆಚ್ಚಿದ್ದಾರೆ.

ಸೊರಬ: ಯಾರಿಗೆ 'ಬಂಗಾರ'?
ಸೊರಬ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಹರತಾಳು ಹಾಲಪ್ಪ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೆಜೆಪಿ ಬಾಗಿಲು ತಟ್ಟಿದ್ದಾರೆ. ಹೀಗಾಗಿ ಕೆಜೆಪಿಯಿಂದ ಹಾಲಪ್ಪ ಅವರೇ ಅಭ್ಯರ್ಥಿ. ಬಿಜೆಪಿಯಿಂದ ಹುಲ್ತಿಕೊಪ್ಪ ಶ್ರೀಧರ ಅಥವಾ ನಾಗರಾಜಗೌಡ ಕಣಕ್ಕಿಳಿಯುವ ಸಾಧ್ಯತೆ ಇದೆ. ಜೆಡಿಎಸ್‌ನಿಂದ ಮಧು ಬಂಗಾರಪ್ಪ, ಕಾಂಗ್ರೆಸ್‌ನಿಂದ ಕುಮಾರ ಬಂಗಾರಪ್ಪ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಬಂಗಾರಪ್ಪ ಅವರ ನಿಧನದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು ಅಣ್ಣ-ತಮ್ಮರ ಕಾದಾಟಕ್ಕೆ ವೇದಿಕೆಯಾಗಲಿದೆ. ಇವೆಲ್ಲದರ ಮಧ್ಯೆ ಕಾಗೋಡು ತಿಮ್ಮಪ್ಪ ಸಹೋದರರನ್ನು ಒಂದುಗೂಡಿಸಲು ಯತ್ನಿಸುತ್ತಿದ್ದಾರೆ. ಇದು ಫಲಿಸಿದರೆ ಮಧು ವಿಧಾನಸಭೆಗೆ, ಕುಮಾರ ಲೋಕಸಭೆಗೆ ಸ್ಪರ್ಧಿಸುವ ಸೂತ್ರ ಹೆಣೆಯಲಾಗಿದೆ. ಇದೆಲ್ಲದಕ್ಕೂ ಕಾಲವೇ ಉತ್ತರಿಸಬೇಕು.

ಈ ಬಾರಿ ಯಾರು 'ಭದ್ರಾ'ವತಿ?
ಉಕ್ಕು ಮತ್ತು ಕಾಗದ ನಗರಿ ಎಂದೇ ಪ್ರಸಿದ್ಧಿಯಾದ ಭದ್ರಾವತಿ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ಬಿ.ಕೆ. ಸಂಗಮೇಶ್ವರ್. ಈ ಬಾರಿಯೂ ಬಹುತೇಕ ಇವರೇ ಹುರಿಯಾಳು. ಆದರೆ, ಸಿ.ಎಂ. ಇಬ್ರಾಹಿಂ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ದರಿಂದ ಸ್ವಲ್ಪ ಗೊಂದಲ ಉಂಟಾಗಿದೆ. ಜೆಡಿಎಸ್‌ನಿಂದ ಕಳೆದ ಬಾರಿ ಸೋತಿದ್ದ ಎಂ.ಜೆ. ಅಪ್ಪಾಜಿಗೌಡ ಅವರೇ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಕಳೆದ 18 ವರ್ಷಗಳಿಂದ ಇವರಿಬ್ಬರ ಮಧ್ಯೆ (ಅಪ್ಪಾಜಿಗೌಡ, ಸಂಗಮೇಶ) ಕಾದಾಟ ನಡೆದಿದ್ದು ಈ ಬಾರಿಯೂ ಮುಂದುವರಿಯುವ ಸಾಧ್ಯತೆ ಇದೆ. ಬಿಜೆಪಿಯಿಂದ ಇನ್ನೂ ಅಭ್ಯರ್ಥಿ ನಿಕ್ಕಿಯಾಗಿಲ್ಲ. ಕಳೆದ ಬಾರಿ ಆಯನೂರು ಮಂಜುನಾಥ ಸ್ಪರ್ಧಿಸಿ 1500 ಮತ ಗಳಿಸಿದ್ದಷ್ಟೇ ಸಾಧನೆ. ಕೆಜೆಪಿಯಿಂದ ಕೂಡ್ಲಿಗೆರೆ ಹಾಲೇಶ್ ಹೆಸರು ಕೇಳಿ ಬರುತ್ತಿದೆ. ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿದೆ.

ಶಿವ'ಮೊಗ್ಗು' ಅರಳುವ ಸಮಯ
ಈ ಬಾರಿ ರಾಜ್ಯ ರಾಜಕೀಯದ ಕೇಂದ್ರ ಬಿಂದು ಶಿವಮೊಗ್ಗ ನಗರ ಕ್ಷೇತ್ರ. ಹಾಲಿ ಶಾಸಕ ಬಿಜೆಪಿಯ ಕೆ.ಎಸ್. ಈಶ್ವರಪ್ಪ. ಈ ಬಾರಿಯೂ ಅವರೇ ಬಿಜೆಪಿ ಅಭ್ಯರ್ಥಿ. ಇವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಮಾಜಿ ಸಿಎಂ ಬಿಎಸ್‌ವೈ ಕೆಜೆಪಿಯಿಂದ ಉದ್ಯಮಿ ರುದ್ರೇಗೌಡ ಅಥವಾ ಎಪಿಎಂಸಿ ಅಧ್ಯಕ್ಷ ಜ್ಯೋತಿಪ್ರಕಾಶ ಅವರನ್ನು ಕಣಕ್ಕಿಳಿಸಲಿದ್ದಾರೆ. ಕಾಂಗ್ರೆಸ್‌ನಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೆಸರು ಕೇಳಿ ಬರುತ್ತಿದೆ. ಜೆಡಿಎಸ್‌ನಿಂದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸ್ಪರ್ಧೆ ಖಚಿತ. ಬಿಎಸ್‌ಆರ್ ಕಾಂಗ್ರೆಸ್ ಸದ್ಯಕ್ಕೆ ಲೆಕ್ಕಕ್ಕಿಲ್ಲ. ನಗರಸಭೆ ಬಿಜೆಪಿ ವಶದಲ್ಲಿರುವುದರಿಂದ ಈಶ್ವರಪ್ಪ ಅದರ ಪ್ರಭಾವ ಬಳಸಿ ಗೆಲ್ಲಲು ಹವಣಿಸುತ್ತಿದ್ದಾರೆ. ಆದರೆ, ಇದೆಲ್ಲವನ್ನೂ ಬುಡಮೇಲು ಮಾಡಲು ಬಿಎಸ್‌ವೈ ತಂತ್ರ ಹೆಣೆಯುತ್ತಿದ್ದಾರೆ. ಇಲ್ಲಿ ಬಿಎಸ್‌ವೈ ವರ್ಸಸ್ ಈಶ್ವರಪ್ಪ ಎಂಬುದರಲ್ಲಿ ಅನುಮಾನವಿಲ್ಲ.

'ಗೆಲವಿನ ತೀರ್ಥ'ಹಳ್ಳಿ ಯಾರಿಗೆ?
ಸ್ವಾತಂತ್ರ್ಯಾ ನಂತರ ಶಾಂತವೇರಿ ಗೋಪಾಲಗೌಡರು ಕೇವಲ 16 ಸಾವಿರ ಖರ್ಚು ಮಾಡಿ ಗೆದ್ದಿದ್ದ ತೀರ್ಥಹಳ್ಳಿ ಕ್ಷೇತ್ರದ ರಾಜಕೀಯ ಚಿತ್ರಣ ಈಗ ಬದಲಾಗಿದೆ! ಹಾಲಿ ಶಾಸಕ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ. ಬಿಜೆಪಿ ಭದ್ರಕೋಟೆಯನ್ನು ಭೇದಿಸಿದ ಕಿಮ್ಮನೆ ಈ ಬಾರಿಯೂ ಕಣಕ್ಕಿಳಿಯುವುದು ಖಚಿತ. ಇದಕ್ಕೆ ತಯಾರಿ ಕೂಡ ನಡೆಸಿದ್ದಾರೆ. ಬಿಜೆಪಿಯಿಂದ ಮೂರು ಗೆಲವು ಸಾಧಿಸಿ ಕಳೆದ ಬಾರಿ ಸೋತಿದ್ದ ಅರಗ ಜ್ಞಾನೇಂದ್ರ ಸ್ಪರ್ಧಿಸಲಿದ್ದಾರೆ. ಕೆಜೆಪಿಯಿಂದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಜೆಡಿಎಸ್‌ನಿಂದ ಆರ್. ಮದನ್ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಬಿಎಸ್‌ಆರ್ ಕಾಂಗ್ರೆಸ್ ಸದ್ಯಕ್ಕೆ ಲೆಕ್ಕಕ್ಕಿಲ್ಲ. ಚತುಷ್ಕೋನ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದೇ ಕುತೂಹಲಕಾರಿಯಾಗಿದೆ. ಬಿಎಸ್‌ವೈ ಸಂಘಟನಾ ಶಕ್ತಿ ಹಾಗೂ ತಂತ್ರಗಾರಿಕೆ ಕೆಲಸ ಮಾಡಿದರೆ ಫಲಿತಾಂಶ ಏರುಪೇರಾಗುವುದು ಗ್ಯಾರಂಟಿ.

'ಸಾಗರ'ದಲ್ಲಿ ಈಜುವವರಾರು?
ಸಮಾಜವಾದಿ ಚಳವಳಿಯ ಬೇರು ಹೊಂದಿರುವ ಸಾಗರ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಬೇಳೂರು ಗೋಪಾಲಕೃಷ್ಣ. ಈ ಬಾರಿಯೂ ಅವರೇ ಹುರಿಯಾಳು. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಭರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸೋತಿದ್ದ ಕಾಗೋಡು ತಿಮ್ಮಪ್ಪ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಕೆಜೆಪಿಯಿಂದ ಬಿ.ಆರ್. ಜಯಂತ ಸ್ಪರ್ಧಿಸುವ ಸಾಧ್ಯತೆ ಇದ್ದರೂ ಟಿ.ಡಿ. ಮೇಘರಾಜ್ ಹೆಸರು ಕೂಡ ಕೇಳಿ ಬರುತ್ತಿದೆ. ಜೆಡಿಎಸ್‌ನಿಂದ ಅರುಣ್ ಪ್ರಸಾದ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಅರಣ್ಯ ಭೂಮಿ ಬಗರ್‌ಹುಕುಂ ತೆರವು ಕಾರ್ಯಾಚರಣೆಯನ್ನೇ ಕಾಂಗ್ರೆಸ್ ಅಸ್ತ್ರವಾಗಿಸಿಕೊಂಡಿದ್ದರೆ, ಬಿಜೆಪಿ 'ಸಾಧನೆ'ಯ ಪಟ್ಟಿ ಹಿಡಿದು ಮತ ಕೇಳಲು ಸಜ್ಜಾಗಿದೆ. ಬಿಎಸ್‌ವೈ ವರ್ಚಸ್ಸಿನ ಮೇಲೆಯೇ ಕೆಜೆಪಿ ಪ್ರಚಾರ ಕಾರ್ಯ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.