ರಾಜಕೀಯ

ಚಿಕ್ಕಮಗಳೂರ್ಯಾರು?

ಚಿಕ್ಕಮಗಳೂರು ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಈ ಬಾರಿಯ ಸ್ಥಿತಿ ಹೇಗಿದೆ ಎಂಬುದು ಇಲ್ಲಿದೆ.

Published On :

ಹೆಂಗಿದೆ ನೋಡ್ರಿ ಶೃಂಗೇರಿ
ಶೃಂಗೇರಿ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಡಿ.ಎನ್. ಜೀವರಾಜ್. ಈ ಬಾರಿಯೂ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತ. ಕಾಂಗ್ರೆಸ್‌ನಿಂದ ಬಿ.ಎಲ್. ಶಂಕರ್, ಡಿ.ಕೆ. ತಾರಾದೇವಿ, ಗೀತಾ, ರಾಜೇಗೌಡ, ವೆಂಕಟೇಶ್, ಸಚ್ಚಿನ್ ಮೀಗಾ, ನಟರಾಜ್ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್‌ನಿಂದ ಎಚ್.ಟಿ. ರಾಜೇಂದ್ರ ಸ್ಪರ್ಧಿಸುವ ಸಾಧ್ಯತೆ ಇದೆ. ಕೆಜೆಪಿ, ಬಿಎಸ್‌ಆರ್‌ಗೆ ಈ ಕ್ಷೇತ್ರದಲ್ಲಿ ನೆಲೆ ಇಲ್ಲ. ಮೂರು ತಾಲೂಕುಗಳು ಒಳಗೊಂಡ ಕ್ಷೇತ್ರದಲ್ಲಿ ಜ್ವಲಂತ ಸಮಸ್ಯೆಗಳಿಗೇನು ಕೊರತೆ ಇಲ್ಲ. ಚುನಾವಣೆಯಲ್ಲಿ ಈ ಸಮಸ್ಯೆಗಳು ಪರಿಹರಿಸುವ ಭರವಸೆಯನ್ನು ಕೇಳುವ ಸ್ಥಿತಿಯಲ್ಲಿ ರೈತರಿಲ್ಲ. ಜೀವರಾಜ್ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಹಣ ತಂದಿದ್ದು ಪ್ಲಸ್ ಪಾಯಿಂಟ್.

ತರೀಕೆರೆ: ನೀರು ಕುಡಿಯುವರ್ಯಾರು?
ತರೀಕೆರೆ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಡಿ.ಎಸ್. ಸುರೇಶ್. ಈಗಾಗಲೇ ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದು ಈ ಬಾರಿಯ ಕಣದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಕಾಂಗ್ರೆಸ್‌ನಿಂದ ಧೃವಕುಮಾರ್, ನೀಲಕಂಠಪ್ಪ, ಎಸ್.ಎಂ. ನಾಗರಾಜ್, ಟಿ.ಎಚ್. ಶಿವಶಂಕರಪ್ಪ, ಟಿ.ವಿ. ಶಿವಶಂಕರಪ್ಪ, ಜಿ.ಎಚ್. ಶ್ರೀನಿವಾಸ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿವೆ. ಶಾಸಕ ಸುರೇಶ್ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಹಣ ತಂದಿದ್ದಾರೆ. ಬಿಎಸ್‌ವೈ ಅಶೀರ್ವಾದವು ಇರುವುದರಿಂದ ಸುರೇಶ್ ಅವರು ಸದ್ಯ ಮುಂಚೂಣಿಯಲ್ಲಿದ್ದಾರೆ.

ರವಿ ಊದುವರೆ ಜಯದ 'ಸೀಟಿ'?
ಚಿಕ್ಕಮಗಳೂರು ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಸಿ.ಟಿ. ರವಿ. ಈ ಬಾರಿಯೂ ಅವರೇ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಸ್ಪರ್ಧಿಲು ಸಿ.ಆರ್. ಸಗೀರ್ ಅಹಮದ್, ಎಂ.ಎಲ್. ಮೂರ್ತಿ, ಶಾಂತೇಗೌಡ, ಡಾ. ಕುಮಾರಸ್ವಾಮಿ, ಡಾ. ವಿಜಯಕುಮಾರ್, ಸಂದೀಪ್ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಎಸ್.ಎಲ್. ಧರ್ಮೇಗೌಡ ಸ್ಪರ್ಧೆ ಬಹುತೇಕ ಖಚಿತ. ಕೆಜೆಪಿ ಅಭ್ಯರ್ಥಿ ಇನ್ನೂ ನಿಕ್ಕಿಯಾಗಿಲ್ಲ. ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಹಣ ತಂದಿರುವುದು ಸಿ.ಟಿ. ರವಿ ಅವರಿಗೆ ಪ್ಲಸ್ ಪಾಯಿಂಟ್. ಆದರೆ, ಬಿಎಸ್‌ವೈ ಎದುರಾಳಿಗಳಲ್ಲಿ ಇವರೂ ಒಬ್ಬರಾಗಿರುವುದರಿಂದ ಕೆಜೆಪಿ ತಂತ್ರಗಾರಿಕೆ ಕೆಲಸ ಮಾಡಿದರೆ ಗೆಲವು ಕಷ್ಟವಾಗುವ ಸಾಧ್ಯತೆ ಇದೆ.

ಕಡೂರು: ಗೆಲ್ಲುವ ಕುದುರೆ ಯಾರದು?
ಕಡೂರು ಕ್ಷೇತ್ರ ಒಂದೇ ಅವಧಿಯಲ್ಲಿ ಎರಡು ಚುನಾವಣೆ ಕಂಡಿದೆ. ಕೆ.ಎಂ. ಕೃಷ್ಣಮೂರ್ತಿ ನಿಧನದ ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಡಾ. ವೈ.ಸಿ. ವಿಶ್ವನಾಥ್ ಜಯಗಳಿಸಿದ್ದಾರೆ. ಈ ಬಾರಿಯೂ ಹಾಲಿ ಶಾಸಕ ಡಾ.ವೈ.ಸಿ. ವಿಶ್ವನಾಥ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತ. ಆದರೂ ಟಿಕೆಟ್‌ಗಾಗಿ ಕೆಲವರು ಪೈಪೋಟಿ ನಡೆಸಿದ್ದಾರೆ. ಜೆಡಿಎಸ್‌ನಿಂದ ಕಳೆದ ಬಾರಿ ಸೋತಿದ್ದ ವೈಎಸ್‌ವಿ ದತ್ತ ಈ ಬಾರಿಯೂ ಕಣಕ್ಕಿಳಿಯುವುದು ಖಚಿತ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಕೆ.ಬಿ. ಮಲ್ಲಿಕಾರ್ಜುನ, ಕೆ.ಎಂ. ಕೆಂಪರಾಜ್, ವಿನಾಯಕ, ಚಂದ್ರಪ್ಪ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದಾರೆ. ಕೆಜೆಪಿ ಕೂಡ ಪ್ರಬಲ ವ್ಯಕ್ತಿಯ ಹುಡುಕಾಟದಲ್ಲಿದೆ. ಅತೃಪ್ತರಿಗೆ ಗಾಳ ಹಾಕಲು ತಂತ್ರ ಹೆಣೆಯುತ್ತಿದೆ.

ಮೂಡಿ'ಗೆರೆ' ಯಾರಿಗೆ ಗೆಲವಿನ ಕರೆ?
ಮೂಡಿಗೆರೆ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ. ಈ ಬಾರಿಯೂ ಸ್ಪರ್ಧಿಸಲು ಅಣಿಯಾಗಿದ್ದಾರೆ. ಆದರೆ, ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದ್ದು ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡದಂತೆ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೂ ಕುಮಾರಸ್ವಾಮಿ ವೈಯಕ್ತಿಕ ವರ್ಚಸ್ಸು ಹೊಂದಿರುವುದರಿಂದ ಹೈಕಮಾಂಡ್ ಇವರಿಗೆ ಮಣೆ ಹಾಕಿದರೆ ಅಚ್ಚರಿ ಪಡಬೇಕಿಲ್ಲ. ಕಾಂಗ್ರೆಸ್‌ನಿಂದ ಬಿ.ಎನ್. ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಬಿ.ಬಿ. ನಿಂಗಯ್ಯ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಪ್ರಬಲ ಸ್ಪರ್ಧೆ ನೀಡುವಷ್ಟು ಸಮರ್ಥವಾಗಿಲ್ಲ. ಕೆಜೆಪಿಗೆ ನೆಲೆಯಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.