ರಾಜಕೀಯ

ಬಿಜೆಪಿ 'ಬಿ' ಫಾರಂ ಸಿದ್ಧ

Published On :

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಚುನಾವಣಾ ಸಿದ್ಧತೆ ಕುರಿತು ಶನಿವಾರ ಸಭೆ ನಡೆಸಿದ ಆಡಳಿತಾರೂಢ ಬಿಜೆಪಿ, ಇದೀಗ ಪಕ್ಷದ ಬಿ ಫಾರಂಗಳನ್ನು ಎಲ್ಲಾ ಜಿಲ್ಲೆಗಳಿಗೆ ಕಳುಹಿಸಿಕೊಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆಯಂತೆ ಕಾರ್ಯದರ್ಶಿಗಳ ಸಹಿಯುಳ್ಳ ಬಿ ಫಾರಂಗಳನ್ನು ಎಲ್ಲಾ ಜಿಲ್ಲೆಗಳಿಗೆ ಕಳುಹಿಸಿಕೊಡುವ ಪ್ರಕ್ರಿಯೆ ಭಾನುವಾರ ಅಂತ್ಯಗೊಂಡಿದೆ. ಈ ಬಿ ಫಾರಂಗಳಲ್ಲಿ ಅಭ್ಯರ್ಥಿಗಳ ಹೆಸರಿನ ಜಾಗವನ್ನು ಖಾಲಿ ಬಿಡಲಾಗಿದೆ. ಈ ಬಿ ಫಾರಂಗಳನ್ನು ಪಕ್ಷದ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಕಳುಹಿಸಿಕೊಡಲಾಗಿದ್ದು, ಆಯಾ ಭಾಗದಲ್ಲೇ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಿ, ಆ ಹೆಸರನ್ನು ಬಿ ಫಾರಂಗಳಲ್ಲಿ ಬರೆಯುವ ಅಧಿಕಾರವನ್ನು ಸ್ಥಳೀಯ ಘಟಕಗಳಿಗೆ ನೀಡಲಾಗಿದೆ.
ಎ ಫಾರಂ ನೀಡಿದ ರಾಜ್ಯಾಧ್ಯಕ್ಷರು: ಚುನಾವಣೆಗಳಲ್ಲಿ ಬಿ ಫಾರಂ ನೀಡುವ ಕಾರ್ಯವನ್ನು ಎ ಫಾರಂ ಹೊಂದಿದವರು ಮಾಡುತ್ತಾರೆ. ಅಂದರೆ, ವಿದಾನಸಭೆ ಚುನಾವಣೆಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಾಧ್ಯಕ್ಷರಿಗೆ ಎ ಫಾರಂ ನೀಡುತ್ತಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ರಾಜ್ಯಾಧ್ಯಕ್ಷರು ಪಕ್ಷದ ಕಾರ್ಯದರ್ಶಿಗಳಿಗೆ ಎ ಫಾರಂ ನೀಡುತ್ತಾರೆ. ನಂತರ ಯಾರಿಗೆ ಎ ಫಾರಂ ನೀಡಿದ್ದಾರೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಈ ಎ ಫಾರಂ ಹೊಂದಿದವರು ನೀಡಿದ ಬಿ ಫಾರಂ ಮಾತ್ರ ಅಧಿಕೃತವಾಗುತ್ತದೆ. ಅದರಂತೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಎಲ್ಲಾ ರಾಜ್ಯ ಕಾರ್ಯದರ್ಶಿಗಳಿಗೆ ಎ ಫಾರಂ ನೀಡಿದ್ದಾರೆ. ಅದರಂತೆ ಶನಿವಾರ ಸಂಜೆಯಿಂದಲೇ ಕಾರ್ಯದರ್ಶಿಗಳು ಬಿ ಫಾರಂಗಳಿಗೆ ಸಹಿ ಮಾಡಿದ್ದು, ಭಾನುವಾರ ಸಂಜೆಯ ವೇಳೆಗೆ ಸಹಿ ಹಾಕುವ ಕೆಲಸ ಮುಗಿಸಿ ಬಿ ಫಾರಂಗಳನ್ನು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.