ಬಿಜಾಪುರ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿಗೆ ಬರುವಂತೆ ವೈಯಕ್ತಿಕವಾಗಿ ಆಹ್ವಾನ ನೀಡಲಾಗಿದೆ ಎಂದು ಎಪಿಎಂಸಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿಗೆ ಬರಲು ಕೇಳಿಕೊಂಡಿದ್ದೇನೆ. ಅದು ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಅಲ್ಲ. ವೈಯಕ್ತಿಕವಾಗಿ ಈ ಆಹ್ವಾನ ನೀಡಲಾಗಿದೆ. ತಾನು ಬಿಜೆಪಿ ಶಾಸಕ ಹಾಗೂ ಸಚಿವನಾಗಿರುವುದರಿಂದ ಪಕ್ಷ ಬಲಪಡಿಸಲು ಆಹ್ವಾನ ನೀಡುವುದರಲ್ಲಿ ತಪ್ಪೇನಿಲ್ಲ. ಒಂದೊಮ್ಮೆ ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಬರದಿದ್ದರೆ ಬಿಎಸ್ಆರ್ ಕಾಂಗ್ರೆಸ್- ಬಿಜೆಪಿ ಚುನಾವಣೆ ಮೈತ್ರಿ ಕುರಿತು ಚರ್ಚಿಸಲಾಗಿದೆ. ನಾಲ್ಕೈದು ದಿನಗಳಲ್ಲಿ ತಿಳಿಸುವುದಾಗಿ ರೆಡ್ಡಿ ಹೇಳಿದ್ದಾರೆ ಎಂದು ತಿಳಿಸಿದರು.