

ಬೆಂಗಳೂರು: ಬಿಬಿಎಂಪಿ ಚುನಾವಣಾ ಸಮರಕ್ಕೆ `ಪಂಚಭಾಷೆ'ಗಳಲ್ಲಿ ಪ್ರಣಾಳಿಕೆಯನ್ನು ಪ್ರಕಟಿಸಿರುವ ಕಾಂಗ್ರೆಸ್, ವರ್ತುಲ ರೈಲ್ವೆ ಯೋಜನೆಗಳು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 100 ಶೌಚಾಲಯ ನಿರ್ಮಾಣ, ನಗರದ ನಾಲ್ಕು ಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು ನಗರಕ್ಕೆ ಮೇಕೆದಾಟು ಯೋಜನೆ ಮೂಲಕ ನೀರು ಪೂರೈಕೆ ಮಾಡುವುದು ಸೇರಿದಂತೆ ಮಹತ್ವದ ವಿಚಾರಗಳನ್ನು ಘೋಷಿಸಿದೆ.
ಖಾಸಗಿ ಹೋಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಗೃಹ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ವಾರ್ತಾ ಸಚಿವ ರೋಷನ್ ಬೇಗ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಬಹುಮುಖಿ ಸಂಸ್ಕೃತಿಯ ಬೆಂಗಳೂರಿನಲ್ಲಿ ಮಹತ್ವದ ಬದಲಾವಣೆ ತರುವ ವಿಚಾರಗಳನ್ನು ಈ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಬೇರೆ ಬೇರೆ ಭಾಷಿಕರು ಇಲ್ಲಿ ನೆಲೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ, ತಮಿಳು, ತೆಲುಗು, ಉರ್ದು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಣಾಳಿಕೆಯನ್ನು ರಚಿಸಲಾಗಿದೆ. ಕೊಳಚೆ ನಿರ್ಮೂಲನೆ, ಆರೋಗ್ಯ, ಆಡಳಿತ ಸುಧಾರಣೆ ಸೇರಿದಂತೆ ಹಲವಾರು ಅಂಶಗಳನ್ನು ಅಳವಡಿಸಿದ್ದೇವೆ. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದರು.
ಪಂಚಭಾಷೆಗಳಿಗೆ ವಿರೋಧ: ಪ್ರಣಾಳಿಕೆಯನ್ನು ಪಂಚ ಭಾಷೆಯಲ್ಲಿ ಬಿಡುಗಡೆ ಮಾಡಿರುವ ಬಗ್ಗೆ ಕಾಂಗ್ರೆಸ್‍ನಲ್ಲಿತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಇತಿಹಾಸದಲ್ಲಿ ಇದುವರೆಗೆ ಯಾರೂ ಇಂಥ ಪ್ರಯೋಗ ಮಾಡಿರಲಿಲ್ಲ. ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಮಾತ್ರ ಪ್ರಣಾಳಿಕೆ ರಚಿಸಲಾಗುತ್ತಿತ್ತು. ಬಹುಮುಖಿ ಸಂಸ್ಕೃತಿಯ ಹೆಸರಿನಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿರುವುದು ಬೇರೆ ಬೇರೆ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಸಮಾರಂಭದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೀದಿ ನಾಯಿ ನಿರ್ವಹಣೆ ಪ್ರಸ್ತಾಪವಿಲ್ಲ: ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಬೀದಿ ನಾಯಿ ಹಾವಳಿ ನಿಯಂತ್ರಣದ ಬಗ್ಗೆ ಉಲ್ಲೇಖವಿಲ್ಲ. ಬೆಂಗಳೂರು ನಗರ ಉಸ್ತುವಾರಿ ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಪ್ರಶ್ನಿಸಿದಾಗ ನಗೆಯೇ ಉತ್ತರವಾಯಿತು. ಪ್ರಣಾಳಿಕೆಯಲ್ಲಿ ಅದು ಇರಬೇಕು ನೋಡಿ ಎಂದು ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಪ್ರಣಾಳಿಕೆ ಬರೆದವರತ್ತ ನೋಡಿದರು. ಆದರೆ ನಗರದ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಬೀದಿ ನಾಯಿ ಹಾವಳಿ ನಿಯಂತ್ರಣದ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪವೇ ಇಲ್ಲ.
ಮೀಸಲು ಕೊಟ್ಟ ಮಾತ್ರಕ್ಕೆ ಜೊತೇಲಿ ಕರ್ಕೊಂಡುಓಡಾಡೋಕೆ ಆಯ್ತದಾ?: ಮೀಸಲು ಕೊಟ್ಟಿದ್ದೇವೆ ಎಂದ ಮಾತ್ರಕ್ಕೆ ಜತೇಲಿ ಕರ್ಕೊಂಡು ಓಡಾಡೋಕೆ ಆಯ್ತದಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳಾ ಮೀಸಲು ಸಂಬಂಧ ಸುದ್ದಿಗಾರರಿಗೆ ಪ್ರಶ್ನಿಸಿದರು. ಮಹಿಳಾ ಮೀಸಲು ಜಾರಿಗೆ ತಂದಿದ್ದೇ ನಾವು. ಈ ಬಾರಿ 90 ಮಂದಿಗೆ ಮೀಸಲು ನೀಡಿದ್ದೇವೆ. ಹಾಗಂತ ಈ ಸಮಾರಂಭಕ್ಕೆ ಬಂದಿಲ್ಲ ಎಂದು ನೀವು ಪ್ರಶ್ನಿಸಿದರೆ ಹೇಗೆ? ಅವರನ್ನು ಜತೆಯಲ್ಲೇ ಕರ್ಕೊಂಡು ಓಡಾಡಕ್ಕೆ ಆಯ್ತದಾ? ಎಂದು ಚಟಾಕಿ ಹಾರಿಸಿದರು.
ಪ್ರಣಾಳಿಕೆಯಲ್ಲಿ ಏನಿದೆ?
ಸಾರಿಗೆರಸ್ತೆ ನಿರ್ಮಾಣ
-ನಗರವನ್ನು ಸಂಪರ್ಕಿಸುವ ಪೂರ್ವಪಶ್ಚಿಮ, ಉತ್ತರದಕ್ಷಿಣ ಎಲಿವೆಟೆಡ್ ಫ್ಲೈಓವರ್ ನಿರ್ಮಾಣ.
-ರಸ್ತೆ ಅಗಲೀಕರಣ ಮತ್ತು ವೈಜ್ಞಾನಿಕ ನಿರ್ವಹಣೆ.
-ವರ್ತುಲ ಮೇಲು ಸೇತುವೆಗಳು ಮತ್ತು ಮೋನೋ ರೈಲು.
-40 ಮೇಲು ರಸ್ತೆಗಳ ನಿರ್ಮಾಣ.
-ಮೆಟ್ರೋ 2ನೇ ಹಂತ ಪೂರ್ಣಗೊಳಿಸುವುದು. ಬಹು ಸಂಕೀರ್ಣ ವಾಹನ ನಿಲುಗಡೆ. ವಸತಿ
-ಐದು ವರ್ಷಗಳಲ್ಲಿ ಬೆಂಗಳೂರು ಕೊಳಚೆ ಪ್ರದೇಶ ರಹಿತ ನಗರ.
-ಕೊಳಚೆ ಪ್ರದೇಶಗಳಲ್ಲಿ ಬಹುಮಹಡಿ ವಸತಿ ಸಮುಚ್ಚಯ.
-ಕೊಳಚೆ ಪ್ರದೇಶದ ನಿವಾಸಿಗಳಿಗೆ ವಸತಿ ಪ್ರಮಾಣ ಪತ್ರ.
-ಐದು ವರ್ಷದಲ್ಲಿ ಬಡವರಿಗಾಗಿ 1 ಲಕ್ಷ ಮನೆ ನಿರ್ಮಾಣ. ಶುಚಿತ್ವಕಸದ ನಿರ್ವಹಣೆ
-ವಾರ್ಡ್ ಮಟ್ಟದಲ್ಲಿ ಗುತ್ತಿಗೆದಾರರಿಂದಲೇ ಕಸದ ವಿಂಗಡಣೆ.
-ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 100ರಂತೆ 5000 ಶೌಚಾಲಯಗಳ ನಿರ್ಮಾಣ.
-ವೇಸ್ಟ್ ಟು ಎನರ್ಜಿ ಘಟಕಗಳ ಸ್ಥಾಪನೆ. ನೀರಿನ ಸದ್ಬಳಕೆ:
-ಕನ್ನಡಿಗರ ಹಕ್ಕಾಗಿರುವ ಮೇಕೆದಾಟು ಯೋಜನೆ ಪೂರೈಸಿ ಅದರ ಮೂಲಕವೇ ನಗರಕ್ಕೆ ಹೆಚ್ಚು ನೀರು ಪೂರೈಕೆ.
-ಸಾರ್ವಜನಿಕ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು.
-ಈಗ ನಗರದಲ್ಲಿರುವ 16 ತ್ಯಾಜ್ಯ ಶುದಿಟಛೀಕರಣ ಘಟಕವನ್ನು 40ಕ್ಕೆ ಏರಿಸುವುದು.
-ಮಳೆ ನೀರಿನ ಚರಂಡಿಗಳನ್ನು ವೃಷಭಾವತಿ, ಕೋರಮಂಗಲ, ಚಳ್ಳಘಟ್ಟ ಮತ್ತು ಹೆಬ್ಬಾಳ ಕಣಿವೆಗೆ ಹರಿಸುವುದು.ಉದ್ಯಾನವನ ಕ್ರೀಡಾಂಗಣ
-ದೊಡ್ಡ ಮೋರಿಗಳ ಎರಡು ಬದಿಯಲ್ಲಿ ಮರ ನೆಡುವುದು.
-ಸ್ವಾತಂತ್ರ್ಯ ಉದ್ಯಾನದಲ್ಲಿ ಫ್ರೀಡಂ ಮ್ಯೂಸಿಯಂ ಮತ್ತು ಎತ್ತರದ ವೀಕ್ಷಣಾ ಗೋಪುರ ನಿರ್ಮಾಣ ಮಾಡುವುದು.
-ನಗರದ ನಾಲ್ಕು ಕಡೆ ದೊಡ್ಡ ಉದ್ಯಾನವನ, ಕ್ರೀಡಾ ಸಮುಚ್ಚಯ ನಿರ್ಮಾಣ.
-ನಾಲ್ಕು ಕ್ರೀಡಾ ಹಾಸ್ಟೇಲ್ ನಿರ್ಮಾಣ.
-ಪಾರಂಪರಿಕ ಸ್ಥಳಗಳನ್ನು ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವುದು.
-ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಬೆಂಗಳೂರಿನ ಐದು ವಲಯಗಳಾದ ಯಲಹಂಕ, ಕೆ.ಆರ್.ಪುರ, ಪೀಣ್ಯ, ಕನಕಪುರ ರಸ್ತೆ ಮತ್ತು ಕೆಂಗೇರಿಯಲ್ಲಿ ಸುಸಜ್ಜಿತ ಕಲಾಭವನ ನಿರ್ಮಾಣ.
-ಕೇಂದ್ರದ ನಗರ ಕಲಾ ಆಯೋಗದ ಸಲಹೆ ಪ್ರಕಾರ ಮಾಗಡಿ ಕೆಂಪೇಗೌಡರ ಕೋಟೆ, ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಗವಿಗಂಗಾಧರೇಶ್ವರ
ಮತ್ತು ಇನ್ನಿತರ ಚಾರಿತ್ರಿಕ ದೇವಾಲಯಗಳು, ಚಾರಿತ್ರಿಕ ಚರ್ಚ್, ಮಸೀದಿ ಅಭಿವೃದ್ಧಿ. ಶಿಕ್ಷಣ
-ಪಾಲಿಕೆ ಶಾಲೆಗಳ ಉನ್ನತೀಕರಣ ಮತ್ತು ಆಧುನಿಕ ಸೌಲಭ್ಯಗಳ ಪೂರೈಕೆ. ಆರೋಗ್ಯ
-ನಗರದ ನಾಲ್ಕು ಕಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.
-ಪ್ರತಿ ವಿಧಾನಸಭಾ ಕ್ಷೇತ್ರಗಳ ಡಯಾಲಿಸಿಸ್ ಕೇಂದ್ರ ಸ್ಥಾಪನೆ.
-ಅಪಘಾತ ನಿರ್ವಹಣೆಗೆ ವಿಶೇಷ ಘಟಕ
-ಹಿರಿಯ ನಾಗರಿಕರಿಗೆ ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ಆಡಳಿತ ಸುಧಾರಣೆ
-ಸಾರ್ವಜನಿಕ ದೂರುಗಳಿಗೆ ಏಕಗವಾಕ್ಷಿ ಯೋಜನೆ.
-ಮನೆ ತೆರಿಗೆ ದಂಡ ವಾರ್ಷಿಕ ಶೇ.24ರಿಂದ ಶೇ.5ಕ್ಕೆ ಇಳಿಕೆ.
-ಎಲ್ಲ ಖಾತಾದಾರರು ತೆರಿಗೆ ವ್ಯಾಪ್ತಿಗೆ.
-ಮಾಹಿತಿ ಕೇಂದ್ರಗಳ ಸ್ಥಾಪನೆ.
-ನಗರ ಆಡಳಿತ ನಿರ್ವಹಣೆಗೆ ಸಲಹೆ ನೀಡಲು ರಾಜಕೀಯೇತರ ತಜ್ಞರ ಸಮಿತಿ.
-ವಾರ್ಡ್ ಸಮಿತಿಗಳಿಗೆ ಹೆಚ್ಚಿನ ಜವಾಬ್ದಾರಿ.
-ಬೆಂಗಳೂರು ಒನ್ ಕೇಂದ್ರಗಳ ವಿಸ್ತರಣೆ. ಹಿರಿಯ ನಾಗರಿಕರುಮಹಿಳೆಯರಿಗೆ
-ಉದ್ಯೋಗಸ್ಥ ಮಹಿಳೆಯರಿಗೆ ಹಾಸ್ಟೆಲ್ ನಿರ್ಮಾಣ.
-ಹಿರಿಯ ನಾಗರಿಕರ ಸಹಾಯವಾಣಿ ಬಲವರ್ಧನೆ.
-ಪೌರ ಕಾರ್ಮಿಕರ ಕಲ್ಯಾಣ ಯೋಜನೆ.
-ಶಿಶು ಸ್ನೇಹಿ ಉದ್ಯಾನ ಮತ್ತು ಆಟದ ಮೈದಾನ ನಿರ್ಮಾಣ.