ಸರ್ಕಾರದಿಂದ ಆಗದಿದ್ದರೆ ಭಿಕ್ಷೆ ಬೇಡಿ ನೆರವಾಗುವೆ: ಎಚ್‍ಡಿಕೆ

ಖಜಾನೆಯಲ್ಲಿ ಹಣವಿಲ್ಲ ಎಂದು ಸಬೂಬು ಹೇಳುತ್ತಿರುವ ರಾಜ್ಯ ಸರ್ಕಾರ ಭಿಕಾರಿಯಾಗಿದೆಯೇ? ಸಾಲ ಮಾಡಿಯಾದರೂ ರೈತರ ಸಾಲ ಮನ್ನಾ ಮಾಡಬೇಕು ...
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ
Updated on: 

ಧಾರವಾಡ: ಖಜಾನೆಯಲ್ಲಿ ಹಣವಿಲ್ಲ ಎಂದು ಸಬೂಬು ಹೇಳುತ್ತಿರುವ ರಾಜ್ಯ ಸರ್ಕಾರ ಭಿಕಾರಿಯಾಗಿದೆಯೇ? ಸಾಲ ಮಾಡಿಯಾದರೂ ರೈತರ ಸಾಲ ಮನ್ನಾ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು. ಆತ್ಮಹತ್ಯೆ ಮಾಡಿಕೊಂಡ ಕಬ್ಬೇನೂರು ರೈತ ಬಸವರಾಜ ಕುದುರೆ ಅವರ ಮನೆಗೆ ಬುಧವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೂ.43 ಸಾವಿರ ಕೋಟಿ ಸಾಲ ಮಾಡಿದೆ. ರೈತರ ಬವಣೆಗೆ ಸ್ಪಂದಿಸುವ ನಿಟ್ಟಿನಲ್ಲಿ ಇನ್ನಷ್ಟು ಸಾಲ ಮಾಡಿದರೆ ತಪ್ಪೇನಿಲ್ಲ. ಅಷ್ಟಕ್ಕೂ ಈ ಸಾಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರಿಸಬೇಕೆಂದಿಲ್ಲ. ರೈತರೇ ತೀರಿಸಲಿದ್ದಾರೆ. ಆದಷ್ಟು ಬೇಗ ಸಾಲ ಮನ್ನಾ ಕುರಿತು ಸರ್ಕಾರ ತೀರ್ಮಾನ ಪ್ರಕಟಿಸಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬರೀ ಪರಿಹಾರ ಅಥವಾ ಸಾಲ ಮನ್ನಾಕ್ಕೆ ಸರ್ಕಾರಕ್ಕೆ ಮುಂದಾದರೆ ಸಾಲದು. ಆ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇದು ಸರ್ಕಾರದಿಂದ ಆಗದಿದ್ದರೆ ನಾನೇ ಭಿಕ್ಷೆ ಬೇಡಿ ಪಕ್ಷದ  ವತಿಯಿಂದ ರೈತರಿಗೆ ಆರ್ಥಿಕ ನೆರವು ನೀಡುವೆ ಎಂದು ನುಡಿದರು.

ಆತ್ಮಹತ್ಯೆ ಮಾಡಿಕೊಂಡ ಕಬ್ಬೇನೂರ ಗ್ರಾಮದ ಬಸವರಾಜ ಕುದುರೆ, ಹಾರೋಬೆಳವಡಿ ಗ್ರಾಮದ ಮಾರುತಿ ಗುದ್ದಮೆಸಿ, ಮುಗದ ಗ್ರಾಮದ ಶಿವನಪ್ಪ ಕಾಳೇಗೌಡರ ಮನೆಗೆ ಭೇಟಿ ನೀಡಿ ತಲಾ ರೂ. 50 ಸಾವಿರ ಪರಿಹಾರ ಧನ ನೀಡಿದರು. ಅಮ್ಮಿನಬಾವಿ ಗ್ರಾಮದ ಮಂಜುನಾಥ ಜಗಾಪುರ ಕುಟುಂಬಕ್ಕೆ ರೂ 1 ಲಕ್ಷ ಪರಿಹಾರ ನೀಡಿ, ಸಾಂತ್ವನ  ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com