

ಬೆಂಗಳೂರು: ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ದೃಷ್ಟಿಯಿಂದ ಜೆಡಿಎಸ್ ಬಿಬಿಎಂಪಿಯ ಅಧಿಕಾರಕ್ಕಾಗಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು
ಮುಂದಾಗಿದೆ. ಶಾಸಕರಾದ ಜಮೀರ್ ಅಹಮದ್ ಖಾನ್ ಹಾಗೂ ವೈಎಸ್‍ವಿ ದತ್ತ ಅವರ ಈ ಅಭಿಪ್ರಾಯಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಸಮ್ಮತಿಸಿದ್ದಾರೆ.
ಬೆಂಗಳೂರು ಜನತೆ ಕೆರೆ ನುಂಗಿದವರಿಗೆ, ಭ್ರಷ್ಟಾಚಾರ ನಡೆಸಿದವರಿಗೆ ಮತ ಹಾಕಿದ್ದಾರೆ ಎಂಬುದನ್ನು ಮತ್ತೆ ಹೇಳಿರುವ ಜೆಡಿಎಸ್‍ನ ಮಾಜಿ ಸಿಎಂ ಕುಮಾರಸ್ವಾಮಿ, ಚುನಾವಣೆಯಲ್ಲಿ ಶಾಸಕರು ಸೇರಿದಂತೆ 255 ಜನರು ಮತ ಚಲಾಯಿಸಬೇಕು. ಅಲ್ಲಿ ಯಾರು ಮೇಯರ್- ಉಪ ಮೇಯರ್ ಆಗುತ್ತಾರೋ ಅವರದ್ದೇ ಬಹುಮತ ಎಂದಿದ್ದಾರೆ.
ಬಿಜೆಪಿ ಅಧಿಕಾರ ದಿಂದ ದೂರ ಉಳಿಸುವ ದೃಷ್ಟಿಯಿಂದ ಕಾಂಗ್ರೆಸ್‍ನೊಂದಿಗೆ ಕೈಜೋ ಡಿಸಿ ಬಿಬಿಎಂಪಿ ಅಧಿಕಾರಕ್ಕೇರಲು ಮಾತು ಕತೆ ನಡೆಯುತ್ತಿದೆ ಎಂದು ಶಾಸಕ ವೈ.ಎಸ್. ವಿ. ದತ್ತ ಹೇಳಿದ್ದಾರೆ. ಬಿಜೆಪಿಯನ್ನು ದೂರ ಉಳಿಸುವ ದೃಷ್ಟಿಯಿಂದ ಯಾವ ನಿರ್ಣಯವನ್ನಾದರೂ ತೆಗೆದುಕೊಳ್ಳಿ ಎಂದು ಎಚ್.ಡಿ. ದೇವೇಗೌಡ ಹೇಳಿದ್ದಾರೆ ಎಂದು ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.
ಬಿಬಿಎಂಪಿಯ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಕಾಂಗ್ರೆಸ್‍ನೊಂದಿಗೆ ಜೆಡಿಎಸ್ ಮೈತ್ರಿಯ ಬಗ್ಗೆ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ನಗರವನ್ನು ಹಾಳು ಮಾಡಿವೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.