ಎಕ್ಸ್ ಟ್ರಾ ಪ್ಲೇಯರ್ ಗಳಿಂದ ಮ್ಯಾಚ್ ಗೆಲ್ಲೋಕೆ ಆಗಲ್ಲ: ಸುರೇಶ್ ಕುಮಾರ್

`ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಬಿಎಂಪಿಯಲ್ಲಿ ಜನಾದೇಶ ಸಿಗದೇ ಕುಸಿದಿರುವ ಗೌರವವನ್ನು ಹಿಂಬಾಗಿಲ ಮೂಲಕ ಸಂಪಾದಿಸಲು ಹೊರಟಿದ್ದಾರೆ...
ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ಮುಖಂಡ ಸುರೇಶ್ ಕುಮಾರ್
ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ಮುಖಂಡ ಸುರೇಶ್ ಕುಮಾರ್

ಬೆಂಗಳೂರು: `ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಬಿಎಂಪಿಯಲ್ಲಿ ಜನಾದೇಶ ಸಿಗದೇ ಕುಸಿದಿರುವ ಗೌರವವನ್ನು ಹಿಂಬಾಗಿಲ ಮೂಲಕ ಸಂಪಾದಿಸಲು ಹೊರಟಿದ್ದಾರೆ, ಎಕ್ಸ್ ಟ್ರಾ  ಪ್ಲೇಯರ್‍ಗಳನ್ನಿಟ್ಟುಕೊಂಡು ಬಿಬಿಎಂಪಿ ಮ್ಯಾಚ್ ಗೆಲ್ಲಲು ಮುಂದಾಗಿದ್ದಾರೆ' ಎಂದು ಬಿಜೆಪಿ ವಕ್ತಾರ ಎಸ್. ಸುರೇಶ್ ಕುಮಾರ್ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂಬಾಗಿಲಿಂದ ಅಧಿಕಾರ ಪಡೆಯಲು ಹೋದರೆ ಮೊದಲೇ ಮತದಾರರಿಂದ ತಿರಸ್ಕಾರವಾಗಿರುವ ಕಾಂಗ್ರೆಸ್ ಪಕ್ಷ ಬರುವ ದಿನಗಳಲ್ಲಿ ಇನ್ನಷ್ಟು ತಿರಸ್ಕಾರಕ್ಕೆ  ಸಿಲುಕುವುದು ಖಚಿತ ಎಂದು ಎಚ್ಚರಿಸಿದರು. ತ್ರಿಭಜನೆ ಪ್ರಯತ್ನ, ನ್ಯಾಯಾಲಯದ ಮೂಲಕ ಚುನಾವಣೆ ಮುಂದೂಡುವ ಪ್ರಯತ್ನ ನಡೆಸಿದ ಕಾಂಗ್ರೆಸ್ ಗೆ ಜನತೆ ಕೊಟ್ಟಿದ್ದು 76 ಸ್ಥಾನಗಳನ್ನಷ್ಟೇ. ಹೀಗಾಗಿ ಹೈಕಮಾಂಡ್‍ಗೆ ತಮ್ಮ ಮೇಲೆ ಕಣ್ಣು ಬಿದ್ದಿದೆ, ಅದನ್ನು ತಪ್ಪಿಸಿಕೊಳ್ಳಲು ಪಾಲಿಕೆ ಸಿಗದೇ ಇದ್ದರೂ ಆಡಳಿತ ಚುಕ್ಕಾಣಿ ಸಿಗಬೇಕೆಂದು ಸಿಎಂ ಪ್ರಯತ್ನಿಸುತ್ತಿದ್ದಾರೆ. ಈ  ಪ್ರಯತ್ನ ರಾಜ್ಯದ ದೃಷ್ಟಿಯಿಂದ, ಬೆಂಗಳೂರು ನಗರದ ಮತದಾರರ ಆಶಯದ ದೃಷ್ಟಿಯಿಂದ ಸೂಕ್ತವಲ್ಲ ಎಂದು ಹೇಳಲು ಬಯಸುತ್ತೇವೆ ಎಂದರು.

ಸಿಎಂಗೆ ಜಾಣ ಮರೆವು: ಇಷ್ಟೆಲ್ಲಾ ಬೆಳವಣಿಗೆ ನಡೆದರೂ ತಮಗೇನು ಗೊತ್ತೇ ಇಲ್ಲ ಎಂದು ಹೇಳುವ ಮುಖ್ಯಮಂತ್ರಿಯವರದು ಜಾಣ ಮರೆವಾ ಎಂದು ಪ್ರಶ್ನಿಸಬೇಕಾಗುತ್ತದೆ ಎಂದು ಹೇಳಿದ ಅವರು, ಪಕ್ಷೇತರ ಕಾರ್ಪೊರೇಟರ್‍ಗಳನ್ನು ಕೇರಳಕ್ಕೆ ಕರೆದೊಯ್ದಿರುವ ಭೈರತಿ ಬಸವರಾಜ್ ಸಿದ್ದರಾಮಯ್ಯನವರಿಗೆ ಲೆಫ್ಟಿನೆಂಟೋ,  ಬಲಗೈ ಬಂಟರೋ, ಕಿಚನ್ ಕ್ಯಾಬಿ ನೆಟ್ಟೋ ಏನಾದರೂ ಅಂದುಕೊಳ್ಳಬಹು ದು. ಅದೇ ರೀತಿ ಬಿಬಿಎಂಪಿ ಕಡತಗಳ ಬಗ್ಗೆ ವಿಶೇಷ ಜ್ಞಾನ ಹೊಂದಿರುವ ಮುನಿರತ್ನ ಏನೆಂಬುದು ಜನತೆಗೆ ಗೊತ್ತಿದೆ ಎಂದು ಟೀಕಿಸಿದರು.

ತಮಗೆ ಮಾತ್ರ ಏನು ತಿಳಿದಿಲ್ಲ ಎಂದು ಹೇಳುವ ಮುಖ್ಯಮಂತ್ರಿಗಳಿಗೆ ಕಳೆದ 34 ದಿನದಿಂದ ಬೆಳಿಗ್ಗೆ ಗುಪ್ತಚರ ಇಲಾಖೆಯ ಕವರ್ ಬರುತ್ತಿಲ್ಲವೇ ಎಂದು ಪ್ರಶ್ನಿಸಿದ ಸುರೇಶ್ ಕುಮಾರ್, ಜನತೆ ನೀಡಿದ  ತೀರ್ಪನ್ನು ಗೌರವಿಸಿ ಬೆಂಗಳೂರು ಅಭಿವೃದ್ದಿಗೆ ಸಹಕಾರ ನೀಡಿದ್ದರೆ ಮುತ್ಸದ್ದಿಯಾಗುತ್ತಿದ್ದರು. ಆದರೆ, ಅವಕಾಶ ಕಳಕೊಂಡ ನಂತರವೂ ಹಿಂಬಾಗಿಲ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಪಿ.ಸಿ. ಮೋಹನ್, ಜಯನಗರ ಶಾಸಕ ವಿಜಯಕುಮಾರ್, ಮಾ ಧ್ಯಮ ಸಂಯೋಜಕ ಪ್ರಕಾಶ್ ಉಪಸ್ಥಿತರಿದ್ದರು.

ಅವ್ಯವಹಾರಕ್ಕಾಗಿ ಹುನ್ನಾರ: ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ ಮಾತನಾಡಿ ಚುನಾವಣಾ ಫಲಿತಾಂಶ ದ ಬಳಿಕ ಕೂಡಲೇ ಮೇಯರ್ ಚುನಾವಣೆಗೆ ಸರ್ಕಾರ ಆದೇಶ ಮಾಡ ಬೇಕಾಗಿತ್ತು.  ಅಲ್ಲದೇ, ಮೇಯರ್ ಚುನಾವಣೆಗೆ ಅರ್ಹರ ಪಟ್ಟಿಯನ್ನು ಎಲ್ಲಾ ಪಕ್ಷಗಳಿಗೆ, ಪಾಲಿಕೆ ಹಾಗೂ ಸಂಬಂಧಪಟ್ಟವರಿಗೆ ರವಾನಿಸಬೇಕಾಗಿತ್ತು. ಆದರೆ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಮತದಾರರ ಪಟ್ಟಿ  ಯನ್ನು ಬಿಡುಗಡೆಗೊಳಿಸಿಲ್ಲ ಎಂದು ಟೀಕಿಸಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಅಧಿಕೃತವಾಗಿ ಪಟ್ಟಿ ಬಿಡುಗಡೆ ಮಾಡಬೇಕಾಗಿದ್ದರೂ, ಉದ್ದೇಶಪೂರ್ವಕವಾಗಿ ತಡ ಮಾಡಲಾಗಿದೆ. ಮಾತ್ರವಲ್ಲದೆ  ಚುನಾವಣೆಗೆ ಅರ್ಹರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಈ ಮೂಲಕ ಅವ್ಯವಹಾರ ಮಾಡಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com