ಕೈ ವಿಜಯಕ್ಕೆ ದಿಗ್ಗಿ ಸಿದ್ಧಾಂತ

ಸರ್ಕಾರದ ಕಾರ್ಯ ವೈಖರಿ, ಪಕ್ಷ ಬಲಪಡಿಸುವಿಕೆ, ಸದಸ್ಯತ್ವ ಹೆಚ್ಚಳ ಸೇರಿದಂತೆ ರಾಜ್ಯ ಕಾಂಗ್ರೆಸ್‍ಗೆ ಸಂಬಂಧಿಸಿದ..
ಕೆಪಿಸಿಸಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ದಿಗ್ವಿಜಯ್ ಸಿಂಗ್ (ಸಂಗ್ರಹ ಚಿತ್ರ)
ಕೆಪಿಸಿಸಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ದಿಗ್ವಿಜಯ್ ಸಿಂಗ್ (ಸಂಗ್ರಹ ಚಿತ್ರ)

ಬೆಂಗಳೂರು: ಸರ್ಕಾರದ ಕಾರ್ಯ ವೈಖರಿ, ಪಕ್ಷ ಬಲಪಡಿಸುವಿಕೆ, ಸದಸ್ಯತ್ವ ಹೆಚ್ಚಳ ಸೇರಿದಂತೆ ರಾಜ್ಯ ಕಾಂಗ್ರೆಸ್‍ಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಶಾಸಕರ, ಸಚಿವರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಜ.30 ರಿಂದ ಫೆ.1ರವರೆಗೆ ಕೆಪಿಸಿಸಿ ಕಚೇರಿಯಲ್ಲಿ ಸಮಾವೇಶ ನಡೆಯಲಿದೆ.

ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತಿದೆ, ಪಕ್ಷವನ್ನು ರಾಜ್ಯದಲ್ಲಿ ಬಲಪಡಿಸಲು ಕೈಗೊಳ್ಳಬೇಕಾದ ಕ್ರಮ, ಭವಿಷ್ಯದಲ್ಲಿ ಪಕ್ಷವನ್ನು ಬೆಳೆಸಲು ಮಾಡಿಕೊಳ್ಳಬೇಕಾದ ಬದಲಾವಣೆ,ಪಕ್ಷಕ್ಕೆ ಹೊಸಬರ ಸೇರ್ಪಡೆ ಸೇರಿದಂತೆ ಪಕ್ಷವನ್ನು ಬಲಪಡಿಸಲು ಅಬಿsಪ್ರಾಯ ಸಂಗ್ರಹಿಸಲಾಗುತ್ತದೆ. ಇದರ ವರದಿಯನ್ನು ಎಐಸಿಸಿಗೆ ಸಲ್ಲಿಸಲಾಗುತ್ತದೆ ಎಂದು ಹೇಳುವ ಮೂಲಕ ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹೊಸ ಬಾಂಬ್ ಸಿಡಿಸಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಸ್ಥಿತಿಯಲ್ಲಿ ಇದು ಹೆಚ್ಚು ಮಹತ್ವ ಪಡೆದು ಕೊಂಡಿದೆ.

ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಈ ಸಮಾವೇಶ ನಡೆಯಲಿದ್ದು, ಫೆ.15ರಂದು ವರದಿ ಸಿದಟಛಿಪಡಿಸಿ ಎಐಸಿಸಿಗೆ ಸಲ್ಲಿಸಲಾಗುತ್ತದೆ. ಇದೇ ವೇಳೆ ಪ್ರತಿ ತಾಲೂಕಿನಲ್ಲಿ ಆಯಾ ಜಿಲ್ಲೆಗಳ ಶಾಸಕರು, ಬೂತ್, ಬ್ಲಾಕ್ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.

ಸದಸ್ಯತ್ವ ಅಭಿಯಾನವೂ ನಡೆಯಲಿದ್ದು, ಫೆ.28ಕ್ಕೆ ಹೊಸಬರನ್ನು ಸೇರಿಸಿಕೊಳ್ಳುವ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಶನಿವಾರ ಕೆಪಿಸಿಸಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಲೋಕಸಭೆ ಚುನಾವಣೆ ಬಳಿಕ ಪಕ್ಷ ಬಲಪಡಿಸಲು ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಪಕ್ಷವನ್ನು ಬಲಪಡಿಸಲು ಸಿದ್ಧಾಂತಗಳಲ್ಲಿ ಬದಲಾವಣೆ ಅಗತ್ಯವಿದೆ. ಹೀಗಾಗಿ ಅಭಿಪ್ರಾಯ ಸಂಗ್ರಹಿಸಲಿದ್ದು, ಪಕ್ಷದಲ್ಲಿ ಬದಲಾವಣೆ ತರಲು ವರದಿ ಸಿದ್ಧಪಡಿಸಲಾಗುವುದು ಎಂದರು.

`ಯೂ' ಟರ್ನ್
ದೆಹಲಿ ಚುನಾವಣೆಗೆ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಬಿಜೆಪಿ `ಯೂ' ಟರ್ನ್ ಮಾಡಿದೆ. ಹಿಂದೆ ಮೋದಿ ಅವರನ್ನೇ ಟೀಕಿಸಿದ್ದ ಬೇಡಿ, ಈಗ ಕೇಂದ್ರ ಸರ್ಕಾರವನ್ನು ಹೊಗಳುತ್ತಿದ್ದಾರೆ. ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ಹೇಳಿದ್ದ ಮಾತುಗಳನ್ನು ಮರೆತಿದ್ದಾರೆ. ಲವ್‍ಜಿಹಾದ್ ಹಾಗೂ ಘರ್ ವಾಪಸಿ, ಗೋಡ್ಸೆ ದೇಶಭಕ್ತ ಎಂಬ ಹೇಳಿಕೆ, ಕೋಮುವಾದಕ್ಕೆ ಬೆಂಬಲದ ಮೂಲಕ ಬಿಜೆಪಿ `ಡಬ್ಬಲ್ ಸ್ಟ್ಯಾಂಡರ್ಡ್' ಧೋರಣೆ ಪ್ರದರ್ಶಿಸಿದೆ. ಕಪ್ಪು ಹಣ ವಾಪಸ್ ತರದಿರುವುದು, ಆಧಾರ್ ಮುಂದುವರಿಕೆ, ತೈಲ ಉತ್ಪನ್ನಗಳ ದರದಲ್ಲಿ ಗಣನೀಯ ಇಳಿಕೆ ಆಗದಿರುವುದು ಸೇರಿದಂತೆ ಬಿಜೆಪಿ ತಾನು ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಟೀಕಿಸಿದರು.

ಅರ್ಕಾವತಿ ದಾಖಲೆ ನೀಡಬೇಕಾಗುತ್ತದೆ
ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್‍ಗೆ ಸಂಬಂಧಿಸಿದಂತೆ ನ್ಯಾ.ಕೆಂಪಣ್ಣ ಅವರು ದಾಖಲೆ ಕೇಳಿದರೆ ಸರ್ಕಾರ ನೀಡಬೇಕಾಗುತ್ತದೆ ಎಂದು ದಿಗ್ವಿಜಯ್ ಸಿಂಗ್ ಹೇಳಿದರು. ಸರ್ಕಾರ ದಾಖಲೆಗಳನ್ನು ನೀಡುತ್ತಿಲ್ಲ ಎಂದು ನ್ಯಾ.ಕೆಂಪಣ್ಣ ದೂರಿರುವ ಬಗ್ಗೆ ದಿಗ್ವಿಜಯ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ತನಿಖೆ ಮಾಡಲು ದಾಖಲೆಗಳನ್ನು ಕೇಳಿದರೆ ಸರ್ಕಾರ ನೀಡಬೇಕಾಗುತ್ತದೆ.

ಆದರೆ ಬಿಜೆಪಿ ಹಾಗೂ ಇತರೆ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ. ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶ ಹಾಗೂ ನೋಟಿಫಿಕೇಷನ್ ಗೆ ಸಂಬಂಧಿಸಿದ ಮಾರ್ಗಸೂಚಿಯಂತೆಯೇ ನಡೆದುಕೊಂಡಿದೆ. ಯಾರೇ ಅಕ್ರಮ ನಡೆಸಿದ್ದರೂ ದಾಖಲೆಗಳನ್ನು ಮುಕ್ತವಾಗಿ ನೀಡಬಹುದು.

ಸರ್ಕಾರ ಈ ಪ್ರಕರಣದ ಯಾವುದೇ ಹಂತದಲ್ಲಿ ಹಸ್ತಕ್ಷೇಪ ಮಾಡಿದ್ದರೆ ಸೂಕ್ತ ದಾಖಲೆಗಳನ್ನು ಒದಗಿಸಲಿ. ವಿಚಾರಣೆಗೆ ಅನುಮತಿ ನೀಡಲು ನಿಯಮದ ಪ್ರಕಾರ ಸಾಧ್ಯವಿಲ್ಲ. ಎಫ್ಐಆರ್ ಹಾಗೂ ತನಿಖೆಯ ನಂತರ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕು. ನಂತರವಷ್ಟೇ ವಿಚಾರಣೆಗೆ ಅನುಮತಿ ನೀಡಲು ಸಾಧ್ಯ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com