

ಕಾರ್ಕಳ: ನಾನು ಯಾವತ್ತೂ ನಾಸ್ತಿಕ ಎಂದು ಹೇಳಿಕೊಂಡಿಲ್ಲ. ಆದರೆ ದೇವೇಗೌಡರಷ್ಟು ಮೂಢನಂಬಿಕೆ, ಕಂದಾಚಾರಗಳಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅರ್ಕಾವತಿ ಡಿನೋಟಿಫಿಕೇಶನ್ ಹಗರಣದಲ್ಲಿ ತಪ್ಪು ಮಾಡಿದ್ದರಿಂದ ಭಯಗೊಂಡು ತಿರುಪತಿಗೆ ಹೋಗಿದ್ದಾರೆ ಎಂಬ ದೇವೇಗೊಡರ ಟೀಕೆಗೆ ಅವರು ಈ ಉತ್ತರ ನೀಡಿದ್ದಾರೆ.
ಅರ್ಕಾವತಿ ಹಗರಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ರಾಜಿನಾಮೆ ಪಡೆಯಬೇಕು ಎಂದು ದೇವೇಗೌಡರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದನ್ನೆಲ್ಲ ಹೇಳುವುದಕ್ಕೆ ದೇವೇಗೌಡ ಯಾರು? ನಮ್ಮ ಪಕ್ಷಕ್ಕೂ ಅವರಿಗೂ ಏನು ಸಂಬಂಧ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.