

ಕಲಬುರಗಿ: ರೈತರಿಂದ ಕಬ್ಬು ಖರೀದಿಸಿ ಹಣ ಕೊಡದೆ ಬಾಕಿ ಇಟ್ಟುಕೊಂಡು ಈಗ ಬಾ, ಆಗ ಬಾ, ಹೋಗಿ ಬಾ ಎಂದು ಸತಾಯಿಸುತ್ತಿದ್ದ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಡಳಿತ ಕೊನೆಗೂ ಬಿಸಿ ಮುಟ್ಟಿಸಿದೆ. ಜಿಲ್ಲೆಯಲ್ಲಿರುವ ಉಗಾರ ಶುಗರ್ಸ್ (ಮಳ್ಳಿ,ಜೇವರ್ಗಿ), ರೇಣುಕಾ ಶುಗರ್ಸ್ (ಹಾವಳಗಾ-ಅಫ್ಜಲ್ಪುರ) ಹಾಗೂ ಎನ್‍ಎಸ್‍ಎಲ್ ಶುಗರ್ಸ್ (ಭೂಸನೂರು- ಆಳಂದ) ಕಾರ್ಖಾನೆಗಳ ಗೋದಾಮುಗಳ ಮೇಲೆ ದಾಳಿ ಮಾಡಿರುವ ಜಿಲ್ಲಾಡಳಿತದ ಅಧಿಕಾರಿಗಳು ಕಳೆದೊಂದು ವಾರದಲ್ಲಿ ರು. 145 ಕೋಟಿ ಮೌಲ್ಯದ 1.75 ಲಕ್ಷ ಕ್ವಿಂಟಲ್ ಸಕ್ಕರೆ ದಾಸ್ತಾನು ಜಪ್ತಿ ಮಾಡಿಕೊಂಡಿದ್ದಾರೆ.
ಇಂದಿಲ್ಲಿ ಈ ಸಂಗತಿಯನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಜಿಲ್ಲಾಡಳಿತ ಹಣ ಪಾವತಿ ವಿಚಾರದಲ್ಲಿ ರೈತರಿಗೆ ತೊಂದರೆ ಕೊಡುವ ಕಾರ್ಖಾನೆಗಳ ಗೋದಾಮುಗಳ ಮೇಲೆ ದಾಳಿ ಮಾಡಿ ಸಕ್ಕರೆ ಜಪ್ತಿ ಮಾಡಿಕೊಂಡಿದೆ. ಕಾರ್ಖಾನೆಗಳು ರೈತರ ಬಾಕಿ ಬೇಗ ಪಾವತಿಸದೆ ಹೋದಲ್ಲಿ ಜಪ್ತಿ ಮಾಡಲಾದ ಸಕ್ಕರೆ ಮಾರಾಟ ಮಾಡಲಾಗುತ್ತದೆ ಎಂದೂ ಹೇಳಿದ್ದಾರೆ.
- ಎನ್‍ಎಸ್‍ಎಲ್- 3.81 ಲಕ್ಷ ಕ್ವಿಂ. ಸಕ್ಕರೆ ಜಪ್ತಿ
- ರೇಣುಕಾ ಶುಗರ್ಸ್- 1.97 ಲಕ್ಷ ಕ್ವಿಂ. ಸಕ್ಕರೆ ಜಪ್ತಿ
- ಉಗಾರ ಶುಗರ್ಸ್- 1.46 ಲಕ್ಷ ಕ್ವಿಂ. ಸಕ್ಕರೆ ಜಪ್ತಿ
ಇವೆಲ್ಲ ಸಕ್ಕರೆ ಕಾರ್ಖಾನೆಗಳ ಬಳಿ ಹೆಚ್ಚಿನ ಸಕ್ಕರೆ
ದಾಸ್ತಾನು ಇದೆಯಾದರೂ ಜಿಲ್ಲಾಡಳಿತದವರಾದ ನಾವು ಕಾರ್ಖಾನೆಗಳವರು ತಮ್ಮ ಬಲಿ ಇನ್ನೂ ಇರುವ ಸಕ್ಕರೆಯ ದಾಸ್ತಾನು ಮಾರಿಯಾದರೂ ರೈತರ ಹಣ ಮುಟ್ಟಿಸಲಿ
ಎಂಬ ಉದ್ದೇಶದಿಂದ, ಅಗತ್ಯವಿರುವಷ್ಟು ದಾಸ್ತಾನುಮಾತ್ರ ಜಪ್ತಿ ಮಾಡಿದ್ದೇವೆ ಎಂದು ವಿಫುಲ್ ಬನ್ಸಲ್ ಸ್ಪಷ್ಟಪಡಿಸಿದ್ದಾರೆ.