

ಬೆಂಗಳೂರು: ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದರಿಂದ ಸರ್ಕಾರ ಕಿತ್ತುಹಾಕುತ್ತೇನೆಂಬ ಭ್ರಮೆ ನನಗಿಲ್ಲ. ಈಗಾಗಲೇ ಆರು ಕೋಟಿ ಜನರ ವಿಶ್ವಾಸ ಕಳೆದುಕೊಂಡಿರುವ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದರಿಂದ ಹತ್ತಾರು ವಿಚಾರಗಳನ್ನು ಮುಕ್ತವಾಗಿ ಚರ್ಚೆ ಮಾಡಲು ಅವಕಾಶ ಸಿಗುತ್ತದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದರ ಬಗ್ಗೆ ತೀರ್ಮಾನಿಸಲು ಈಗಾಗಲೇ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕುಮಾರಸ್ವಾಮಿ ನಮಗೆ ಸಂಖ್ಯಾ ಬಲ ಇಲ್ಲ. ಅವರೇ ಕುಸ್ತಿ ಆಡಿಕೊಂಡು ಸರ್ಕಾರ ಬಿದ್ದುಹೋಗುತ್ತದೆ.
ಅವಿಶ್ವಾಸ ಮಂಡನೆ ಬದಲು ಬೇರೆ ರೀತಿ ನಿಲುವಳಿ ಸೂಚನೆ ತಂದರೆ ಒಳ್ಳೆಯದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಆದರೆ ನಾನು ಅವಿಶ್ವಾಸ ಮಂಡನೆ ಮಾಡಿ ಸರ್ಕಾರ ಕಿತ್ತು ಹಾಕುತ್ತೇನೆಂದಲ್ಲ ನಿಲುವಳಿ ಸೂಚನೆಯಲ್ಲಿ ಒಂದೊಂದೇ ವಿಷಯ ಇಡಬೇಕು ಇರುವ 10 ದಿನದ ಅಧಿವೇಶನದಲ್ಲಿ ಸಾಕಷ್ಟು ವಿಷಯ ಚರ್ಚಿಸಲು ಅವಕಾಶವಿರುವುದಿಲ್ಲ. ಆದರೆ ಅವಿಶ್ವಾಸ ನಿರ್ಣಯ ಮಾಡಿದರೆ ಸಮಗ್ರವಾಗಿ ಎಲ್ಲಾ ವಿಷಯ ಚರ್ಚಿಸಲು ಸಾಧ್ಯವಿದೆ ಎಂದು ಸಮರ್ಥನೆ ನೀಡಿದ್ದಾರೆ.