ಡಿ.ಕೆ.ಶಿ, ಹೆಚ್.ಡಿ.ಕೆ ವಯಕ್ತಿಕ ಆರೋಪ- ಪ್ರತ್ಯಾರೋಪಕ್ಕೆ ತಿರುಗಿದ ಅವಿಶ್ವಾಸ ನಿರ್ಣಯ ಚರ್ಚೆ

ಜೆಡಿಎಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಇಂಧನ ಸಚಿವ ಡಿ.ಕೆ ಶಿವಕುಮಾರ್ ನಡುವೆ ವೈಯಕ್ತಿಕ ಸಂಘರ್ಷಕ್ಕೆ ಕಾರಣವಾಯಿತು.
ಸದನದಲ್ಲಿ ಹೆಚ್.ಡಿ.ಕೆ, ಡಿ.ಕೆ.ಶಿ ನಡುವೆ ವಾಗ್ವಾದ(ಕೆಪಿಎನ್ ಚಿತ್ರ)
ಸದನದಲ್ಲಿ ಹೆಚ್.ಡಿ.ಕೆ, ಡಿ.ಕೆ.ಶಿ ನಡುವೆ ವಾಗ್ವಾದ(ಕೆಪಿಎನ್ ಚಿತ್ರ)
Updated on: 

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಇಂಧನ ಸಚಿವ ಡಿ.ಕೆ ಶಿವಕುಮಾರ್ ನಡುವೆ ವೈಯಕ್ತಿಕ ಸಂಘರ್ಷಕ್ಕೆ ಕಾರಣವಾಯಿತು.

ಒಬ್ಬರ ವಿರುದ್ಧ ಮತ್ತೊಬ್ಬರು ಕಡತ ಪ್ರದರ್ಶನ ಮೂಲಕ ತೊಡೆ ತಟ್ಟಿದ್ದು ವಿಧಾನಸಭೆಯಲ್ಲಿ ಮದ್ದಾನೆಗಳ ಕಾಳಗ ವಾತಾವರಣ ಸೃಷ್ಟಿಸಿದರು. ಅವಿಶ್ವಾಸ ನಿರ್ಣಯ ಮಂಡಿಸಿದ್ದ ಕುಮಾರಸ್ವಾಮಿ, ಸರ್ಕಾರದ ವೈಫಲ್ಯಗಳ ಬಗ್ಗೆ ದಾಖಲೆ ಪ್ರದರ್ಶನ ಮಾಡುವುದರ ಬದಲು ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರನ್ನೇ ಹೆಚ್ಚಾಗಿ ತಾಡಿದರು. ಜತೆಗೆ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರ ಪಾತ್ರ ಇದೆ ಎಂದು ಆರೋಪಿಸಿದರು. ಆರೋಪವನ್ನು ತಳ್ಳಿಹಾಕಿದ ಮಹದೇವಪ್ಪ. ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ, ಸುಪ್ರೀಂ ಕೋರ್ಟ್ ನಿಷೇಧ ಹೇರುವುದಕ್ಕೂ ಮುನ್ನವೇ ನಾನು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ನಿಲ್ಲಿಸಲು ಪ್ರಯತ್ನಿಸಿದ್ದೇನೆ ಎಂದು ಸಚಿವರು ತಿರುಗೇಟು ನೀಡಿದರು.

ಮಧ್ಯಾಹ್ನದ ಕಲಾಪ ಸಂದರ್ಭದಲ್ಲಿ ಗೃಹ, ಲೋಕೋಪಯೋಗಿ ಇಲಾಖೆ ಸಚಿವರ ವರ್ತನೆ ಬಗ್ಗೆ ಕೆಲ ಹೊತ್ತು ಆಕ್ಷೇಪ ವ್ಯಕ್ತಪಡಿಸಿ ದಾಕಲೆ ಪ್ರದರ್ಶನ ಮಾಡಿದ ಕುಮಾರಸ್ವಾಮಿ, ಬಳಿಕ ತಮ್ಮ ರಾಜಕೀಯ ವೈರಿ ಡಿ.ಕೆ ಶಿವಕುಮಾರ್ ಅವರತ್ತ ತಿರುಗಿದರು. ಸರ್ಕಾರದ ಸೋಲಾರ್ ನೀತಿಯಲ್ಲಿ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಭವಿಷ್ಯದಲ್ಲಿ ಇದರಿಂದ ರಾಜ್ಯದ ಜನತೆಯ ಮೇಲೆ ಸಾವಿರಾರು ಕೋಟಿ ಹೊರೆ ಬೀಳುತ್ತದೆ ಎಂದು ಆರೋಪಿಸಿದರು. ಅಲ್ಲದೇ ನೀತಿ ಜಾರಿಗೆ ಬಂದ ನಂತರ ಅರ್ಜಿ ಸಲ್ಲಿಸಿದವರ ಪೈಕಿ 75 ಮಂದಿ 900 ಎಕರೆ ಜಮೀನು ಖರೀದಿ ಮಾಡಿದ್ದಾರೆ ರೈತರ ಹೆಸರಿನಲ್ಲಿ ಲೂಟಿ ಹೊಡೆಯಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಈ ದೇಶದಲ್ಲಿ ಯಾರೂ ಮಾಡಬಾರದ ಅಪರಾಧ ಮಾಡಿದ್ದೇನೆ ಎಂಬರ್ಥದಲ್ಲಿ ನನ್ನ ವಿರುದ್ಧ ಹೆಚ್.ಡಿ.ಕೆ ಆರೋಪ ಮಾಡುತ್ತಿದ್ದಾರೆ. ಆದರೆ ಇದನ್ನು ಕೇಂದ್ರ ಸರ್ಕಾರ ಮಾದರಿ ನೀತಿ ಎಂದು ಘೋಷಿಸಿದ್ದು ಪ್ರಧಾನಿ ಮೋದಿ ಅವರೇ ನಮಗೆ ಅವಾರ್ಡ್ ನೀಡಿದ್ದಾರೆ ಎಂದು ತಿರುಗೇಟು ನೀಡಿದರು. ಈಗೇನಾದರೂ ಪ್ರಧಾನಿ ಮೋದಿ  ನಿಮ್ಮ ಯೋಜನೆಯನ್ನು ನೋಡಿದರೆ ಪಾರಿತೋಷಕ ಕೊಡುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಕುಮಾರಸ್ವಾಮಿ ಹೇಳಿಕೆಯಿಂದ ಮತ್ತಷ್ಟು ಆಕ್ರೋಶಗೊಂಡ ಡಿ.ಕೆ ಶಿವಕುಮಾರ್, ಮಂಕುತಿಮ್ಮನ ಕಗ್ಗ ಹೇಳುವ ಮೂಲಕ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು. ನಂತರ ಅಧಿಕಾರವಧಿಯಲ್ಲಿ ನಡೆಸಿದ ಅಕ್ರಮಗಳ ಬಗ್ಗೆ ಇಬ್ಬರೂ ನಾಯಕರು ಪರಸ್ಪರ ಕಡತ ಪ್ರದರ್ಶಿಸಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದರು. ತಮ್ಮ ವಿರುದ್ಧ ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಕೆಂಡಾಮಂಡಲರಾದ ಡಿ.ಕೆ ಶಿವಕುಮಾರ್, ಇದೇ ಏನ್ರೀ ನಿಮ್ಮ ಅವಿಶ್ವಾಸ ನಿರ್ಣಯ? ಒಳ್ಳೆ ಫಿಲ್ಮ್ ಕಥೆ ತರಾ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com