ಸಚಿವರೊಂದಿಗೆ ಸಭೆ: ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸುವ ರಾಹುಲ್ ಗಾಂಧಿ ಅಲ್ಲಿಂದ ಹೆಲಿಕಾಪ್ಟರ್‍ನಲ್ಲಿ ಮಂಡ್ಯ ತಲುಪುವರು. ರಾಜ್ಯದ 6 ಸಚಿವರ ಜತೆಗೆ ಉನ್ನತಮಟ್ಟದ ಸಭೆ ಆಯೋಜಿಸಲಾಗಿದೆ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಸಹಕಾರ ಸಚಿವ ಮಹದೇವ ಪ್ರಸಾದ್, ವಸತಿ ಸಚಿವ ಅಂಬರೀಶ್, ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ರಾಜ್ಯದ ಕೃಷಿ ಮತ್ತು ನೀರಾವರಿಸಮಸ್ಯೆ, ಅದನ್ನು ಬಗೆಹರಿಸಲು ಸರ್ಕಾರ ತೆಗೆದುಕೊಂಡ ಕ್ರಮ, ಸಾಲದ ಸಮಸ್ಯೆ, ಸಾಲದ ಹೊರೆ ಹಾಗೂ ಅದನ್ನು ಬಗೆಹರಿಸಲು ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನಂತರ ಕೊತ್ತಲೆ ಮತ್ತು ಪಣತ್ತನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ 35 ವಿದ್ಯಾರ್ಥಿಗಳು, 35 ಕೃಷಿ ತಜ್ಞರು, 35 ವಿಜ್ಞಾನಿಗಳು, 35 ಪ್ರಗತಿಪರ ರೈತರು ಮತ್ತು ಚಿಂತಕರು, ರೈತರ ಜತೆಗೆ ಕೃಷಿ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.