ಮತ್ತೆ ಚಿಗುರಿದ ಕನಸು

ದಸರಾ ಮುಕ್ತಾಯದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದ್ದು, ಉಪಮುಖ್ಯಮಂತ್ರಿ ಹುದ್ದೆಗಾಗಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅಂತಿಮ ಕಸರತ್ತು ಆರಂಭಿಸಿದ್ದಾರೆ...
ಜಿ ಪರಮೇಶ್ವರ ಮತ್ತು ಎಸ್ ಎಂ ಕೃಷ್ಣ (ಸಂಗ್ರಹ ಚಿತ್ರ)
ಜಿ ಪರಮೇಶ್ವರ ಮತ್ತು ಎಸ್ ಎಂ ಕೃಷ್ಣ (ಸಂಗ್ರಹ ಚಿತ್ರ)
Updated on

ಬೆಂಗಳೂರು: ದಸರಾ ಮುಕ್ತಾಯದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ತೀವ್ರಗೊಂಡಿದ್ದು, ಉಪಮುಖ್ಯಮಂತ್ರಿ ಹುದ್ದೆಗಾಗಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅಂತಿಮ ಕಸರತ್ತು  ಆರಂಭಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗಿಂತ ಒಂದು ದಿನ ಮುಂಚಿತವಾಗಿಯೇ ದೆಹಲಿಗೆ ಪ್ರಯಾಣ ಬೆಳೆಸಿರುವ ಡಾ. ಪರಮೇಶ್ವರ ಅದಕ್ಕೂ ಮುನ್ನ ತಮ್ಮ ರಾಜಕೀಯ ಗುರು ಮಾಜಿ ಸಿಎಂ ಎಸ್.ಎಂ.ಕೃಷ್ಣರ  ಸದಾಶಿವನಗರ ನಿವಾಸಕ್ಕೆ ತೆರಳಿ ಮಹತ್ವದ ಚರ್ಚೆ ನಡೆಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಇವರಿಬ್ಬರೂ ಮಾತುಕತೆ ನಡೆಸಿದ್ದು, ದೆಹಲಿಯಲ್ಲಿ ಉರುಳಿಸಬೇಕಾದ ದಾಳಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಪರಮೇಶ್ವರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಈಗಾಗಲೇ ಮುನ್ಸೂಚನೆ ನೀಡಿರುವ ಸಿಎಂ ಸಿದ್ದರಾಮಯ್ಯ ಬಣ, ಎಐಸಿಸಿ ಪ್ರಧಾನ  ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮೂಲಕ ಸಂಪುಟಕ್ಕೆ ಸೇರುವಂತೆ ಸಂದೇಶ ರವಾನೆ ಮಾಡಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ನೀವು ಅನಧಿಕೃತವಾಗಿ ನಂಬರ್ 2 ಸ್ಥಾನದಲ್ಲಿರುತ್ತೀರಿ ಎಂದೂ ಹೇಳಲಾಗಿದೆ. ಕಂದಾಯ ಅಥವಾ ಗೃಹ ಇಲಾಖೆಯ ಜತೆಗೆ ಉನ್ನತ ಶಿಕ್ಷಣ ಇಲಾಖೆ ಹೊಣೆಗಾರಿಕೆ  ನೀಡುವ ಭರವಸೆಯನ್ನೂ ನೀಡಲಾಗಿದೆ.  ಆರಂಭದಲ್ಲಿ ಈ ವಿಚಾರದಲ್ಲಿ ಕೊಂಚ ಹೊಯ್ದಾಟದಲ್ಲಿದ್ದ ಪರಮೇಶ್ವರ, ಕೃಷ್ಣ ಅವರು ಅಖಾಡಕ್ಕೆ ಇಳಿದ ನಂತರ ಉಪಮುಖ್ಯಮಂತ್ರಿ ಹುದ್ದೆಯನ್ನು  ಹೊರತುಪಡಿಸಿ ಬೇರೆಯಾವುದೇ ಹುದ್ದೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಚಿವ ಸ್ಥಾನಮಾನಗಳನ್ನು ತಾವು ಈಗಾಗಲೇ ಅನುಭವಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್  ಸರ್ಕಾರ ಅಧಿಕಾರಕ್ಕೆ ಬರುವ ವಿಚಾರದಲ್ಲಿ ತಮ್ಮ ಕೊಡುಗೆಯೂ ಸಾಕಷ್ಟು ಇದೆ. ನಾನಾ ಕಾರಣಗಳಿಂದ ನಾನು ಚುನಾವಣೆಯಲ್ಲಿ ಸೋತಿರಬಹುದು.

ಆದರೆ, ನನ್ನ ಶ್ರಮಕ್ಕೆ ಒಪ್ಪುವ ಸ್ಥಾನಮಾನ ನೀಡಲೇಬೇಕು ಎಂದು ಸೋನಿಯಾ ಗಾಂಧಿ ಅವರ ಎದುರು ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಎಸ್.ಎಂ. ಕೃಷ್ಣ ಅವರ  ಭೇಟಿ ಸಂದರ್ಭದಲ್ಲೂ ಇದೇ ವಿಚಾರಗಳು ಚರ್ಚೆಗೆ ಬಂದಿದ್ದು, ಉಪಮುಖ್ಯಮಂತ್ರಿ ಸ್ಥಾನ ನೀಡದೇ ಹೋದರೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವಂತೆ ಕೃಷ್ಣ ಸಲಹೆ  ನೀಡಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನ 1 ಗಂಟೆಗೆ ಕೃಷ್ಣ ನಿವಾಸದಿಂದಲೇ ದೆಹಲಿಗೆ ತೆರಳಿರುವ ಪರಮೇಶ್ವರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್  ಸಿಂಗ್,  ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಜತೆ ಮಾತುಕತೆ ನಡೆಸಿದ್ದಾರೆ.

ದೂರವುಳಿದ ಖರ್ಗೆ, ಹರಿಪ್ರಸಾದ್: ಇವೆಲ್ಲ ಬೆಳವಣಿಗೆಗಳ ಮಧ್ಯೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಮತ್ತು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖಂಡ  ಮಲ್ಲಿಕಾರ್ಜುನ ಖರ್ಗೆ ಮೇಲ್ನೋಟಕ್ಕೆ ಈ ಪ್ರಕ್ರಿಯೆಯಿಂದ ದೂರವುಳಿದಂತೆ ತೋರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ದೆಹಲಿಗೆ ಬರುವ ಸಂದರ್ಭದಲ್ಲಿ ಹರಿಪ್ರಸಾದ್  ಕರ್ನಾಟಕಕ್ಕೆ ವಾಪಸ್ ಬರಲಿದ್ದಾರೆ. ಮಂಗಳೂರಿನ ಕುದ್ರೋಳಿಯಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿದೆ ಎಂಬುದು ಅವರು ನೀಡುತ್ತಿರುವ ಕಾರಣ. ಸಂಪುಟ ವಿಸ್ತರಣೆಗೆ  ಸಂಬಂಧಿಸಿದ ಚರ್ಚೆಯಲ್ಲಿ ಖರ್ಗೆ ಭಾಗವಹಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಆದರೆ, ಸಂಪುಟ ವಿಸ್ತರಣೆ ಸದ್ಯಕ್ಕೆ ಬೇಡ ಎಂಬ ವಿಚಾರವನ್ನು ಹೈಕಮಾಂಡ್‍ಗೆ ಮನದಟ್ಟು ಮಾಡಿಸುವಲ್ಲಿ  ಇವರಿಬ್ಬರು ಸಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಮುನಿಸಿಕೊಂಡಿದ್ದ ಹರಿಪ್ರಸಾದ್ ಅವರನ್ನು ಸಾಂತ್ವನಗೊಳಿಸಲು ಸಿದ್ದರಾಮಯ್ಯ ಬಣ ಪ್ರಯತ್ನ ನಡೆಸಿದ್ದರೂ ಪೂರ್ಣ ಪ್ರಮಾಣದಲ್ಲಿ  ಸಂಧಾನ ಯಶಸ್ವಿಯಾಗದೇ ಇರುವುದು ಸಿದ್ದರಾಮಯ್ಯ ಅವರಿಗೆ ಹಿನ್ನಡೆಯನ್ನುಂಟು ಮಾಡಿದೆ ಎನ್ನಲಾಗುತ್ತಿದೆ. ಎರಡು ಪಟ್ಟಿ: ಇವೆಲ್ಲ ಬೆಳವಣಿಗೆಗಳಿಂದ ಧೃತಿಗೆಡದ ಸಿಎಂ ಸಿದ್ದರಾಮಯ್ಯ  ಮಾತ್ರ ಸಂಪುಟ ಪುನಾರಚನೆ ಮತ್ತು ವಿಸ್ತರಣೆಯ ಎರಡೂ ಪಟ್ಟಿಗಳನ್ನು ದೆಹಲಿಗೆ ಒಯ್ಯಲು ನಿರ್ಧರಿಸಿದ್ದು, ಯಾವುದಾದರೂ ಒಂದಕ್ಕೆ ಹೈಕಮಾಂಡ್ ಸಮ್ಮತಿ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಭಾನುವಾರ ಅವರು ದೆಹಲಿಗೆ ತೆರಳುವರು ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.

ರಾಜಕೀಯ ಚರ್ಚಿಸಿಲ್ಲ
ಎಸ್.ಎಂ ಕೃಷ್ಣ ಅವರ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಹಬ್ಬದ ಶುಭಾಶಯ ತಿಳಿಸಲು ಮತ್ತು ಆರೋಗ್ಯ ವಿಚಾರಿಸಲು ಕೃಷ್ಣ ಅವರನ್ನು  ಭೇಟಿ ಮಾಡಿದ್ದೆ. ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿಲ್ಲ. ಪಕ್ಷದ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಲು ದಿಗ್ವಿಜಯ್  ಸಿಂಗ್ ಕರೆದಿದ್ದಾರೆ. ಸಿಎಂ ನಾಳೆ ಆಗಮಿಸಿದರೆ ಒಟ್ಟಿಗೆ  ಚರ್ಚಿಸುತ್ತೇವೆ. ಸಂಪುಟ ಪುನಾರಚನೆ, ವಿಸ್ತರಣೆ ವಿಚಾರ ನನಗೆ ಗೊತ್ತಿಲ್ಲ. ಆ ವಿಷಯ ಬಂದರೆ ನಾವಿಬ್ಬರು ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ದೆಹಲಿಗೆ ಹೋಗಿ ತೀರ್ಮಾನ ಮಾಡಲಾಗುವುದು. ಯಾವಾಗ ಅಂತ ಹೇಳಲಾಗದು. ಯಾರ್ಯಾರೋ, ಇನ್ಯಾರನ್ನು ಭೇಟಿ ಮಾಡುತ್ತಾರೆಂದು ಹೇಳಿದರೆ ನಾನು ಪ್ರತಿಕ್ರಿಯೆ ನೀಡಲು ಆಗಲ್ಲ.
-ಸಿದ್ದರಾಮಯ್ಯ ಮುಖ್ಯಮಂತ್ರಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com