ಬರ ಪರಿಶೀಲನೆಗೆ ಕೇಂದ್ರ ತಂಡ : ಪ್ರಹ್ಲಾದ ಜೋಶಿ

ರಾಜ್ಯದಲ್ಲಿ ಬರ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಬಂದು ಇಲ್ಲಿನ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ....
ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ
Updated on: 

ಬೆಂಗಳೂರು: ರಾಜ್ಯದಲ್ಲಿ ಬರ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಬಂದು ಇಲ್ಲಿನ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಖಚಿತಪಡಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆಗಸ್ಟ್ 24 ರಂದು ಸರ್ವಪಕ್ಷ ನಿಯೋಗ ಪ್ರಧಾನಿಯವರನ್ನು ಭೇಟಿ ಮಾಡಿದಾಗ ಒಂದು ಅರ್ಜಿಯನ್ನು ಸಲ್ಲಿಸಿರುವುದನ್ನು ಬಿಟ್ಟರೆ ರಾಜ್ಯ ಸರ್ಕಾರ ಯಾವುದೇ ವರದಿಯನ್ನೂ ಕೇಂದ್ರಕ್ಕೆ ಸಲ್ಲಿಸಿಲ್ಲ. ಬರ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸಹಕಾರ ನೀಡುತ್ತಿಲ್ಲ ಎಂಬ ಆರೋಪದಲ್ಲೇ ಕಾಲಕಳೆಯುತ್ತಿದೆ. ಇದು ಸತ್ಯಕ್ಕೆ ದೂರವಾಗಿದ್ದು, ರಾಜ್ಯ ಸರ್ಕಾರ ಮನವಿ ಮಾಡದಿದ್ದರೂ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸಲಿದೆ ಎಂದರು.

ಕರ್ನಾಟಕದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಕೇಂದ್ರದ ಹಣವೂ ಸೇರಿದಂತೆ ರಾಜ್ಯದ ಖಜಾನೆಯಲ್ಲಿ ರೂ.1,954 ಕೋಟಿ ಇದೆ. ಆದರೆ, ಸರ್ಕಾರ ಪ್ರಸಕ್ತ ವರ್ಷದ ಆಗಸ್ಟ್ ಅಂತ್ಯದೊಳಗೆ ರೂ.400 ಕೋಟಿಯನ್ನಷ್ಟೆ ಖರ್ಚು ಮಾಡಿದೆ. ಉಳಿದ ಹಣವನ್ನು ಯಾಕೆ ಬಳಕೆ ಮಾಡಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಪಪಡಿಸಬೇಕು. ಈ ಬಗ್ಗೆ ಲೆಕ್ಕ ಕೇಳಿದರೆ ಗ್ರಾಮೀಣಾಭಿವೃದ್ಧಿ ಸಚಿವರು ಯಾವ್ಯಾವುದೋ ಲೆಕ್ಕ ನೀಡುತ್ತಾರೆ. ಜಿಲ್ಲಾ ಮಟ್ಟದಲ್ಲಿ ವಿಚಾರಿಸಿದರೆ ಜಿಲ್ಲಾಧಿಕಾರಿಗಳು ಖಜಾನೆಯಲ್ಲಿ ಹಣವಿಲ್ಲ ಎನ್ನುತ್ತಾರೆ.

ಕಂದಾಯ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ತಮ್ಮ ಕ್ಷೇತ್ರದಲ್ಲೇ ಕಾಲ ಕಳೆಯುತ್ತಿದ್ದು ಬರಪೀಡಿತ ತಾಲೂಕುಗಳನ್ನು ಮರೆತಿದ್ದಾರೆ ಎಂದು ಟೀಕಿಸಿದರು. ನಮ್ಮವರೇ ಮೇಯರ್: ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜನಾದೇಶ ಸಿಕ್ಕರೂ ಜೆಡಿಎಸ್ ಸಖ್ಯದೊಂದಿಗೆ ಗದ್ದುಗೆ ಹಿಡಿಯಲು ಹೊರಟಿದೆ. ಬಿಬಿಎಂಪಿ ಯಲ್ಲಿ ಅತಿ ಹೆಚ್ಚು ಸೀಟು ಪಡೆದಿರುವ ಬಿಜೆಪಿಯವರೇ ಈ ಬಾರಿ ಮೇಯರ್ ಆಗುತ್ತಾರೆ. ಅದು ಹೇಗೆ ಎಂಬುದನ್ನು ಚುನಾವಣಾ ದಿನದಂದೇ ನೋಡಿ ಎಂದು ಪ್ರತಿಪಕ್ಷದವರಿಗೆ ಟಾಂಗ್ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com