ಸಿಎಂ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮಧ್ಯೆ ಭಿನ್ನಮತ

ವಿದ್ಯುತ್ ಖರೀದಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಧ್ಯೆ ತುಸು ಭಿನ್ನಾಭಿಪ್ರಾಯ ಸೃಷ್ಟಿಯಾಗಿದ್ದು, ಈ ಹಗ್ಗ-ಜಗ್ಗಾಟ ರಾಜ್ಯವನ್ನು ಮತ್ತಷ್ಟು ಕತ್ತಲೆಗೆ ನೂಕುವ ಮುನ್ಸೂಚನೆ ಲಭ್ಯವಾಗಿದೆ...
ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಡಿಕೆ ಶಿವಕುಮಾರ್
ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಡಿಕೆ ಶಿವಕುಮಾರ್

ಬೆಂಗಳೂರು: ವಿದ್ಯುತ್ ಖರೀದಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಧ್ಯೆ ತುಸು ಭಿನ್ನಾಭಿಪ್ರಾಯ ಸೃಷ್ಟಿಯಾಗಿದ್ದು, ಈ ಹಗ್ಗ-ಜಗ್ಗಾಟ ರಾಜ್ಯವನ್ನು  ಮತ್ತಷ್ಟು ಕತ್ತಲೆಗೆ ನೂಕುವ ಮುನ್ಸೂಚನೆ ಲಭ್ಯವಾಗಿದೆ.

ವಿದ್ಯುತ್ ಖರೀದಿ `ವ್ಯವಹಾರ'ದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆ ಪೂರ್ಣಪ್ರಮಾಣ ದಲ್ಲಿ ಸಹಮತ ಏರ್ಪಟ್ಟಿಲ್ಲ.  ಪೂರೈಕೆ ಮತ್ತು ಬೇಡಿಕೆ ವ್ಯತ್ಯಯ ಉತ್ಪ್ರೇಕ್ಷೆಯಿಂದ ಕೂಡಿರುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯಕ್ಕೆ ಸಿಎಂ ಸಿದ್ದರಾಮಯ್ಯ ಅಂಟಿಕೊಂಡಿದ್ದು, ಇಂಧನ ಸಚಿವರು ಅಪೇಕ್ಷಿಸಿದಷ್ಟು ಪ್ರಮಾಣದಲ್ಲಿ ಖರೀದಿಗೆ ಅನುಮತಿ ನೀಡದಿರಲು  ನಿರ್ಧರಿಸಿದ್ದಾರೆ. ಈ ಮುಸುಕಿನ ಗುದ್ದಾಟ ನೇರವಾಗಿ ರಾಜ್ಯದ ಜನತೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಖರೀದಿ ಪ್ರಕ್ರಿಯೆಗೆ ಸಿದ್ದರಾಮಯ್ಯ ಸಕಾರಾತ್ಮಕ ಪ್ರತಿಕ್ರಿಯೆ ನೀಡದಿರುವ  ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಹಾಗೂ ಖಾಸಗಿಯವರಿಂದ ವಿದ್ಯುತ್ ಖರೀದಿ ಮಾಡದೇ ಇರಲು ನಿರ್ಧರಿಸಿರುವ ಇಂಧನ ಇಲಾಖೆ, ಲೋಡ್ ಶೆಡ್ಡಿಂಗ್ ಮೂಲಕವೇ ಕೊರತೆ ನೀಗಿಸಿಕೊಳ್ಳುವ  ನಿರ್ಧಾರಕ್ಕೆ ಬಂದಿದೆ.

ವ್ಯತ್ಯಯದ ಮೇಲೆ ಅನುಮಾನ
ರಾಜ್ಯದ ಜಲಾಶಯಗಳ ಸಂಗ್ರಹಣಾ ಸಾಮರ್ಥ್ಯ ಹದಗೆಡುತ್ತಿದೆ. ಉಷ್ಣ ವಿದ್ಯುತ್ ಸ್ಥಾವರಗಳಿಂದ ಪೂರೈಕೆಯಾಗುತ್ತಿದ್ದ 2800 ಮೆ.ವ್ಯಾ. ವಿದ್ಯುತ್ ಪೂರೈಕೆ ವ್ಯತ್ಯಯದ ಮೇಲೆ ಈಗ ಚರ್ಚೆ  ಆರಂಭವಾಗಿದೆ. ಆರ್‍ಟಿಪಿಎಸ್ ನ 3ನೇ ಘಟಕದಿಂದ ಪೂರೈಕೆಯಾಗುತ್ತಿದ್ದ 200 ಮೆಗಾ ವ್ಯಾಟ್, ಬಿಟಿಪಿಎಸ್ 1ನೇ ಘಟಕದ 500 ಮೆಗಾ ವ್ಯಾಟ್, ಯುಪಿಸಿಎಲ್ 1ನೇ ಘಟಕದ 600 ಮೆಗಾ ವ್ಯಾಟ್, ಕೂಡುಕುಲಂ 1ನೇ ಘಟಕದ 1000 ಮೆಗಾ ವ್ಯಾಟ್ ಹಾಗೂ ಸಿಂಹಾದ್ರಿಯಿಂದ ಪೂರೈಕೆಯಾಗುತ್ತಿದ್ದ 500 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆ ಈಗ ಸ್ಥಗಿತಗೊಂಡಿದೆ.

ರು.4000 ಕೋಟಿ ವಹಿವಾಟು
ಆದರೆ ವಿದ್ಯುತ್ ಖರೀದಿಗೆ ರಾಜ್ಯ ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ಸುಮಾರು 9000 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, 5600 ಮೆಗಾ ವ್ಯಾಟ್ ಮಾತ್ರ  ಪೂರೈಕೆಯಾಗುತ್ತಿದೆ. ಸುಮಾರು 3400 ಮೆಗಾ ವ್ಯಾಟ್ ವ್ಯತ್ಯಾಸವಿದೆ. ವಿದ್ಯುತ್ ಖರೀದಿಗಾಗಿ ರಾಜ್ಯ ಸರ್ಕಾರ ಸುಮಾರು ರು.4000 ಕೋಟಿ ವೆಚ್ಚ ಮಾಡಬೇಕಾಗುತ್ತದೆ. ಈಗಾಗಲೇ 900 ಮೆಗಾ  ವ್ಯಾಟ್ ಖರೀದಿಗೆ ಒಪ್ಪಿಗೆ ನೀಡಲಾಗಿದ್ದು, ಒಂದು ಅಂದಾಜಿನ ಪ್ರಕಾರ ಪ್ರತಿ ದಿನ ರು.10 ಕೋಟಿ ವಿದ್ಯುತ್ ಖರೀದಿಗೆ ವೆಚ್ಚವಾಗುತ್ತದೆ. ಉಷ್ಣ ವಿದ್ಯುತ್ ಸ್ಥಾವರಗಳೇ  ಪರಿಹಾರ ಎಂದು ಸಿಎಂ  ಸಲಹೆ ನೀಡಿದ್ದಾರೆ. ಆದರೆ ಉಷ್ಣ ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಕೋಲ್ ಬ್ಲಾಕ್ ರಾಜ್ಯದಲ್ಲಿ ಇಲ್ಲ. ಪೂರೈಕೆಯ ಬಹುಭಾಗವನ್ನು ಈ ಮೂಲದಿಂದ ಅವಲಂಭಿಸುವುದು ಸಲ್ಲ. ತಾಂತ್ರಿಕ  ದೋಷಗಳಿಂದ ಘಟಕಗಳು ಕೈಕೊಟ್ಟರೆ ರಾಜ್ಯ ತತ್ತರಿಸಬೇಕಾಗುತ್ತದೆ. ಜತೆಗೆ ರಾಜ್ಯಕ್ಕೆ ಅಗತ್ಯವಾದ ಕಲ್ಲಿದ್ದಲು ಪೂರೈಕೆಗಾಗಿ ನಾನು ಈಗಾಗಲೇ ಸಾಕಷ್ಟು ಶ್ರಮ ವಹಿಸಿದ್ದೇನೆ. ಖುದ್ದು  ಭೇಟಿಯಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com