ಚುನಾವಣೆ ಬಳಿಕ ಜೆಡಿಎಸ್ ನಿಂದ ಶಾಸಕ ಜಮೀರ್, ಅನ್ಸಾರಿ ಉಚ್ಚಾಟನೆ?

ಜೆಡಿಎಸ್ ನಲ್ಲಿ ಭುಗಿಲೆದ್ದಿರುವ ಭಿನ್ನಮತೀಯರ ಹಾವಳಿ ತಡೆಗಟ್ಟಲು ಪಕ್ಷದ ವರಿಷ್ಠರು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಭಿನ್ನಮತೀಯ ಮುಖಂಡರಾದ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಇಕ್ಬಾಲ್ ಅನ್ಸಾರಿ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ...
ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಶಾಸಕ ಜಮೀರ್ ಅಹ್ಮದ್ ಖಾನ್
ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಶಾಸಕ ಜಮೀರ್ ಅಹ್ಮದ್ ಖಾನ್

ಬೆಂಗಳೂರು: ಜೆಡಿಎಸ್ ನಲ್ಲಿ ಭುಗಿಲೆದ್ದಿರುವ ಭಿನ್ನಮತೀಯರ ಹಾವಳಿ ತಡೆಗಟ್ಟಲು ಪಕ್ಷದ ವರಿಷ್ಠರು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಭಿನ್ನಮತೀಯ ಮುಖಂಡರಾದ ಶಾಸಕ ಜಮೀರ್ ಅಹ್ಮದ್  ಖಾನ್ ಹಾಗೂ ಇಕ್ಬಾಲ್ ಅನ್ಸಾರಿ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಮೂಲಗಳ ಪ್ರಕಾರ ಪ್ರಸ್ತುತ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿರುವುದರಿಂದ ಪಕ್ಷದ ಪ್ರಮುಖರು ಚುನಾವಣೆಯಲ್ಲಿ ನಿರತರಾಗಿದ್ದು, ಈ ಬಗ್ಗೆ  ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಈ ಇಬ್ಬರೂ ಭಿನ್ನಮತೀಯ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು  ನಿರ್ಧಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಜಮೀರ್ ಅಹಮದ್ ಖಾನ್ ಸೇರಿ ಹಲವು ಶಾಸಕರು, ಮುಖಂಡರು ವರಿಷ್ಠರ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆ ನೀಡುವ ಮೂಲಕ  ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಇಂಥಹ ವರ್ತನೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಯಾರನ್ನೋ ನಂಬಿಕೊಂಡು ಪಕ್ಷ ಕಟ್ಟುತ್ತಿಲ್ಲ ಎಂದು ಈ  ಹಿಂದೆ ದೇವೇಗೌಡರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಭಿನ್ನಮತೀಯ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ ಎಂದು  ಮೂಲಗಳು ತಿಳಿಸಿವೆ.

ಹೆಬ್ಬಾಳ ಉಪ ಚುನಾವಣೆ ಬಗ್ಗೆ ಜಮೀರ್ ನೀಡಿರುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ದೇವೇಗೌಡರು, ಪ್ರಚಾರ ಕಣದಲ್ಲೇ ಅವರ ವಿರುದ್ಧ ಗುಡುಗಿದ್ದರು. ಪಕ್ಷದ ಮುಖಂಡರೊಂದಿಗೆ  ಭಾನುವಾರ ರಾತ್ರಿ ಚರ್ಚಿಸಿರುವ ಅವರು, ಭಿನ್ನಮತೀಯರನ್ನು ಇಟ್ಟುಕೊಂಡು ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಹೆಬ್ಬಾಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸದೇ, ದೂರ ಉಳಿಯುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ ಕಲ್ಪಿಸಿರುವ ಶಾಸಕ ಜಮೀರ್ ಅಹ್ಮದ್  ಹಾಗೂ ವರಿಷ್ಠರ ವಿರುದ್ಧ ಹೇಳಿಕೆ ನೀಡುತ್ತಿರುವ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರನ್ನು ಉಚ್ಚಾಟಿಸಲು ವರಿಷ್ಠರು ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪ್ರಸ್ತುತ  ಅವರನ್ನು ಉಚ್ಚಾಟಿಸಿದರೆ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂಬ ಏಕೈಕ ಕಾರಣಕ್ಕೆ ಅವರನ್ನು ಪಕ್ಷದಲ್ಲಿ ಇನ್ನೂ ಉಳಿಸಿಕೊಳ್ಳಲಾಗಿದೆ.

ಹೀಗಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಂತರ ಕಠಿಣ ಕ್ರಮ ಕೈಗೊಳ್ಳಲು ದೇವೇಗೌಡರು ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಎರಡು ಕ್ಷೇತ್ರದಲ್ಲಿ ಜೆಡಿಎಸ್  ಸೋತರೂ ಪರವಾಗಿಲ್ಲ. ಪಕ್ಷ ವಿರೋಧಿಗಳನ್ನು ಕೈಬಿಡಬೇಕೆಂಬುದು ಅವರ ನಿಲುವಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com