ಕೈ ಸೋಲಿಗೆ ಕಾರಣವಾಯ್ತೇ ವಾಚ್: ಸಿದ್ದು ಸರ್ಕಾರಕ್ಕೆ ಇದು ಬ್ಯಾಡ್ ಟೈಮ್?

ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ನು ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಪಕ್ಷದ ಈ ಸೋಲಿಗೆ ಸಿದ್ದರಾಮಯ್ಯ ಅವರ ವಾಚು ವಿವಾದ ಕಾರಣ ಎಂಬ ವಾದಗಳೂ ಕೇಳಿಬರುತ್ತಿವೆ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ನು ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಪಕ್ಷದ ಈ  ಸೋಲಿಗೆ ಸಿದ್ದರಾಮಯ್ಯ ಅವರ ವಾಚು ವಿವಾದ ಕಾರಣ ಎಂಬ ವಾದಗಳೂ ಕೇಳಿಬರುತ್ತಿವೆ.

ಕೆಲ ಮಾಧ್ಯಮಗಳಲ್ಲಿ ಚರ್ಚಿತವಾದಂತೆ ಲೋಹಿಯಾವಾದವನ್ನು ಪ್ರತಿಪಾದಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಲಾಸಿ ಜೀವನ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದ ಕುಮಾರಸ್ವಾಮಿ ಇದಕ್ಕೆ ಉದಾಹರಣೆಯಾಗಿ ಅವರ ಕೈಯಲ್ಲಿದ್ದ ವಜ್ರ ಖಚಿತ ವಾಚನ್ನು ತೋರಿಸಿದ್ದಾರೆ. ಇನ್ನು ಹೆಬ್ಬಾಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ನೊಂದಿಗೆ ಸತತ ಚರ್ಚೆ ನಡೆಸಿ  ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಅವರದೇ ಪಕ್ಷದ ಹಿರಿಯ ಮುಖಂಡರಿಂದ ಹಿನ್ನಡೆಯಾಗಿತ್ತು. ಅಂತಿಮ ಸಮಯದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಬದಲಾವಣೆ  ಮಾಡಿತ್ತು. ಇದು ಬಹುಶಃ ಮತದಾರರ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಎಂದು ಕೆಲ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೂಲಕಾಂಗ್ರೆಸ್ಸಿಗರ ಅಸಹನೆ, ಕಾರ್ಯಕರ್ತರ ಹತಾಶೆ, ಹಿರಿಯ ನಾಯಕರ ಅಸಮಾಧಾನದ ಮಧ್ಯೆಯೂ ನಾಯಕತ್ವ ಬದಲಾವಣೆ ಕೂಗಿಗೆ ಸಮರ್ಥನೆ ಸಿಗದೆ ಒಳಗೊಳಗೇ ಕುದಿಯುತ್ತಿದ್ದ   ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಉಪಚುನಾವಣೆಯ ವ್ಯತಿರಿಕ್ತ ಫಲಿತಾಂಶ ಮಹತ್ವದ ಆಂತರಿಕ ವಿದ್ಯಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೀಗ ಮತ್ತೆ ನಾಯಕತ್ವ ಬದಲಾವಣೆ ಪರ್ವಕ್ಕೆ   ಕರ್ನಾಟಕ ಕಾಂಗ್ರೆಸ್ ಸಾಕ್ಷಿಯಾಗುವ ಸಾಧ್ಯತೆ ಸ್ಪಷ್ಟವಾಗಿ ಗೋಚರಿಸತೊಡಗಿದೆ. ಎರಡೂವರೆ ವರ್ಷ ಕಾಲ ಸುಸೂತ್ರ ಅಧಿಕಾರ ಅನುಭವಿಸಿದ ಬಳಿಕ ಸರಣಿ ಹಿನ್ನಡೆ ಕಾಣುತ್ತಿರುವುದು ಸಿಎಂ  ಸಿದ್ದರಾಮಯ್ಯ ನೆಮ್ಮದಿ ಇನ್ನೆಷ್ಟು ದಿನ ಎನ್ನುವ ಚರ್ಚೆಗೆ ಮಹತ್ವ ತಂದುಕೊಟ್ಟಿದೆ.

ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷವೇ ಮೇಲುಗೈ ಸಾಧಿಸುವ ಹಲವು ವರ್ಷಗಳ ಪರಂಪರೆಗೆ ಪ್ರಸಕ್ತ ಉಪಚುನಾವಣೆ ವ್ಯತಿರಿಕ್ತವಾದ ಫಲಿತಾಂಶ ನೀಡಿದ್ದು, ಕಾಂಗ್ರೆಸ್ ಪಾಲಿಗೆ  ಮರ್ಮಾಘಾತ ನೀಡಿದೆ. ಸಹಜವಾಗಿಯೇ ಈ ಫಲಿತಾಂಶ ಸರ್ಕಾರದ ನಾಯಕತ್ವ ವಹಿಸಿರುವ ಸಿದ್ದರಾಮಯ್ಯ ಅವರಿಗೆ ಮುಖಭಂಗ ತಂದಿದ್ದು, ಸರ್ಕಾರದ ಕಾರ್ಯವೈಖರಿಗೆ ಮಧ್ಯಂತರ  ಜನಾದೇಶ ಎಂದೇ ಭಾವಿಸಲಾದ ಉಪಚುನಾವಣೆ ಫಲಿತಾಂಶ ನಾಯಕತ್ವ ಬದಲಾವಣೆ ಕೂಗನ್ನು ಮತ್ತೆ ಬಲಪಡಿಸುವಂತೆ ಮಾಡಿದೆ. ಮುಂದಿನ ಪರಿಣಾಮಗಳು ಮತ್ತು ಬೆಳವಣಿಗೆಗಳು  ಸಹಜವಾಗಿ ಎಲ್ಲರಲ್ಲಿ ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com